ಎಎಪಿ ಪಕ್ಷ ತೊರೆದ ಸಂಸದ ರಾಘವ್ ಚಡ್ಡಾ
- ಎಎಪಿಗೆ ಗುಡ್ಬೈ ಹೇಳಿದ 7 ರಾಜ್ಯಸಭಾ ಸದಸ್ಯರು
- ಅವರ ಪಾಪದ ಕೃತ್ಯಗಳಲ್ಲಿ ಭಾಗಿಯಾಗಲು ನನ್ನ ಮನಸ್ಸು ಒಪ್ಪೋದಿಲ್ಲ
- ಪತ್ರಿಕಾಗೋಷ್ಠಿಯಲ್ಲಿ ಪಕ್ಷ ತೊರೆಯಲು ಕಾರಣ ಬಹಿರಂಗಪಡಿಸಿದ ರಾಘವ್ ಚಡ್ಡಾ
ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆದು ಇದೀಗ ಬಿಜೆಪಿ ಸೇರುವುದಾಗಿ ಓಪನ್ ಹೇಳಿಕೆ ನೀಡಿರುವ ಸಂಸದ ರಾಘವ್ ಚಡ್ಡಾ ಸದ್ಯ ತಮ್ಮ ಶಾಕಿಂಗ್ ನಿರ್ಧಾರದ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದಾರೆ.
ತಮ್ಮ ಹೇಳಿಕೆಯಿಂದ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ರಾಘವ್, ತಾವೊಬ್ಬರೆ ಅಲ್ಲದೇ, ಒಟ್ಟು 7 ರಾಜ್ಯಸಭಾ ಸದಸ್ಯರು ಅರವಿಂದ್ ಕೇಜ್ರಿವಾಲ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆ ಆಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ, ಎಎಪಿ ಮಾಡುವ ಕ್ರೈಮ್ಗಳಲ್ಲಿ ನಾನು ಭಾಗಿಯಾಗಲು ಕಿಂಚಿತ್ತು ಇಷ್ಟವಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಡ್ಡಾ, ಒಬ್ಬ ಸರಿಯಾದ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದ. ಈ ಎಎಪಿಯ ಬೆಳವಣಿಗೆಗೆ ನನ್ನ 15 ವರ್ಷಗಳ ಯೌವನ, ಬೆವರು, ರಕ್ತವನ್ನು ನೀಡಿದ್ದೇನೆ. ಇಂತಹ ಒಂದು ಪಾರ್ಟಿ, ಈಗ ತನ್ನ ತತ್ವ, ಮೌಲ್ಯಗಳು ಮತ್ತು ಮೂಲ ನೈತಿಕತೆಯನ್ನೇ ಮರೆತು, ವಿಮುಖವಾಗಿ ಸಾಗುತ್ತಿರುವುದು ನೋಡಲು ಅಸಾಧ್ಯ. ರಾಷ್ಟ್ರದ ಹಿತಾಸಕ್ತಿಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದರು.
ನಾನು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಕ್ಕೆ ಅಸಲಿ ಕಾರಣವೇ ಬೇರೆ. ಅವರ ಪಾಪದ ಕೃತ್ಯಗಳಲ್ಲಿ ಭಾಗಿಯಾಗಲು ನನ್ನ ಮನಸ್ಸು ಒಪ್ಪಲಿಲ್ಲ. ಎಎಪಿ ತಾಳಕ್ಕೆ ಕುಣಿಯದ ಕಾರಣ, ಅವರ ಸ್ನೇಹಕ್ಕೆ ನಾನು ಅರ್ಹನಾಗಿರಲಿಲ್ಲ. ಈ ಸಂದರ್ಭದಲ್ಲಿ, ನಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿದ್ದವು. 15ರಿಂದ 16 ವರ್ಷಗಳಲ್ಲಿ ನಮ್ಮ ಸಾರ್ವಜನಿಕ ರಾಜಕೀಯ ಕೆಲಸವನ್ನು ತ್ಯಜಿಸುವುದು ಅಥವಾ ನಮ್ಮ ಶಕ್ತಿ ಮತ್ತು ಅನುಭವದೊಂದಿಗೆ ಪಾಸಿಟಿವ್ ಆಗಿ ರಾಜಕೀಯ ಮುಂದುವರಿಸುವುದು ಮಾತ್ರ ಎಂದರು,(ಏಜೆನ್ಸೀಸ್).