ಪ್ರಧಾನಿ ನರೇಂದ್ರ ಮೋದಿ 
ದೇಶ

ಕ್ವಿಟ್ ಇಂಡಿಯಾ ಚಳುವಳಿ ವಾರ್ಷಿಕೋತ್ಸವ; ಮಹಾತ್ಮ ಗಾಂಧಿ ಸೇರಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಪ್ರಧಾನಿ ಮೋದಿ | PM Modi

ನವದೆಹಲಿ: ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ 1942 ಆಗಸ್ಟ್ 9ರಂದು ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ದಿನವಾದ ಇಂದು, ಚಳುವಳಿಯಲ್ಲಿ ಭಾಗವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇನೆ. ಅವರ ಧೈರ್ಯ ಯಾವಾಗಲೂ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ. ಮಹಾತ್ಮ ಗಾಂಧಿಯವರ ನಾಯಕತ್ವದಿಂದ ಪ್ರೇರಿತರಾಗಿ, ಕ್ವಿಟ್ ಇಂಡಿಯಾದ ಕರೆ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿಯನ್ನು ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತರಾಗಲು ನಮ್ಮ ಜನರ ಅಚಲ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಭಾರತ ಬಿಟ್ಟು ತೊಲಗಿ ಆಂದೋಲನ ಎಂದೂ ಕರೆಯಲ್ಪಡುವ ಕ್ವಿಟ್ ಇಂಡಿಯಾ ಚಳುವಳಿಯನ್ನು ಮಹಾತ್ಮ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1942 ಆಗಸ್ಟ್ 9ರಂದು ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ ಚಳುವಳಿಯಾಗಿದೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಚಳುವಳಿ ಮಹತ್ವದ ಸ್ಥಾನ ಪಡೆಯಿತು. ಮತ್ತು ಇನ್ನೂ ಬಹಳ ವರ್ಷಗಳ ಕಾಲ ವಿಶೇಷವಾಗಿ ಭಾರತವನ್ನು ಆಳಲು ಸಾಧ್ಯವಿಲ್ಲ ಎಂದು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟಿತು. ದೇಶವನ್ನು ತೊರೆಯುವ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿತು.
1942ರ ಈ ದಿನದಂದು ಗಾಂಧೀಜಿಯವರು ಎಲ್ಲಾ ಭಾರತೀಯರಿಗೆ ಮಾಡು ಇಲ್ಲವೇ ಮಡಿ ಎಂಬ ಸ್ಪಷ್ಟ ಕರೆಯನ್ನು ನೀಡಿ ಬ್ರಿಟಿಷರನ್ನು ದೇಶದಿಂದ ಓಡಿಸುವಂತೆ ಒತ್ತಾಯಿಸಿದರು. ಈ ಚಳುವಳಿ ಮುಂಬೈನ ಗವಾಲಿಯಾ ಟ್ಯಾಂಕ್‌ನಿಂದ ಪ್ರಾರಂಭವಾಯಿತು. ಈ ದಿನವನ್ನು ಪ್ರತಿ ವರ್ಷ ಆಗಸ್ಟ್ ಕ್ರಾಂತಿ ದಿನವಾಗಿ ಆಚರಿಸಲಾಗುತ್ತದೆ. ಈ ವೇಳೆ ಹಲವಾರು ಹೋರಾಟಗಾರರು ದಬ್ಬಾಳಿಕೆ ಮತ್ತು ಜೈಲು ಶಿಕ್ಷೆಯನ್ನು ಎದುರಿಸಿದರು (ಏಜೆನ್ಸೀಸ್).