ಅಲ್ಲು ಅರ್ಜುನ್ 
ದೇಶ

ಪುಷ್ಪಾ-2 ಸಿನಿಮಾ ಕಾಲ್ತುಳಿತ ಪ್ರಕರಣ; ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ ಪೊಲೀಸರು; ನಟ ಅಲ್ಲು ಅರ್ಜುನ್ ಹೆಸರು ಉಲ್ಲೇಖ | Pushpa-2

ಹೈದರಾಬಾದ್: 2024ರ ಡಿಸೆಂಬರ್​​ನಲ್ಲಿ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ-2(Pushpa-2) ಸಿನಿಮಾ ಬಿಡುಗಡೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕದಪಲ್ಲಿ ಪೊಲೀಸರು ನ್ಯಾಂಪಲ್ಲಿ ಕೋರ್ಟ್​ಗೆ ಇಂದು(ಡಿ. 27) ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.
ಚಾರ್ಜ್​​ಶೀಟ್​ನಲ್ಲಿ ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಆರೋಪಿಸಿದ್ದು, ಒಟ್ಟು 23 ಆರೋಪಿಗಳನ್ನು ಹೆಸರಿಸಿದ್ದಾರೆ. ಥಿಯೇಟರ್ ಆಡಳಿತ ಮಂಡಳಿಯನ್ನು ಎ1 ಮಾಡಿದ್ದು, ನಟ ಅಲ್ಲು ಅರ್ಜುನ್ ಅವರನ್ನು ಎ11 ಮಾಡಿದ್ದಾರೆ. ಜೊತೆಗೆ ಮೂವರು ವ್ಯವಸ್ಥಾಪಕರು ಮತ್ತು 8 ಬೌನ್ಸರ್‌ಗಳನ್ನು ಸಹ ಆರೋಪ ಪಟ್ಟಿಯಲ್ಲಿದ್ದಾರೆ. ಜೊತೆಗೆ ನಾಲ್ವರು ಪ್ರತ್ಯಕ್ಷದರ್ಶಿಗಳ ಹೆಸರಿದೆ. 

2024 ಡಿಸೆಂಬರ್ 3ರಾತ್ರಿ ನಡೆದಿದ್ದ ಘಟನೆ

ಡಿ. 03ರಂದು ರಾತ್ರಿ 9.30ಕ್ಕೆ ಪುಷ್ಪ-2  ಪ್ರೀಮಿಯರ್ ಶೋ ಪ್ರದರ್ಶನಗೊಂಡಿತು. ಈ ವೇಳೆ ಜನರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್​​ಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಆಗಮಿಸಿದ್ದರು. ಈ ಸಂದರ್ಭದಲ್ಲಿ ಥಿಯೇಟರ್ ಬಳಿ ಕಾಲ್ತುಳಿತ ಸಂಭವಿಸಿತು. 
ಘಟನೆಯಲ್ಲಿ ಹೈದರಾಬಾದ್‌ನ ರೇವತಿ ಮತ್ತು ಅವರ ಮಗ ಶ್ರೀತೇಜ್ ಕಾಲ್ತುಳಿತದಲ್ಲಿ ಸಿಕ್ಕಿ ರೇವತಿ ಸ್ಥಳದಲ್ಲೇ ಸಾವನ್ನಪ್ಪಿದರು. ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದು, ಕೋಮಾಕ್ಕೆ ಹೋಗಿದ್ದ.  ಬಳಿಕ ಈ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನೂ ಗಾಯಾಳು ಶ್ರೀತೇಜಾ ಚಿಕಿತ್ಸಾ ವೆಚ್ಚ 75 ಲಕ್ಷ ರೂ.ಗಳನ್ನು ಅಲ್ಲು ಅರ್ಜುನ್ ಭರಿಸಿದ್ರೆ, ಪರಿಹಾರವಾಗಿ ಸಿನಿಮಾ ತಂಡ ಕುಟುಂಬಕ್ಕೆ 2 ಕೋಟಿ ರೂಪಾಯಿ ಹಣವನ್ನು ನೀಡಿತ್ತು (ಏಜೆನ್ಸೀಸ್).