ತಿರುನಲ್ವೇಲಿ: ಮೀನಿನ ಬಲೆಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಹೆಬ್ಬಾವಿಗೆ (Python) ತಮಿಳುನಾಡಿನ ತಿರುನಲ್ವೇಲಿ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (VCRI) ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ(Python Surgery) ನಡೆಸಿ ಜೀವದಾನ ನೀಡಿದ್ದಾರೆ.
ಬಲೆಯಲ್ಲಿ ಸಿಲುಕಿ ಹರಿದು ಹೋಗಿದ್ದ ಚರ್ಮ
ಗುರುವಾರ (ಏಪ್ರಿಲ್ 9) ನಡೆದ ಈ ಅಪರೂಪದ ವೈದ್ಯಕೀಯ ಕಾರ್ಯಾಚರಣೆಯು ಎಲ್ಲರ ಗಮನ ಸೆಳೆದಿದೆ. ಸುಮಾರು ನಾಲ್ಕು ವರ್ಷ ಪ್ರಾಯದ ಈ ಹೆಬ್ಬಾವು ಅಚಾತುರ್ಯದಿಂದ ಮೀನಿನ ಬಲೆಯಲ್ಲಿ ಸಿಲುಕಿಕೊಂಡಿತ್ತು. ಬಲೆಯಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ಬಲೆಯ ನೂಲುಗಳು ಹಾವು ಬಿಗಿದು, ಅದರ ದೇಹದ ಮೇಲೆ ಆಳವಾದ ಗಾಯಗಳಾಗಿದ್ದವು (Lacerated wound). ಬಲೆಯು ದೇಹವನ್ನು ಹಿಸುಕಿದ ಕಾರಣ ಹಾವಿನ ಚರ್ಮ ಮತ್ತು ಮಾಂಸಖಂಡಗಳು ಹರಿದು ಹೋಗಿ ತೀವ್ರ ರಕ್ತಸ್ರಾವವಾಗಿತ್ತು.
ತಜ್ಞ ವೈದ್ಯರಿಂದ ಜಟಿಲ ಶಸ್ತ್ರಚಿಕಿತ್ಸೆ
ವಿಷಯ ತಿಳಿದ ಕೂಡಲೇ ಹಾವನ್ನು ತಮಿಳುನಾಡಿನ ತಿರುನಲ್ವೇಲಿಯ VCRI ಆಸ್ಪತ್ರೆಗೆ ದಾಖಲಿಸಲಾಯಿತು. ಹಾವಿನ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರ ತಂಡವು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಉರಗಗಳಂತಹ ಜೀವಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಸವಾಲಿನ ಕೆಲಸ. ಹಾವಿಗೆ ಅರಿವಳಿಕೆ ನೀಡಿ, ಗಾಯಗೊಂಡಿದ್ದ ಭಾಗವನ್ನು ಸ್ವಚ್ಛಗೊಳಿಸಿ, ಹರಿದು ಹೋಗಿದ್ದ ಸ್ನಾಯುಗಳು ಮತ್ತು ಚರ್ಮವನ್ನು ಅತ್ಯಂತ ಜಾಗರೂಕತೆಯಿಂದ ಹೊಲಿಗೆ ಹಾಕಲಾಯಿತು.
ಚೇತರಿಸಿಕೊಳ್ಳುತ್ತಿರುವ ಹೆಬ್ಬಾವು
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಹೆಬ್ಬಾವು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ವೈದ್ಯರ ನಿಗಾದಲ್ಲಿದೆ. ಹಾವಿನ ಗಾಯ ಸಂಪೂರ್ಣವಾಗಿ ಗುಣವಾದ ನಂತರ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ವೈದ್ಯಕೀಯ ತಂಡ ತಿಳಿಸಿದೆ. ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ಪಶುವೈದ್ಯರ ಕಾರ್ಯಕ್ಕೆ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).