Raghav Chadha | ಆಪ್ ಸಂಸದ ರಾಘವ್ ಚಡ್ಡಾ
ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭೆಯ ಉಪ ನಾಯಕ ಸ್ಥಾನದಿಂದ ಪದಚ್ಯುತಗೊಂಡಿರುವ ಸಂಸದ ರಾಘವ್ ಚಡ್ಡಾ ( Raghav Chadha), ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸುವ ತಮ್ಮ ಎಲ್ಲಾ ಹಳೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಿಂದ ಅಳಿಸಿಹಾಕಿದ್ದಾರೆ ಎಂದು ಎಎಪಿ ಗಂಭೀರ ಆರೋಪ ಮಾಡಿದೆ.
ಶನಿವಾರ ತಡರಾತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಎಪಿ ನಾಯಕ ಸೌರಭ್ ಭಾರದ್ವಾಜ್, ಚಡ್ಡಾರ ಟೈಮ್‌ಲೈನ್ ಈಗ ಸಂಪೂರ್ಣವಾಗಿ ಕ್ಲೀನ್ ಆಗಿದೆ ಎಂದು ಸ್ಕ್ರೀನ್‌ಶಾಟ್‌ಗಳ ಸಮೇತ ಪೋಸ್ಟ್ ಮಾಡಿದ್ದಾರೆ.
ಸಂಸದ ಚಡ್ಡಾರ ಖಾತೆಯಲ್ಲಿ ಬಿಜೆಪಿ ಮತ್ತು ಮೋದಿ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಯಾವುದೇ ಹಳೆಯ ಟೀಕೆಗಳು ಕಾಣಿಸುತ್ತಿಲ್ಲ, ಬದಲಾಗಿ ಪ್ರಧಾನಿಯನ್ನು ಹೊಗಳುವ ಎರಡು ಪೋಸ್ಟ್‌ಗಳು ಮಾತ್ರ ಉಳಿದಿವೆ ಎಂದು ಭಾರದ್ವಾಜ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಕೇವಲ ನಿಯಮಿತ ಪ್ರಕ್ರಿಯೆ ಅಲ್ಲ, ಬದಲಾಗಿ ತಮ್ಮ ಹಳೆಯ ಇಮೇಜ್ ಅಳಿಸಿ ಹಾಕಿ ಹೊಸ ವ್ಯಕ್ತಿತ್ವ ಪ್ರಸ್ತುತಪಡಿಸಲು ನಡೆಸಿದ ಸರ್ಜಿಕಲ್ ಡಿಲೀಟ್ ಎಂದು ಕುಟುಕಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಎಎಪಿ ಮತ್ತು ಚಡ್ಡಾ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಂತಾಗಿದೆ.
ಸಂಸದ ರಾಘವ್ ಚಡ್ಡಾ ಹೇಳಿದ್ದೇನು..?
ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಚಡ್ಡಾರನ್ನು ಉಪ ನಾಯಕ ಸ್ಥಾನದಿಂದ ಪದಚ್ಯುತಗೊಳಿಸಿ ಅವರ ಬದಲಿಗೆ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿದ್ದ ಚಡ್ಡಾ, ತಾವು ತೆರಿಗೆ ಸುಧಾರಣೆ ಮತ್ತು ವಿಮಾನ ನಿಲ್ದಾಣದ ಆಹಾರ ಬೆಲೆ ಏರಿಕೆಯಂತಹ ಜನಪರ ಸಮಸ್ಯೆಗಳನ್ನು ಎತ್ತುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಆಪ್ ನಾಯಕರು, ಚಡ್ಡಾ ಕೇಂದ್ರವನ್ನು ಟೀಕಿಸುವುದನ್ನು ತಪ್ಪಿಸಲು ಕೇವಲ ಸಾಫ್ಟ್ ಪಿಆರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಚಡ್ಡಾ ನಡೆಯನ್ನು ಟೀಕಿಸಿದ್ದು, ಅವರು ಪಕ್ಷದ ನಿಲುವಿಗೆ ವಿರುದ್ಧವಾಗಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ಸಂಸತ್ತಿನ ವಾಕ್‌ಔಟ್‌ಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ದೂರಿದ್ದಾರೆ.
ದೆಹಲಿ ಮಾಜಿ ಸಿಎಂ ಅತಿಶಿ ಕೂಡ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯು ವಿರೋಧ ಪಕ್ಷದ ನಾಯಕರನ್ನು ಬೆದರಿಸಿ ಅಥವಾ ಆಮಿಷವೊಡ್ಡಿ ತನ್ನತ್ತ ಸೆಳೆಯುವ ತಂತ್ರವನ್ನು ಹೂಡಿದ್ದು, ರಾಘವ್ ಚಡ್ಡಾ ವಿಷಯದಲ್ಲೂ ಅದೇ ಆಗುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಶನಿವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಘವ್ ಚಡ್ಡಾ, ತಮ್ಮನ್ನು ತಾನು ಗಾಯಗೊಂಡ ಹುಲಿ ಎಂದು ಕರೆದುಕೊಂಡಿದ್ದಾರೆ.
ಘಾಯಲ್ ಹೂಂ ಇಸಿಲಿಯೇ ಘಾತಕ್ ಹೂಂ" (ಗಾಯಗೊಂಡಿರುವುದರಿಂದಲೇ ನಾನು ಅಪಾಯಕಾರಿ) ಎಂಬ ಬಾಲಿವುಡ್ ಸಂಭಾಷಣೆಯನ್ನು ಉಲ್ಲೇಖಿಸಿರುವ ಅವರು, ವಿರೋಧ ಪಕ್ಷಗಳ ವಾಕ್‌ಔಟ್‌ನಲ್ಲಿ ತಾವು ಭಾಗವಹಿಸಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ನಿರ್ಣಯಕ್ಕೆ ಎಎಪಿಯ ಇತರ ಸಂಸದರು ಸಹಿ ಮಾಡದಿದ್ದರೂ ಕೇವಲ ತಮ್ಮನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಒಳಗಿನ ಈ ದೊಡ್ಡ ಮಟ್ಟದ ಕಂದಕ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಇಷ್ಟೆಲ್ಲಾ ಹೈಡ್ರಾಮಾಗಳು ನಡೆಯುತ್ತಿದ್ದರೂ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾತ್ರ ಈ ಬಗ್ಗೆ ಸಂಪೂರ್ಣ ಮೌನ ವಹಿಸಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ(ಏಜೆನ್ಸೀಸ್).