ಲತಾ ಮಂಗೇಶ್ಕರ್ ನಂತರ ಹಾಡುಗಾರಿಕೆಯ ಮೂಲಕ ದೇಶಾದ್ಯಂತ ಮನೆಮಾತಾದ ಅಪ್ರತಿಮ ಗಾಯಕಿ ಆಶಾ ಭೋಸ್ಲೆ. ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ ತಂಗಿಯಾಗಿ ಅಕ್ಕನಿಗೇ ಸವಾಲೊಡ್ಡಿದ ಹೆಗ್ಗಳಿಕೆ ಅವರದು. ಹಾಡುಗಾರಿಕೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದ ಆಶಾ ಚಿಕ್ಕವಯಸ್ಸಿಯಲ್ಲೇ ಅಕ್ಕನೊಂದಿಗೆ ಹಾಡುತ್ತಿದ್ದರು. ಜೀವನ ವೃತ್ತಿಯಾಗಿ ಹಾಡುಗಾರಿಕೆಯನ್ನೇ ಅವಲಂಬಿಸಬೇಕಾಗಿ ಬಂದಾಗ ಅದಮ್ಯ ವಿಶ್ವಾಸದಿಂದ ಸ್ವೀಕರಿಸಿದ್ದಲ್ಲದೆ, ಸವಾಲಿನ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಿ ನಿಂತರು.
ಇವರದೂ ಅಕ್ಕನದೇ ಶೈಲಿ, ಧಾಟಿ, ಧ್ವನಿ ಎಂಬ ಮಾತು ಆಶಾ ದಿಕ್ಕನ್ನೇ ಬದಲಿಸಿತು. ನಿರಂತರ ಅಭ್ಯಾಸ ಮಾಡಿ ಸ್ವಂತ ಶೈಲಿ ಮತ್ತು ಧಾಟಿಯನ್ನು ರೂಪಿಸಿಕೊಂಡಿದ್ದರಿಂದ, ‘ಈ ಹಾಡು ಹೇಳಲು ಆಶಾ ಅವರೇ ಬೇಕು’ ಎಂದು ನಿರ್ವಪಕರು ಮನೆಬಾಗಿಲಿಗೆ ಬಂದು ಕಾಯುವ ಪರಿಸ್ಥಿತಿ ನಿರ್ವಣವಾಗಿತ್ತು. ಹೀಗೆ ಹಲವು ದಾಖಲೆಗಳನ್ನು ನಿರ್ವಿುಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಏಪ್ರಿಲ್ 12ರಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಸಾವಿರಾರು ಹಾಡುಗಳ ಮುಖಾಂತರ ಅವರು ಅಮರ.
ಮೆಲೋಡಿ ಕ್ವೀನ್ ಆಶಾ ಭೋಸ್ಲೆ ಹುಟ್ಟಿದ್ದು 1933ರ ಸೆಪ್ಟೆಂಬರ್ 8ರಂದು. ಮರಾಠಿ ರಂಗಭೂಮಿಯ ದಿಗ್ಗಜ ದೀನಾನಾಥ್ ಮಂಗೇಶ್ಕರ್ ಅವರ ಐವರು ಮಕ್ಕಳಲ್ಲಿ, ಎರಡನೆಯ ಪುತ್ರಿ. ಲತಾ, ಆಶಾ, ಉಷಾ, ಮೀನಾ ಮತ್ತು ಹೃದಯನಾಥ್ ಮಂಗೇಶ್ಕರ್. ಐವರೂ ಭಾರತೀಯ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದರೂ, ಲತಾ ಮತ್ತು ಆಶಾ, ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಬಾಲಿವುಡ್ ಮಾತ್ರವಲ್ಲ ಭಾರತೀಯ ಸಂಗೀತ ಲೋಕಕ್ಕೆ ಈ ಸಹೋದರಿಯರ ಕೊಡುಗೆ ಅನನ್ಯ. 20 ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರ ಹಾಡುಗಳಿಗೆ ಧ್ವನಿಯಾಗಿರುವುದಾಗಿ ಖುದ್ದು ಆಶಾ 2006ರಲ್ಲಿ ಹೇಳಿಕೊಂಡಿದ್ದರು. ಅದರಂತೆ ಅವರು ವಿಶ್ವ ಸಂಗೀತ ಲೋಕದಲ್ಲೇ ಅತಿಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ ಸಿಂಗರ್ ಎಂಬ ದಾಖಲೆ ಬರೆದಿದ್ದಾರೆ.
11 ಸಾವಿರಕ್ಕೂ ಅಧಿಕ ಸೋಲೋ ಹಾಡುಗಳಿಗೆ ಧ್ವನಿಯಾಗಿರುವ ಏಕೈಕ ಸಿಂಗರ್ ಎಂದು ಗಿನ್ನೆಸ್ ದಾಖಲೆ ಬರೆದಿದ್ದಾರೆ (2011) ಆಶಾ ಭೋಸ್ಲೆ. 1948ರಲ್ಲಿ ‘ಅಫ್ಸಾನಾ’ ಚಿತ್ರದ ‘ದುಲ್ಹಾ ಬಾಬು ತೂ ಝೂಲೆ ಮೇ’ ಹಾಡಿನ ಮೂಲಕ ಪ್ರಾರಂಭವಾದ ಅವರ ಸಂಗೀತ ಪಯಣ 2022ರ ‘ಲೈಫ್ ಈಸ್ ಗುಡ್’ ಚಿತ್ರದ ‘ರುತ್ ಭೀಘ ತನ್’ವರೆಗೂ ಸಾಗಿಬಂದಿದೆ. ಅಲ್ಲಿಗೆ ಬರೋಬ್ಬರಿ 74 ವರ್ಷಗಳ ಸುದೀರ್ಘ ಸಂಗೀತ ಪಯಣ.
ಲತಾ ದೀದಿ Vs ಆಶಾ ತಾಯಿ
ತಂದೆ ದೀನಾನಾಥ್ ಮಂಗೇಶ್ಕರ್ ಅವರ ಅಕಾಲಿಕ ಮರಣದಿಂದ ಕುಟುಂಬದ ಜವಾಬ್ದಾರಿ ನಿಭಾಯಿಸಲು ಲತಾ ಮಂಗೇಶ್ಕರ್ ಮೊದಲು ಚಿತ್ರರಂಗಕ್ಕೆ ಗಾಯಕಿಯಾಗಿ ಪದಾರ್ಪಣೆ ಮಾಡಿ, 1950ರಿಂದ 1970ರ ದಶಕದವರೆಗೂ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳಿದರು. ಅಕ್ಕನ ನೆರಳಿನಲ್ಲಿ ಕಷ್ಟಪಟ್ಟು ಚಿಗುರುವ ಆಶಾ, ಸ್ಪೆಶಲ್, ಕಡಿಮೆ ಬಜೆಟ್ ಸಿನಿಮಾಗಳ ಹಾಡುಗಳ ಮೂಲಕ ಹಂತಹಂತವಾಗಿ ಒಂದೊಂದೇ ಮೆಟ್ಟಿಲೇರತೊಡಗಿದರು. ಬಳಿಕ, ಒಂದೇ ದಿನ ಐದು, ಆರು ಹಾಡುಗಳನ್ನು ರೆಕಾರ್ಡ್ ಮಾಡುವಷ್ಟು ಬಿಜಿಯಾದರು. ಅತಿಹೆಚ್ಚು ಹಾಡುಗಳಿಗೆ ದನಿಯಾಗಿದ್ದ ಅಕ್ಕ ಲತಾ ಗಿನ್ನೆಸ್ ದಾಖಲೆಯನ್ನು ಆಶಾ ಭೋಸ್ಲೆ ಮುರಿದರು. ಲತಾ ಮಂಗೇಶ್ಕರ್ ಅವರನ್ನು ಪ್ರೀತಿಯಿಂದ ಎಲ್ಲರೂ ‘ಲತಾ ದೀದಿ’ ಎನ್ನುತ್ತಿದ್ದರು. ‘ದೀದಿ’ ಎಂದರೆ ಹಿಂದಿಯಲ್ಲಿ ಅಕ್ಕ ಎಂದರ್ಥ. ಹಾಗೇ ಹಿಂದಿ ಜತೆಗೆ ಮರಾಠಿ ಚಿತ್ರರಂಗದಲ್ಲೂ ಸಂಗೀತ ಲೋಕದ ಮಿನುಗುತಾರೆಯಾಗಿದ್ದ ಆಶಾ ಅವರನ್ನು ‘ಆಶಾ ತಾಯಿ’ ಎಂದು ಪ್ರೀತಿಯಿಂದ ಕರೆಯತೊಡಗಿದರು. ಮರಾಠಿಯಲ್ಲಿ ‘ತಾಯಿ’ ಎಂದರೆ ಅಕ್ಕ ಎಂದರ್ಥ.
ಕೈ ಕೊಟ್ಟ ಮೊದಲ ಪ್ರೀತಿ
ಮನೆಯವರ ವಿರೋಧದ ನಡುವೆಯೂ 16 ವರ್ಷದ ಆಶಾ, ಪಕ್ಕದ ಮನೆಯ 31 ವರ್ಷದ ಗಣಪತ್ ರಾವ್ ಭೋಸ್ಲೆಯನ್ನು ಪ್ರೀತಿಸಿ 1949ರಲ್ಲಿ ಮದುವೆಯಾದರು. ಇದು ಲತಾ ಮಂಗೇಶ್ಕರ್ ಮನಸ್ಸಿಗೆ ತೀವ್ರ ಘಾಸಿಯುಂಟು ಮಾಡಿತು. ಮತ್ತೊಂದೆಡೆ ಪತಿ ಗಣಪತ್ ಕೂಡ ಆಶಾರನ್ನು ತವರುಮನೆಯಿಂದ ದೂರವಿಡಲು ಪ್ರಯತ್ನಿಸಿದರು. ಜತೆಗೆ ಗಣಪತ್ ರಾವ್ಗೆ ಪತ್ನಿಯ ಮೇಲೆ ಅತಿಯಾದ ಅನುಮಾನ. ಈ ಅನುಮಾನವೇ ಆಶಾ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತು. ಆದರೂ, 11 ವರ್ಷಗಳವರೆಗೆ ಸಂಸಾರ ನಡೆಸಿದ ಆಶಾ, 1960ರಲ್ಲಿ ಇಬ್ಬರು ಮಕ್ಕಳ ಜತೆ ಮೂರನೇ ಮಗುವಿನ ಗರ್ಭಾವಸ್ಥೆಯಲ್ಲೇ ಗಂಡನ ಮನೆ ತೊರೆದು ತವರುಮನೆಗೆ ವಾಪಸ್ಸಾದರು. ಕ್ರಮೇಣ ಪತಿಯಿಂದ ವಿಚ್ಛೇದನ ಪಡೆದರು.
ಬಾಳ ಸಂಗಾತಿಗಳಾದ ಆಶಾ-ಪಂಚಮ್ದಾ
ಮೊದಲ ಪ್ರೀತಿ, ಮೊದಲ ಮದುವೆ ಮುರಿದುಬಿದ್ದ ಬಳಿಕ ಆಶಾ ಮಕ್ಕಳ ಕಡೆಗೆ ಮತ್ತು ಸಿಂಗಿಂಗ್ನತ್ತ ಗಮನ ಹರಿಸಿದರು. ಹೆಸರಾಂತ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಸಂಯೋಜನೆಯಲ್ಲಿ ಹಲವು ಹಾಡುಗಳನ್ನು ಹಾಡಿದ್ದ ಆಶಾಗೆ, ಅವರ ಸ್ಟುಡಿಯೋದಲ್ಲಿ ಪುತ್ರ ಆರ್.ಡಿ. ಬರ್ಮನ್ (ಪಂಚಮ್ದಾ ) ಪರಿಚಯವಾದರು. ಬಳಿಕ ಜೂನಿಯರ್ ಬರ್ಮನ್ ಸಂಯೋಜನೆಯಲ್ಲೂ ಹಲವು ಹಿಟ್ ಹಾಡುಗಳಿಗೆ ದನಿಯಾದರು. ಅವರ ಗೆಳೆತನ, ಕ್ರಮೇಣ ಪ್ರೀತಿಗೆ ತಿರುಗಿತು. 1971ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಆರ್.ಡಿ.ಬರ್ಮನ್ ಮತ್ತು 1960ರಲ್ಲಿ ಪತಿಯಿಂದ ದೂರವಾಗಿದ್ದ ಆಶಾ, ಮದುವೆಯಾಗಲು ನಿರ್ಧರಿಸಿದರು. ಆದರೆ, ಆಶಾಗಿಂತ ಪಂಚಮ್ಾ ಆರು ವರ್ಷ ಕಿರಿಯವರಾದ ಕಾರಣ ಅವರ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಅದರ ನಡುವೆಯೂ 1980ರಲ್ಲಿ ಇಬ್ಬರೂ ಮದುವೆಯಾದರು. 1994ರವರೆಗೆ ಆರ್.ಡಿ. ಬರ್ಮನ್ ವಿಧಿವಶ ರಾಗುವವರೆಗೂ ಸಂಗೀತ ಸಂಗಾತಿಗಳು ಜತೆಗಿದ್ದರು.
ಆಶಾ ಭೋಸ್ಲೆ ಅವರ ಟಾಪ್ 10 ಎವರ್ಗ್ರೀನ್ ಹಾಡುಗಳು
‘ಹೌರಾ ಬ್ರಿಡ್ಜ್’ (1958) ಚಿತ್ರದ ‘ಆಯಿಯೇ ಮೆಹರ್ಬಾನ್’.
‘ಹಮ್ ದೋನೋ’ (1961) ಚಿತ್ರದ ‘ಅಭೀ ನಾ ಜಾವೋ ಛೋಡ್ಕರ್’.
‘ವಕ್ತ್’ (1965) ಚಿತ್ರದ ‘ಆಗೇ ಭೀ ಜಾನೇ ನಾ ತೂ’.
‘ಶಿಖರ್’ (1968) ಚಿತ್ರದ ‘ಪರ್ದೇ ಮೇ ರೆಹ್ನೇ ದೋ’.
‘ಕಾರವಾನ್’ (1971) ಚಿತ್ರದ ‘ಪಿಯಾ ತೂ ಅಬ್ ತೊ ಆಜಾ’.
‘ಹರೇ ರಾಮ ಹರೇ ಕೃಷ್ಣ’ (1971) ಚಿತ್ರದ ‘ದಮ್ ಮಾರೋ ದಮ್’.
‘ಯಾದೋಂ ಕೀ ಬಾರಾತ್’ (1973) ಚಿತ್ರದ ‘ಚುರಾ ಲಿಯಾ ಹೈ ತುಮ್ನೇ ಜೋ ದಿಲ್ ಕೋ’.
‘ಡಾನ್’ (1978) ಚಿತ್ರದ ‘ಯೇ ಮೇರಾ ದಿಲ್’.
‘ಉಮ್ರಾವೊ ಜಾನ್’ (1981) ಚಿತ್ರದ ‘ದಿಲ್ ಚೀಜ್ ಕ್ಯಾ ಹೈ’.
‘ಇಜಾಜತ್’ (1987) ಚಿತ್ರದ ‘ಮೇರಾ ಕುಛ್ ಸಾಮಾನ್’.
ರೆಕಾರ್ಡಿಂಗ್ ಸ್ಟುಡಿಯೋದಷ್ಟೇ ಅಡುಗೆಮನೆಯೂ ಮುಖ್ಯ!
ಆಶಾ ಭೋಸ್ಲೆಯವರಿಗೆ ಅಡುಗೆ ಮಾಡುವುದು ಅಂದರೆ ತುಂಬ ಪ್ರೀತಿಯಂತೆ. ‘ನನಗೆ ಹಾಡುವುದೆಷ್ಟು ಇಷ್ಟವೋ, ಅಡುಗೆ ಮಾಡುವುದೂ ಅಷ್ಟೇ ಇಷ್ಟ. ನಾನು ಗಾಯಕಿಯಾಗಿರದಿದ್ದರೆ, ನಾಲ್ಕು ಮನೆಗಳಲ್ಲಿ ಅಡುಗೆ ಮಾಡಿ ಸಂಸಾರ ನಿಭಾಯಿಸುತ್ತಿದ್ದೆ’ ಎಂದು ಅವರೇ ಹೇಳಿಕೊಂಡಿದ್ದಾರೆ. ಹಾಗೇ ವಿವಿಧ ಖಾದ್ಯಗಳನ್ನು ತಯಾರಿಸುವುದೇ ಅವರಿಗೆ ಸ್ಟ್ರೆಸ್ ಬಸ್ಟರ್ ಆಗಿತ್ತಂತೆ. ಪಾಯಾ ಕರ್ರಿ, ಮಸ್ಕತ್ ಗೋಷ್ತ್ ಸೇರಿ ಹಲವು ಬಗೆಬಗೆಯ ಖಾದ್ಯಗಳನ್ನು ರುಚಿರುಚಿಯಾಗಿ ತಯಾರಿಸುತ್ತಿದ್ದ ಅವರು, ಆಶಾ’ಸ್ ಎಂಬ ಅಂತಾರಾಷ್ಟ್ರೀಯ ಹೋಟೆಲ್ ಸರಣಿಯನ್ನೂ ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ್ದು, ಅಲ್ಲಿನ ಶೆಫ್ಗಳಿಗೆ ಖುದ್ದು ಅವರೇ ಆರು ತಿಂಗಳ ಕಾಲ ತರಬೇತಿಯನ್ನೂ ನೀಡಿದರಂತೆ. ದುಬೈ, ಬಹ್ರೈನ್, ಅಬುಧಾಬಿ, ಕತಾರ್, ಕುವೈತ್, ಇಂಗ್ಲೆಂಡ್ನಲ್ಲಿ 14 ರೆಸ್ಟೋರೆಂಟ್ಗಳಿವೆ.
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಹಲವು ದಶಕಗಳಿಂದ 12,000ಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ತೀವ್ರ ದುಃಖ ವಾಗಿದೆ. ಅವರು ಭಾರತೀಯ ಚಿತ್ರರಂಗಕ್ಕೆ ಅಸಂಖ್ಯಾತ ಮರೆಯಲಾಗದ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ ಮತ್ತು ಎಂದಿಗೂ ಮಸುಕಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ತೀವ್ರ ದುಃಖ ವಾಗಿದೆ. ಅವರ ವಿಶಿಷ್ಟ ಧ್ವನಿಯು ನಮ್ಮ ಸಂಗೀತ ಪರಂಪರೆಯಲ್ಲಿ ಅಳಿಸಲಾಗದ ಹೆಗ್ಗುರುತು. ಭಾರತೀಯ ಸಿನಿಮಾ ಮತ್ತು ಸಂಗೀತಕ್ಕೆ ಅವರ ಅಪ್ರತಿಮ ಕೊಡುಗೆ ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡುತ್ತಲೇ ಇರುತ್ತದೆ.
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಸಂಗೀತ ಲೋಕದಲ್ಲಿ ಬಹುಶಃ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಆಶಾ ಭೋಸ್ಲೆಯವರಿಗೆ ಸಲ್ಲುತ್ತದೆ. ಅವರ ಸಂಗೀತ ಕೃಷಿಗೆ ಎರಡು ರಾಷ್ಟ್ರಪ್ರಶಸ್ತಿ, 18 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, 9 ಫಿಲಂಫೇರ್ಗಳು ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಹಾಗೇ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತರಾದ ಮೊದಲ ಭಾರತೀಯ ಗಾಯಕಿ ಎಂಬ ದಾಖಲೆ ಬರೆದಿದ್ದಾರೆ. 1997ರಲ್ಲಿ ‘ಲೆಗಸಿ’ ಹಾಗೂ 2006ರಲ್ಲಿ ‘ಯು ಹ್ಯಾವ್ ಸ್ಟೋಲನ್ ಮೈ ಹಾರ್ಟ್’ ಆಲ್ಬಂಗಳು ಗ್ರಾ್ಯಮಿಯಲ್ಲಿ ನಾಮಿನೇಟ್ ಆಗಿದ್ದವು. ಹಾಗೇ 2000ರಲ್ಲಿ ದಾದಾಸಾಹೇಬ್ ಫಾಲ್ಕೆ, 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳಿಗೆ ಆಶಾ ಪಾತ್ರರಾದರು.