R Sreelekha | ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ 
ದೇಶ

R Sreelekha | ಮೊದಲ ಮಹಿಳಾ ಐಪಿಎಸ್​ ಅಧಿಕಾರಿ ಟು ಬಿಜೆಪಿ ವಿನ್ನಿಂಗ್​ ಕ್ಯಾಂಡಿಡೇಟ್​.. ಯಾರು ಈ ಶ್ರೀಲೇಖಾ..?

ತಿರುವನಂತಪುರಂ: ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ಆರ್. ಶ್ರೀಲೇಖಾ, ತಿರುವನಂತಪುರಂ ಮಹಾನಗರ ಪಾಲಿಕೆಯ ವಾರ್ಡ್ ನಂ 41 ರಿಂದ ಗೆಲುವು ಸಾಧಿಸುವ ಮೂಲಕ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಲೇಖಾ, ಸಿಪಿಐ-ಎಂ ಅಭ್ಯರ್ಥಿ ಅಮೃತಾ ಆರ್ ಅವರನ್ನು 708 ಮತಗಳಿಂದ ಸೋಲಿಸಿದ್ದಾರೆ.
1987 ರ ಬ್ಯಾಚ್‌ನ ಕೇರಳ ಕೇಡರ್ ಅಧಿಕಾರಿಯಾಗಿದ್ದ ಶ್ರೀಲೇಖಾ, ಕೇರಳ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಪ್ರಸ್ತುತ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.

ಆರ್ ಶ್ರೀಲೇಖಾ ಹಿನ್ನಲೆ....

ತಿರುವನಂತಪುರಂ ಮೂಲದ ಶ್ರೀಲೇಖಾ, ಶ್ರೀ ವಿದ್ಯಾಧಿರಾಜ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದರು. ಆ ಬಳಿಕ ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರೇಡ್ ಬಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 1987 ರಲ್ಲಿ. ತಮ್ಮ 26 ನೇ ವಯಸ್ಸಿನಲ್ಲಿ, ಭಾರತೀಯ ಪೊಲೀಸ್ ಸೇವೆಯಲ್ಲಿ (ಐಪಿಎಸ್) ಕೇರಳದ ಮೊದಲ ಮಹಿಳಾ ಅಧಿಕಾರಿಯಾಗುವ ಮೂಲಕ ನೂತನ ಇತಿಹಾಸ ಬರೆದರು.
33 ವರ್ಷಗಳ ಕಾಲ ತಮ್ಮ ಸುಧೀರ್ಘ ವೃತ್ತಿಜೀವನದಲ್ಲಿ, ಅವರು ಆಲಪ್ಪುಳ, ಪಥನಂತಿಟ್ಟ ಮತ್ತು ತ್ರಿಶೂರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದು, ಕೇಂದ್ರ ತನಿಖಾ ದಳದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ 2025

ಕೇರಳದ 941 ಗ್ರಾಮ ಪಂಚಾಯಿತಿಗಳ 17,337 ವಾರ್ಡ್‌ಗಳು, 87 ಪುರಸಭೆಗಳ 3,240 ವಾರ್ಡ್‌ಗಳು ಮತ್ತು ಆರು ಪುರಸಭೆ ನಿಗಮಗಳಿಗೆ ಸೇರಿದ 421 ವಾರ್ಡ್‌ಗಳಲ್ಲಿ 14 ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಮೊದಲ ಹಂತದ ಮತದಾನ ಡಿಸೆಂಬರ್ 9 ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಆಲಪ್ಪುಳ, ಇಡುಕ್ಕಿ ಮತ್ತು ಎರ್ನಾಕುಲಂನಲ್ಲಿ ನಡೆದಿದ್ದು, ಡಿಸೆಂಬರ್ 11 ರಂದು ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವಯನಾಡ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಮತದಾನ ನಡೆಯಿತು.

ಎನ್​ಡಿಎ ಗೆಲುವಿಗೆ ಪ್ರಧಾನಿ ಮೋದಿ ಖುಷ್​

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ ಧನ್ಯವಾದಗಳು, ತಿರುವನಂತಪುರಂ! ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ-ಎನ್‌ಡಿಎ ಪಡೆದ ಬಹುಮತವು ಕೇರಳ ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ರಾಜ್ಯದ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನಮ್ಮ ಪಕ್ಷದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ಜನರಿಗೆ ಮನವರಿಕೆಯಾಗಿದೆ. ನಮ್ಮ ಪಕ್ಷವು ಈ ಅದ್ಭುತ ನಗರದ ಬೆಳವಣಿಗೆಗೆ ಕೆಲಸ ಮಾಡುತ್ತದೆ ಮತ್ತು ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇತಿಹಾಸ ಸೃಷ್ಟಿಸಿದ ಬಿಜೆಪಿ

ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 50 ವಾರ್ಡ್‌ಗಳನ್ನು ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ. ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್ ಕೇವಲ 29, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 19 ವಾರ್ಡ್‌ಗಳನ್ನು ಗೆಲುವು ಸಾಧಿಸಿವೆ. ಕೇರಳ ಚುನಾವಣಾ ಆಯೋಗದ ಮೂಲಗಳ ಮಾಹಿತಿಯಂತೆ ಇಬ್ಬರು ಪಕ್ಷೇತರರು ಜಯಗಳಿಸಿದ್ದಾರೆ.

ಬಿಜೆಪಿಗೆ ತರೂರ್ ಅಭಿನಂದನೆ...​

ಕೇರಳ ಸ್ಥಳೀಯ ಸ್ವ-ಸರ್ಕಾರ ಚುನಾವಣೆಯಲ್ಲಿ ಅದ್ಭುತ ಫಲಿತಾಂಶಗಳ ದಿನ ಇದು! ಜನಾದೇಶ ಸ್ಪಷ್ಟವಾಗಿದೆ ಮತ್ತು ರಾಜ್ಯದ ಪ್ರಜಾಪ್ರಭುತ್ವದ ಮನೋಭಾವವು ಪ್ರಕಾಶಮಾನವಾಗಿದೆ.
ತಿರುವನಂತಪುರದಲ್ಲಿ ಬಿಜೆಪಿಯ ಈ ಐತಿಹಾಸಿಕ ಸಾಧನೆಯನ್ನು ನಾನು ಅಂಗೀಕರಿಸಲು ಬಯಸುತ್ತೇನೆ ಮತ್ತು ನಗರ ನಿಗಮದಲ್ಲಿ ಅವರ ಗಮನಾರ್ಹ ಗೆಲುವಿಗೆ ವಿನಮ್ರ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಇದು ರಾಜಧಾನಿಯ ರಾಜಕೀಯ ಭೂದೃಶ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುವ ಪ್ರಬಲ ಪ್ರದರ್ಶನವಾಗಿದೆ ಎಂದು ಬರೆದುಕೊಂಡಿದ್ದಾರೆ.
2020 ರಲ್ಲಿ ನಡೆದ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಎಲ್‌ಡಿಎಫ್ 52 ವಾರ್ಡ್‌, ಬಿಜೆಪಿ ನೇತೃತ್ವದ ಮೈತ್ರಿಕೂಟ 33 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದವು(ಏಜೆನ್ಸೀಸ್​).