putin 
ದೇಶ

ಅಭೇದ್ಯ ಕೋಟೆ ಪುತಿನ್​ ಭದ್ರತೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಎರಡು ದಿನಗಳ ಭಾರತ ಭೇಟಿಗಾಗಿ (ಡಿಸೆಂಬರ್​ 4 ಮತ್ತು 5) ರಾಜಧಾನಿ ನವದೆಹಲಿ ಸಜ್ಜಾಗಿದೆ. 2022ರ ನಂತರ ಪುತಿನ್​ ಅವರ ಮೊದಲ ಭಾರತ ಯಾತ್ರೆ ಇದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ 23ನೇ ದ್ವಿಪಯ ಸಭೆಯನ್ನು ಪುತಿನ್​ ನಡೆಸಲಿದ್ದಾರೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಒಂದಾಗಿರುವ ರಷ್ಯಾದ ಅಧ್ಯಕ್ಷರಿಗೆ ಭದ್ರತಾ ವ್ಯವಸ್ಥೆಯೂ ವಿಭಿನ್ನವಾಗಿದ್ದು, ಅಭೇದ್ಯ ಕೋಟೆಯಂತಿದೆ.
ಈ ಕುರಿತಾದ ವಿವರ ಇಲ್ಲಿದೆ.
ವ್ಲಾದಿಮಿರ್​ ಪುತಿನ್​ ರಕ್ಷಣೆಯ ಹೊಣೆ ಪ್ರೆಸಿಡೆನ್ಶಿಯಲ್​ ಸೆಕ್ಯುರಿಟಿ ಸರ್ವೀಸ್​ನದ್ದು. ಎಸ್​ಬಿಪಿ ಏಜೆನ್ಸಿ ಇದನ್ನು ನಿರ್ವಹಿಸುತ್ತದೆ. ಪುತಿನ್​ ಪ್ರವಾಸ ಕೈಗೊಳ್ಳುವ ದೇಶದ ಅಪರಾಧ ದರ, ಭಯೋತ್ಪಾದನೆಯ ಸ್ಥಿತಿ, ಪ್ರತಿಭಟನೆಗಳು ಮತ್ತು ಧಾರ್ಮಿಕ ವಾತಾವರಣದ ಬಗ್ಗೆ ಎಸ್​ಬಿಪಿ ಅಧ್ಯಯನ ನಡೆಸುತ್ತದೆ. ಈ ಅಧ್ಯಯನದ ಅವಧಿಯಲ್ಲಿ ಅಪಾಯಕಾರಿ ಅಥವಾ ಅನುಮಾನಕಾರಿ ಅಂಶಗಳು ಕಂಡುಬಂದರೆ ಅಧ್ಯಕ್ಷರ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಪುತಿನ್​ ಪ್ರವಾಸದ ಕನಿಷ್ಠ ಒಂದು ತಿಂಗಳು ಮುನ್ನವೇ ಸೆಕ್ಯುರಿಟಿ ತಂಡವನ್ನು ಕಳಿಸಲಾಗುತ್ತದೆ. ಪುತಿನ್​ ತಂಗುವ ಹೋಟೆಲ್​, ಸಂಚರಿಸುವ ಮಾರ್ಗದ ಬಗ್ಗೆ ಈ ತಂಡ ಪರಿಶೀಲನೆ ನಡೆಸುತ್ತದೆ. ಪುತಿನ್​ ಹೋಟೆಲ್​ ಕೋಣೆಗೆ ತಲುಪುವ ಮೊದಲೇ ಅಲ್ಲಿನ ಸಾಬೂನು, ಶ್ಯಾಂಪೂ, ಹ್ಯಾಂಡ್​ವಾಶ್​, ಟೂತ್​ಪೆಸ್ಟ್​ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ತೆಗೆದು, ರಷ್ಯಾದಿಂದ ತರಲಾದ ವಸ್ತುಗಳನ್ನು ಪುತಿನ್​ ಬಳಕೆಗೆ ಜೋಡಿಸಲಾಗುತ್ತದೆ.

ಐದು ಹಂತಗಳ ಭದ್ರತೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಭೇಟಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಐದು ಹಂತಗಳ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಷ್ಯಾದ ಅಧ್ಯಯ ಭದ್ರತಾ ಸೇವೆಯಲ್ಲಿ ಉನ್ನತ ಮಟ್ಟದ ತರಬೇತಿ ಪಡೆದ ನುರಿತ ಸಿಬ್ಬಂದಿ, ಭಾರತೀಯ ರಾಷ್ಟ್ರೀಯ ಭದ್ರತಾ ದಳದ (ಎನ್​ಎಸ್​ಜಿ) ಕಮಾಂಡೊಗಳು, ಸ್ನೆಪರ್​, ಡ್ರೋನ್​, ಜಾಮರ್​ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಶೀಲನಾ ವ್ಯವಸ್ಥೆ ಸೇರಿದಂತೆ ಐದು ಹಂತಗಳ ಭದ್ರತೆ ಕೈಗೊಳ್ಳಲಾಗಿದೆ. ರಷ್ಯಾದ 50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಈಗಾಗಲೇ ದೆಹಲಿಗೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಭದ್ರತಾ ಅಧಿಕಾರಿಗಳೊಂದಿಗೆ ದೆಹಲಿ ಪೊಲೀಸ್​ ಮತ್ತು ಎನ್​ಎಸ್​ಜಿ ಸಿಬ್ಬಂದಿ, ಪುತಿನ್​ ಸಾಗುವ ದಾರಿಯ ನೈರ್ಮಲ್ಯದ ಬಗ್ಗೆಯೂ ನಿಗಾ ಇಡಲಿದ್ದಾರೆ. ಪುತಿನ್​ ಭದ್ರತೆಗಾಗಿ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿ (ಕಂಟ್ರೋಲ್​ ರೂಮ್​) ಮತ್ತು ವಿಶೇಷ ಡ್ರೋನ್​ಗಳು ಕ್ಷಣಕ್ಷಣದ ಚಲನವಲನಗಳನ್ನು ಗಮನಿಸಲಿವೆ. ಸ್ನೆಪರ್​ಗಳು ಅಧ್ಯಕ್ಷರ ಚಲನವಲನದ ಮಾರ್ಗದ ಮೇಲೆ ನಿಗಾ ವಹಿಸಲಿದ್ದಾರೆ. ಜಾಮರ್​ ಮತ್ತು ಎಐ ಆಧಾರಿತ ತಂತ್ರಜ್ಞಾನದ ಅಳವಡಿಕೆ, ಮುಖ ಗುರುತು ಪತ್ತೆ ಕ್ಯಾಮರಾ ಸೇರಿದಂತೆ ಪುತಿನ್​ ಭದ್ರತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ರಷ್ಯಾದ ಭದ್ರತಾ ಸಿಬ್ಬಂದಿಯೇ ಪುತಿನ್​ ಅವರ ಭದ್ರತೆ ಕೈಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುತಿನ್​ ಭೇಟಿಯ ವೇಳೆ ಭಾರತದ ಎನ್​ಎಸ್​ಜಿ ಕಮಾಂಡೊಗಳು ರಷ್ಯಾದ ಭದ್ರತಾ ಅಧಿಕಾರಿ ಗಳೊಂದಿಗೆ ಸೇರಿಕೊಳ್ಳ ಲಿದ್ದಾರೆ.

ಮಲಮೂತ್ರ ರಷ್ಯಾಗೆ ರವಾನೆ!

ಪುತಿನ್​ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇರಿಸಲಾಗುತ್ತದೆ. ವಿದೇಶ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಅವರ ಖಾಸಗಿ ಕ್ಷಣಗಳ ಸಂದರ್ಭದಲ್ಲೂ ಭದ್ರತಾ ಸಿಬ್ಬಂದಿ ಇರುತ್ತಾರೆ. ಪುತಿನ್​ ಮಲ ಹಾಗೂ ಮೂತ್ರವನ್ನು ಒಂದು ಸೀಲ್ಡ್​ ಬ್ಯಾಗ್​ನಲ್ಲಿ ಸಂಗ್ರಹಿಸಿ, ಇದನ್ನು ಪೂಪ್​-ಭ್ರೀಫ್​ಕೇಸ್​ ಮುಖಾಂತರ ವಾಪಸ್​ ರಷ್ಯಾಗೆ ಕಳುಹಿಸಲಾಗುತ್ತದೆ. ಪುತಿನ್​ ಆರೋಗ್ಯದಲ್ಲಿ ಏನಾದರೂ ಏರುಪೇರಾಗಿದೆಯೇ ಅಥವಾ ಫುಡ್​ ಪಾಯಿಜನಿಂಗ್​ ಆಗಿದೆಯೇ ಎಂಬುದರ ಬಗ್ಗೆ ತಜ್ಞರು ಪರೀೆಕ್ಷೆ ನಡೆಸುವ ಮೂಲಕ, ಸಂಭಾವ್ಯ ಅಪಾಯಗಳನ್ನು ತಪ್ಪಿಸಲಾಗುತ್ತದೆ ಎಂದು ಫ್ರೇಂಚ್​​​ನ ವಾರಪತ್ರಿಕೆ "ಪ್ಯಾರಿಸ್​ ಮ್ಯಾಚ್​'ನಲ್ಲಿ ಪ್ರಕಟವಾದ ವರದಿಯಲ್ಲಿ ವಿವರಿಸಲಾಗಿದೆ. ಪುತಿನ್​ ಮಲ, ಮೂತ್ರದ ಮುಖೇನ ಯಾವುದೇ ದೇಶ ಅವರ ವೈದ್ಯಕಿಯ ಸ್ಥಿತಿ ಮತ್ತು ವೈದ್ಯಕಿಯ ವಿವರ ತಿಳಿಯಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ ಎಂಬ ಇನ್ನೊಂದು ಆಯಾಮದ ಬಗ್ಗೆ ಬ್ರಿಟಿಷ್​ ಪತ್ರಿಕೆ "ದ ಇಂಡಿಪೆಂಡೆಂಟ್​' 2022ರಲ್ಲಿ ಪ್ರಕಟಿಸಿದ ವರದಿಯಲ್ಲಿ ಮಾಹಿತಿ ನೀಡಿದೆ. ಮಲದ ಸ್ಯಾಂಪಲ್​ ಪರೀಕ್ಷೆಯ ಮುಖಾಂತರ ವ್ಯಕ್ತಿಯ ಕಾಯಿಲೆಗಳು, ಇದಕ್ಕಾಗಿ ಆ ವ್ಯಕ್ತಿ ಯಾವ ಔಷಧಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿಗಳನ್ನು ಪತ್ತೆ ಹಚ್ಚಬಹುದಾಗಿದೆ. 2025ರ ಆಗಸ್ಟ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿಗೆ ಪುತಿನ್​ ಅಲಾಸ್ಕಾಗೆ ಬಂದಿದ್ದಾಗ, ಅವರ ಭದ್ರತಾ ಸಿಬ್ಬಂದಿ ಪೂಪ್​-ಭ್ರೀಫ್​ಕೇಸ್​​ ತಂದಿದ್ದರು ಎಂದು ಅಮೆರಿಕನ್​ ಮಾಧ್ಯಮಗಳು ವರದಿ ಮಾಡಿದ್ದವು.

35ಕ್ಕೇ ಬಾಡಿಗಾರ್ಡ್​ ನಿವೃತ್ತಿ

ಪುತಿನ್​ ಬಾಡಿಗಾರ್ಡ್​ಗಳಾಗಲು ಕಠಿಣ ನಿಯಮಗಳಿವೆ. ಬಹುತೇಕ ಅಂಗರಕ್ಷಕರು ರಷ್ಯಾದ ಪ್ರಮುಖ ಭದ್ರತಾ ಏಜೆನ್ಸಿ ಫೆಡರಲ್​ ಸೆಕ್ಯೂರಿಟಿ ಸರ್ವಿಸ್​ (ಎಫ್​ಎಸ್​​ಬಿ)ನಿಂದ ಪದವಿ ಪಡೆದವರಾಗಿರುತ್ತಾರೆ. ನೇಮಕಾತಿಯ ಮುಂಚೆ ಹಲವು ಸುತ್ತಿನ ಸಂದರ್ಶನ ಮತ್ತು ಪಾಲಿಗ್ರಾಫ್​ ಟೆಸ್ಟ್​ನ್ನೂ ನಡೆಸಲಾಗುತ್ತದೆ.
ಎಲ್ಲ ಅಭ್ಯರ್ಥಿಗಳ ಕೌಟುಂಬಿಕ ಹಿನ್ನೆಲೆಯನ್ನೂ ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ಅಂಗರಕ್ಷಕರ ಎತ್ತರ 5.8 ಅಡಿಯಿಂದ 6.2 ಅಡಿಯ ನಡುವೆ ಇರಬೇಕು. ತೂಕ 75ರಿಂದ 90 ಕೆಜಿಗಳಷ್ಟಿರಬೇಕು. ವಿದೇಶಿ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಮಾತನಾಡುವ ಕೌಶಲ ಇರಲೇ ಬೇಕು. ತೆಳುವಾದ ಕೋಟ್​ನಲ್ಲೂ ಭೀಕರ ಚಳಿಯನ್ನು ಸಹಿಸುವಂಥ ಹಾಗೂ ಬಿಸಿಲ ಬೇಗೆಯಲ್ಲಿ ಬೆವರಿಳಿಯದಂತೆ ಕಾರ್ಯನಿರ್ವಹಿಸುವ ತರಬೇತಿಯನ್ನು ಅಂಗರಕ್ಷಕರಿಗೆ ನೀಡಲಾಗುತ್ತದೆ. 2025ರ ಸೆಪ್ಟೆಂಬರ್​ನಲ್ಲಿ ಚೀನಾದಲ್ಲಿ ಕಿಮ್​ ಜೊಂಗ್​ ಉನ್​ ಅವರೊಂದಿಗಿನ ಪುತಿನ್​ ಭೇಟಿಯ ವೇಳೆ ಕಿಮ್​ನ ಅಂಗರಕ್ಷಕರು ಪುತಿನ್​ ಸಮೀಪಕ್ಕೆ ಬರಲು ಯತ್ನಿಸಿದಾಗ, ಪುತಿನ್​ ಅಂಗರಕ್ಷಕರು ಕೂಡಲೇ ಅವರನ್ನು ತಡೆದಿದ್ದರು. ಅಂಗರಕ್ಷಕರಾಗಿ ಇರುವವರಿಗೆ ದೈಹಿಕ ಸದೃಢತೆ ಅಗತ್ಯ. ಹೀಗಾಗಿ, ಪುತಿನ್​ ಅಂಗರಕ್ಷಕರಿಗೆ 35ನೇ ವಯಸ್ಸಿಗೇ ಕಡ್ಡಾಯವಾಗಿ ನಿವೃತ್ತಿ ನೀಡಲಾಗುತ್ತದೆ ಮತ್ತು ನಿವೃತ್ತಿಯ ನಂತರವೂ ಭದ್ರತಾ ಏಜೆನ್ಸಿಗಳು ಆ ಅಂಗರಕ್ಷಕರ ಮೇಲೆ ಕಣ್ಗಾವಲು ಇರಿಸಿರುತ್ತವೆ.

ಬಾತ್​ರೂಂ, ಟೆಲಿಫೋನ್​​ ಬೂತ್​

ಪುತಿನ್​ ಯಾವುದೇ ದೇಶಕ್ಕೆ ಭೇಟಿ ನೀಡುವ ಹಲವು ದಿನಗಳ ಮುನ್ನವೇ ರಷ್ಯಾದಿಂದ ಶೌಚಗೃಹ, ಟೆಲಿೋನ್​ ಬೂತ್​ ಆಗಮಿಸುತ್ತದೆ. ಪುತಿನ್​ ಸ್ಮಾರ್ಟ್​ಫೋನ್​ ಬಳಸುವುದಿಲ್ಲ. ಸುರತ ಕಮ್ಯುನಿಕೇಶನ್​ ಸಂಪರ್ಕದ ಮೂಲಕ ಮಾತನಾಡುತ್ತಾರೆ. ಹೀಗಾಗಿ, ಅಧ್ಯಕ್ಷರು ತಂಗುವ ಕೋಣೆಯಲ್ಲಿ ಟೆಲಿಫೋನ್​​ ಬೂತ್​ನ್ನು ತಾತ್ಕಾಲಿಕವಾಗಿ ಇನ್​ಸ್ಟಾಲ್​ ಮಾಡಲಾಗುತ್ತದೆ. ಪುತಿನ್​ ಹೋಟೆಲ್​ ಕೋಣೆಯ ಬಾತ್​ರೂಮ್​ ಕೂಡ ಬಳಸುವುದಿಲ್ಲ. ಇದಕ್ಕಾಗಿ ರಷ್ಯಾದಿಂದಲೇ ಸಂಚಾರಿ ಬಾತ್​ರೂಮ್​ನ್ನು ತಂದು ಹೋಟೆಲ್​ ಕೊಣೆಯಲ್ಲಿ ಅಳವಡಿಸಲಾಗುತ್ತದೆ.

ಆರಸ್​ ಸಿನೆಟ್​ನಲ್ಲಿ ಪ್ರಯಾಣ

ವಿಮಾನದಿಂದ ಇಳಿದ ಬಳಿಕ ಪುತಿನ್​ ಅತ್ಯಾಧುನಿಕ ಆರಸ್​ ಸಿನೆಟ್​ ಕಾರ್​ನಲ್ಲಿ ಪ್ರಯಾಣಿಸುತ್ತಾರೆ. 2018ರಿಂದ ಅವರು ಆರಸ್​ ಸಿನೆಟ್​ ಕಾರ್​ ಉಪಯೋಗಿಸುತ್ತಿದ್ದಾರೆ. ರಷ್ಯಾದ ಆರಸ್​ ಮೋಟಾರ್ಸ್​ ಸೆಂಟ್ರಲ್​ ಸೈಂಟಿಫಿಕ್​ ರಿಸರ್ಚ್​ ಆಟೋಮೊಬೈಲ್​ ಆ್ಯಂಡ್​ ಆಟೋಮೇಟಿವ್​ ಇಂಜಿನ್​ ಇನ್​ಸ್ಟಿಟ್ಯೂಟ್​ ಜತೆಗೂಡಿ ಈ ಕಾರನ್ನು ವಿನ್ಯಾಸಗೊಳಿಸಿದೆ. ಈ ಕಾರಿನ ಸುರೆಯ ಫೀಚರ್​ಗಳನ್ನು ಬಹುತೇಕ ರಹಸ್ಯವಾಗಿ ಇರಿಸಲಾಗುತ್ತದೆ. ಕಮಾಂಡ್​ ಸಿಸ್ಟಮ್​ನ್ನು ಒಳಗೊಂಡಿದ್ದು, ಕಾರಿನಲ್ಲೇ ಕುಳಿತು ಪುತಿನ್​ ಆದೇಶ ನೀಡಬಹುದಾಗಿದೆ. ತುರ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್​ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 249 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ನಾಲ್ಕೂ ಟೈರ್​ಗಳು ಪಂಕ್ಚರ್​ಗೊಂಡರೂ, ಪ್ರಯಾಣ ನಿರಾಂತಕವಾಗಿ ಮುಂದುವರಿಸುವ ತಂತ್ರಜ್ಞಾನ ಸೌಲಭ್ಯ ಹೊಂದಿದೆ. ಕಾರಿನಲ್ಲಿ ಪೊಲ್ಡೇಬಲ್​ ಟೇಬಲ್​ ಮತ್ತು ಮಿನಿ ರೆಫ್ರಿಜರೇಟರ್​ನ್ನು ಅಳವಡಿಸಲಾಗಿದೆ. 2025ರ ಆಗಸ್ಟ್​ನಲ್ಲಿ ಎಸ್​ಸಿಒ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತೆರಳಿದ್ದಾಗ ಪುತಿನ್​ ಜತೆ ಇದೇ ಕಾರಿನಲ್ಲಿ ಪ್ರಯಾಣಿಸಿದ್ದರು. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜೊಂಗ್​ ಉನ್​ಗೆ ಕಳೆದ ವರ್ಷ ಪುತಿನ್​ ಇದೇ ಕಾರ್​ನ್ನು ಉಡುಗೊರೆಯಾಗಿ ನೀಡಿದ್ದಾರೆ.

ದೊಡ್ಡ ತಂಡ

ಪುತಿನ್​ ಎಲ್ಲಿಗೇ ಹೋದರೂ ಅವರ ಜತೆ ಕನಿಷ್ಠ 100 ಜನರ ತಂಡವಿರುತ್ತದೆ. ವೈಯಕ್ತಿಕ ಅಂಗರಕ್ಷಕರು, ಎಸ್​ಬಿಪಿ, ಫೆಡರಲ್​ ಪ್ರೊಟೆಕ್ಟಿವ್​ ಸರ್ವಿಸ್​ (ಎಫ್​ಎಸ್​ಒ) ಸದಸ್ಯರು, ಶಿಷ್ಟಾಚಾರ ಅಧಿಕಾರಿಗಳು, ಅಧ್ಯಕ್ಷರ ಕಚೇರಿಯ ಆಡಳಿತಾತ್ಮಕ ಉನ್ನತ ಅಧಿಕಾರಿಗಳು ಮತ್ತು ಕೆಲ ಪತ್ರಕರ್ತರು ಈ ತಂಡದಲ್ಲಿರುತ್ತಾರೆ. ಪುತಿನ್​ ಜತೆ ವಿದೇಶ ಪ್ರವಾಸಕ್ಕೆ ನಿಯೋಜನೆಯಾಗುವ ಅಂಗರಕ್ಷರನ್ನು ಪ್ರವಾಸದ ಮುನ್ನ ಎರಡು ವಾರಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ.

ಪ್ರಮುಖಾಂಶಗಳು

ಪುತಿನ್​ ತಂಗುವ ಹೋಟೆಲ್​ನಲ್ಲಿ ಅಲ್ಲಿನ ಸಿಬ್ಬಂದಿಯ ಸೇವೆ ಪಡೆಯುವುದಿಲ್ಲ. ಪುತಿನ್​ ಸಹಾಯಕ ಸಿಬ್ಬಂದಿ, ಅಡುಗೆ ಸಿಬ್ಬಂದಿ ಮತ್ತು ಹೌಸ್​ ಕಿಪಿಂಗ್​ ಸಿಬ್ಬಂದಿ ರಷ್ಯಾದಿಂದಲೇ ಪುತಿನ್​ ಜತೆ ಆಗಮಿಸುತ್ತಾರೆ.
ಅಡುಗೆ ತಯಾರಿಸುವ ಮತ್ತು ಅದನ್ನು ಸರ್ವ್​ ಮಾಡುವ ಸಿಬ್ಬಂದಿಗೆ ಪ್ರತ್ಯೇಕ ಲಿಫ್ಟ್​ ಅಳವಡಿಸಲಾಗುತ್ತದೆ. ಈ
ಲಿಫ್ಟ್​ನ್ನು ಇತರ ಸಿಬ್ಬಂದಿ ಬಳಸುವಂತಿಲ್ಲ.
ಅಡುಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ಕೂಡ ಸಂಬಂಧಪಟ್ಟ ಸಿಬ್ಬಂದಿ ರಷ್ಯಾದಿಂದಲೇ ತರುತ್ತಾರೆ. ಈ ಸಾಮಗ್ರಿಗಳ ಗುಣಮಟ್ಟವನ್ನು ಮುಂಚೆಯೇ ಪರೀಸಲಾಗಿರುತ್ತದೆ.