ಸಂದರ್ಶಕ ಪುಸ್ತಕದಲ್ಲಿ ಟಿಪ್ಪಣಿ ಬರೆಯುತ್ತಿರುವ ಪುಟಿನ್
ನವದೆಹಲಿ: ಎರಡು ದಿನಗಳ ಭಾರತ ಭೇಟಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು(ಡಿ. 05) ಬೆಳಗ್ಗೆ ದೆಹಲಿಯಲ್ಲಿರುವ ಮಹಾತ್ಮ ಗಾಂಧಿಯ ಸ್ಮಾರಕ ರಾಜ್ಘಾಟ್ಗೆ ಭೇಟಿ ನೀಡಿದ್ದರು. ಈ ವೇಳೆ ಸಮಾಧಿಗೆ ಗೌರವ ನಮನ ಸಲ್ಲಿಸಿ, ಸಂದರ್ಶಕರ ಪುಸ್ತಕದಲ್ಲಿ ಸಣ್ಣ ಟಿಪ್ಪಣಿ ಬರೆದು ಸಹಿ ಹಾಕಿದ್ದರು.
ಪುಟಿನ್ ತಮ್ಮ ಸಣ್ಣ ರಷ್ಯನ್ ಭಾಷೆಯ ಟಿಪ್ಪಣಿಯಲ್ಲಿ ಮಹಾತ್ಮ ಗಾಂಧಿಯನ್ನು ಆಧುನಿಕ ಸ್ವತಂತ್ರ ಭಾರತದ ಸ್ಥಾಪಕ, ಮಾನವತಾವಾಧಿ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದಿದ್ದಾರೆ. ಅವರ ಅಹಿಂಸೆ ಮತ್ತು ಸತ್ಯದ ಮೂಲಕ ನಮ್ಮ ಗ್ರಹದಲ್ಲಿ ಶಾಂತಿಯ ಉದ್ದೇಶಕ್ಕಾಗಿ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅದರ ಪ್ರಭಾವ ಇಂದಿಗೂ ಪ್ರಸ್ತುತವಾಗಿದೆ.
ಗಾಂಧಿಯವರು ಈಗ ರಚನೆಯಾಗುತ್ತಿರುವ ಹೊಸ, ನ್ಯಾಯಯುತ, ಬಹುಧ್ರುವೀಯ ವಿಶ್ವ ಕ್ರಮದತ್ತ ಮಾರ್ಗವನ್ನು ತೋರಿಸಿದ್ದಾರೆ. ಸಮಾನತೆ, ಪರಸ್ಪರ ಗೌರವ ಮತ್ತು ಸಹಕಾರದ ಕುರಿತಾದ ಅವರ ಬೋಧನೆಗಳಲ್ಲಿ ಭಾರತವು ಇಂದು ವಿಶ್ವದ ಜನರೊಂದಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸುತ್ತಿದೆ. ರಷ್ಯಾ ಕೂಡ ಅದನ್ನೇ ಮಾಡುತ್ತಿದೆ ಎಂದು ಬರೆದಿದ್ದಾರೆ.
ಬಳಿಕ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ 23ನೇ ಭಾರತ-ರಷ್ಯಾ ಶೃಂಗಸಭೆ ನಡೆದಿದ್ದು, ಮುಖ್ಯವಾಗಿ ರಕ್ಷಣೆ, ಇಂಧನ ಹಾಗೂ ಕೌಶಲ್ಯಪೂರ್ಣ ಕಾರ್ಮಿಕರ ಚಲನಶೀಲತೆ ಬಗ್ಗೆ ಪುಟಿನ್ ಮತ್ತು ಪ್ರಧಾನಿ ಮೋದಿ ಚರ್ಚಿಸಿದ್ದಾರೆ. ಇಂದು ಸಂಜೆ ಪುಟಿನ್ ದೇಶದಿಂದ ನಿರ್ಗಮನಕ್ಕೂ ಮುನ್ನ ಅಧ್ಯಕ್ಷ ಮುರ್ಮು ಅವರು ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ (ಏಜೆನ್ಸೀಸ್).