Raghav Chadha Joins BJP  
ದೇಶ

ಎಎಪಿಗೆ ಬಿಗ್ ಶಾಕ್: ಬಿಜೆಪಿ ಸೇರಿದ ರಾಘವ್ ಚಡ್ಡಾ! ಜೊತೆಯಲ್ಲೇ 2/3 ಭಾಗ ಸಂಸದರ ವಲಸೆ | Raghav Chadha Joins BJP

ನವದೆಹಲಿ: ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಾರ್ಟಿಯ (ಎಎಪಿ) ಪ್ರಭಾವಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯಸಭೆಯ ಒಟ್ಟು ಎಎಪಿ ಸಂಸದರ ಪೈಕಿ ಮೂರನೇ ಎರಡರಷ್ಟು (2/3) ಸದಸ್ಯರೊಂದಿಗೆ ತಾವು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರುವುದಾಗಿ ಘೋಷಿಸಿ(Raghav Chadha Joins BJP) ಆಘಾತ ನೀಡಿದ್ದಾರೆ.
ಚಡ್ಡಾ ಸೇರಿದಂತೆ ಪಕ್ಷದ ಇತರ ಪ್ರಮುಖ ನಾಯಕರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರ ಸಮ್ಮುಖದಲ್ಲೇ ಈ ನಿರ್ಧಾರ ಪ್ರಕಟಿಸಿದರು. ಇತ್ತೀಚೆಗಷ್ಟೇ ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ಅವರನ್ನು ತೆಗೆದುಹಾಕಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಸಂವಿಧಾನದ ಅವಕಾಶ ಬಳಸಿ ವಿಲೀನ

"ನಾವು ರಾಜ್ಯಸಭೆಯ 2/3 ಭಾಗದಷ್ಟು ಎಎಪಿ ಸದಸ್ಯರು ಸೇರಿ ಭಾರತದ ಸಂವಿಧಾನದ ಅವಕಾಶಗಳನ್ನು ಬಳಸಿಕೊಂಡು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ," ಎಂದು ಚಡ್ಡಾ ತಿಳಿಸಿದರು. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಈ 'ವಿಲೀನ'ದ ತಂತ್ರವನ್ನು ಬಳಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಸಮಾಧಾನದ ಸ್ಫೋಟ

ಕಳೆದ ಕೆಲವು ದಿನಗಳಿಂದ ಎಎಪಿ ಹೈಕಮಾಂಡ್ ಮತ್ತು ರಾಘವ್ ಚಡ್ಡಾ ನಡುವೆ ಶೀತಲ ಸಮರ ನಡೆಯುತ್ತಿತ್ತು. ಸಂಸತ್ತಿನಲ್ಲಿ ಚಡ್ಡಾ ಅವರಿಗೆ ನೀಡಲಾಗಿದ್ದ ಜವಾಬ್ದಾರಿಗಳನ್ನು ಕಸಿದುಕೊಂಡಿದ್ದರಿಂದ ಅವರು ತೀವ್ರ ಬೇಸರಗೊಂಡಿದ್ದರು. "ಪಕ್ಷಕ್ಕಾಗಿ ಹಗಲಿರುಳು ದುಡಿದ ನಾಯಕರಿಗೆ ಬೆಲೆ ಇಲ್ಲದಂತಾಗಿದೆ. ಸಿದ್ಧಾಂತಕ್ಕಿಂತ ವೈಯಕ್ತಿಕ ನಿರ್ಧಾರಗಳೇ ಪ್ರಾಮುಖ್ಯತೆ ಪಡೆಯುತ್ತಿವೆ" ಎಂಬ ಅಸಮಾಧಾನ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.

ರಾಷ್ಟ್ರ ರಾಜಕಾರಣದಲ್ಲಿ ಸಂಚಲನ

ಚಡ್ಡಾ ಅವರ ಈ ನಡೆ ದೆಹಲಿ ಮತ್ತು ಪಂಜಾಬ್ ಸರ್ಕಾರಗಳ ಮೇಲೆ ತಕ್ಷಣದ ಪರಿಣಾಮ ಬೀರದಿದ್ದರೂ, ರಾಷ್ಟ್ರಮಟ್ಟದಲ್ಲಿ ಆಮ್ ಆದ್ಮಿ ಪಾರ್ಟಿಯ ಬಲ ಕುಸಿಯುವಂತೆ ಮಾಡಿದೆ. ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ಚಡ್ಡಾ ಅವರ ನಿರ್ಗಮನವು ಅರವಿಂದ್ ಕೇಜ್ರಿವಾಲ್ ಅವರಿಗೆ ದೊಡ್ಡ ಹೊಡೆತವೆಂದೇ ಭಾವಿಸಲಾಗಿದೆ.
ರಾಘವ್ ಚಡ್ಡಾ ಅವರೊಂದಿಗೆ ಸಂದೀಪ್ ಪಾಠಕ್ ಅವರಂತಹ ಸಂಘಟನಾ ಚತುರರು ಬಿಜೆಪಿಗೆ ಹತ್ತಿರವಾಗಿರುವುದು ಎಎಪಿಯ ಅಡಿಪಾಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ಮುಂಬರುವ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ತಿರುವು ಪಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​​).