ಇನ್​ಸ್ಟಾ ಮೂಲಕ ತಿಂಗಳಿಗೆ 1 ಕೋಟಿ ರೂ. ಗಳಿಕೆ: ಯಾರೀ ಅಶ್ವನಿ? ಸುದ್ದಿಯಾದ ಬೆನ್ನಲ್ಲೇ ಸುಂದರಿಗೆ ಶಾಕ್​! Purple Halcyon 
ದೇಶ

ಇನ್​ಸ್ಟಾ ಮೂಲಕ ತಿಂಗಳಿಗೆ 1 ಕೋಟಿ ರೂ. ಗಳಿಕೆ: ಯಾರೀ ಅಶ್ವನಿ? ಸುದ್ದಿಯಾದ ಬೆನ್ನಲ್ಲೇ ಸುಂದರಿಗೆ ಶಾಕ್​! Purple Halcyon

ಪ್ರಮುಖ ಮುಖ್ಯಾಂಶಗಳು

  • ಕೇರಳ ಮೂಲದ ಅಶ್ವನಿ ಎಂಬ ಯುವತಿ ಇನ್‌ಸ್ಟಾಗ್ರಾಮ್ ಮೂಲಕ ತಿಂಗಳಿಗೆ 1 ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ
  • ತನ್ನ ಇನ್‌ಸ್ಟಾಗ್ರಾಂ ಸಬ್​ಸ್ಕ್ರೈಬರ್ಸ್​ ಫೀಚರ್ ಮೂಲಕ ಇಷ್ಟೊಂದು ಆದಾಯ ಗಳಿಸುತ್ತಿದ್ದಾರೆ ಎಂಬ ಸುದ್ದಿ
  • ಪರ್ಪಲ್ ಹ್ಯಾಲ್ಸಿಯಾನ್ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 25,900 ಚಂದಾದಾರರನ್ನು ಹೊಂದಿರುವ ಅಶ್ವನಿ
  • ದೇಶಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಂತೆ ಇನ್​ಸ್ಟಾಗ್ರಾಂನಲ್ಲಿ ನಾಪತ್ತೆಯಾದ ಅಶ್ವನಿ ಅವರ ಖಾತೆ
Purple Halcyon : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತಹ ಒಂದು ಕುತೂಹಲಕಾರಿ ಸುದ್ದಿ ವೈರಲ್ ಆಗುತ್ತಿದೆ. ಅದೇನೆಂದರೆ, ಕೇರಳ ಮೂಲದ ಅಶ್ವನಿ ಎಂಬ ಯುವತಿ ಇನ್‌ಸ್ಟಾಗ್ರಾಮ್ ಮೂಲಕ ತಿಂಗಳಿಗೆ 1 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ತನ್ನ ಇನ್‌ಸ್ಟಾಗ್ರಾಂ ಸಬ್​ಸ್ಕ್ರೈಬರ್ಸ್​ ಫೀಚರ್ ಮೂಲಕ ಇಷ್ಟೊಂದು ಆದಾಯ ಗಳಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದಾಗ್ಯೂ, ಈ ಸುದ್ದಿ ನಿಜವೇ? ಅಥವಾ ಸುಳ್ಳಾ? ಎಂಬ ಗೊಂದಲದಲ್ಲಿ ಅನೇಕರಿದ್ದಾರೆ. ಆ ಗೊಂದಲವನ್ನು ನಾವಿಂದು ಪರಿಹರಿಸುತ್ತೇವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ಅಶ್ವನಿ ಅವರು ಪರ್ಪಲ್ ಹ್ಯಾಲ್ಸಿಯಾನ್ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 25,900 ಚಂದಾದಾರರನ್ನು ಹೊಂದಿದ್ದಾರೆ. ಪ್ರತಿ ಚಂದಾದಾರಿಕೆಯ ಬೆಲೆ 399 ರೂಪಾಯಿ. ಈ ಲೆಕ್ಕಾಚಾರವನ್ನು ನೋಡಿದರೆ, ಅವರ ಒಟ್ಟು ಆದಾಯ ಸುಮಾರು 1.03 ಕೋಟಿ ರೂಪಾಯಿ. ಈ ಲೆಕ್ಕಾಚಾರವು ಮೇಲ್ನೋಟಕ್ಕೆ ಸರಿಯಾಗಿದ್ದರೂ, ನೈಜ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರುವ ಸಾಧ್ಯತೆಯಿದೆ.
ಅಂದಹಾಗೆ, ಸಾಮಾಜಿಕ ಜಾಲತಾಣದಲ್ಲಿ ತೋರಿಸಿರುವ ಸಂಖ್ಯೆಗಳು ಸಂಪೂರ್ಣವಾಗಿ ನಿಜವಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಸಬ್​ಸ್ಕ್ರೈಬರ್ಸ್​ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಗಳಿವೆ. ಎರಡನೆಯದಾಗಿ, ಪ್ರತಿಯೊಬ್ಬ ಚಂದಾದಾರರು ಪ್ರತಿ ತಿಂಗಳು ಹಣ ಪಾವತಿಸುವುದನ್ನು ಮುಂದುವರಿಸುತ್ತಾರೆ ಎಂದು ಊಹಿಸುವುದು ಕಷ್ಟ. ಅನೇಕ ಜನರು ಒಮ್ಮೆ ಚಂದಾದಾರರಾಗಿ ನಂತರ ರದ್ದುಗೊಳಿಸುವ ಸಾಧ್ಯತೆಯಿದೆ. ಆದ್ದರಿಂದ, ಲೆಕ್ಕಾಚಾರಗಳು ಸೂಚಿಸುವಷ್ಟು ಆದಾಯ ಸ್ಥಿರವಾಗಿರುತ್ತದೆ ಎಂಬುದು ಖಚಿತವಿಲ್ಲ.
ಇಲ್ಲಿ ಇನ್ನೊಂದು ಮುಖ್ಯವಾದ ವಿಷಯವೆಂದರೆ ಇನ್​ಸ್ಟಾಗ್ರಾಂನಂತಹ ವೇದಿಕೆಗಳು ತಮ್ಮದೇ ಆದ ಕಮಿಷನ್ ತೆಗೆದುಕೊಳ್ಳುತ್ತವೆ. ಅಂದರೆ, ಬಳಕೆದಾರರು ಪಾವತಿಸುವ ಎಲ್ಲಾ ಹಣವು ಇನ್​ಫ್ಲ್ಯುಯೆನ್ಸರ್​ಗಳಿಗೆ ತಲುಪುವುದಿಲ್ಲ. ಒಂದು ನಿರ್ದಿಷ್ಟ ಶೇಕಡಾವಾರು ಮೊತ್ತ ಇನ್​ಸ್ಟಾ ಪ್ಲಾಟ್‌ಫಾರ್ಮ್‌ಗೆ ಹೋಗುತ್ತದೆ. ಅಲ್ಲದೆ, ತೆರಿಗೆಗಳು ಮತ್ತು ಇತರ ಖರ್ಚುಗಳನ್ನು ಕಡಿತಗೊಳಿಸಬೇಕಾಗುತ್ತದೆ. ಆದ್ದರಿಂದ, ಪಡೆದ ನಿವ್ವಳ ಆದಾಯವು ಕಾಣಿಸಿಕೊಳ್ಳುವ ಒಟ್ಟು ಆದಾಯಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ.
ಅದೇ ಸಮಯದಲ್ಲಿ ಇನ್​ಸ್ಟಾಗ್ರಾಂ ಚಂದಾದಾರಿಕೆ ಫೀಚರ್​ ಮೂಲಕ ಉತ್ತಮ ಆದಾಯ ಗಳಿಸುವುದು ಅಸಾಧ್ಯವಲ್ಲ. ನೀವು ವಿಶಿಷ್ಟ ಕಂಟೆಂಟ್​ ಮತ್ತು ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದರೆ, ಇನ್​ಫ್ಲ್ಯುಯೆನ್ಸರ್​ಗಳು ಲಕ್ಷ ಮತ್ತು ಕೋಟಿಯನ್ನು ಗಳಿಸುತ್ತಾರೆ. ಆದರೆ ಎಲ್ಲರೂ ಹೇಳುವಂತೆ ಇದು ಖಂಡಿತವಾಗಿಯೂ 1 ಕೋಟಿ ರೂ. ಎಂದು ಖಚಿತಪಡಿಸುವುದು ಕಷ್ಟ. ಈ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಸಂಪೂರ್ಣವಾಗಿ ದೃಢೀಕರಿಸಿಲ್ಲ.
ಒಟ್ಟಾರೆಯಾಗಿ, ಅಶ್ವನಿ ಎಂಬ ಯುವತಿ ಉತ್ತಮ ಆದಾಯ ಗಳಿಸುತ್ತಿದ್ದಾಳೆ ಎಂದು ಹೇಳಬಹುದು. ಆದರೆ, ವೈರಲ್ ಆಗುತ್ತಿರುವ ಅಂಕಿಅಂಶಗಳು ಸಂಪೂರ್ಣವಾಗಿ ನಿಜವೇ? ಅಥವಾ ಇಲ್ಲವೇ? ಎಂಬುದು ಸ್ಪಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬುವ ಮೊದಲು ಪರಿಶೀಲಿಸುವುದು ಬಹಳ ಮುಖ್ಯ. ಏಕೆಂದರೆ ಇಂತಹ ಸುದ್ದಿಗಳನ್ನು ಕೇವಲ ಆಕರ್ಷಣೆ ಮತ್ತು ವೈರಲ್ ಆಗಲು ಪೋಸ್ಟ್​ ಮಾಡಲಾಗುತ್ತದೆ. ಅಶ್ವನಿ ಅವರು 2026 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ಭಾರತೀಯ ಡಿಜಿಟಲ್ ಕ್ರಿಯೇಟರ್​ಗಳಲ್ಲಿ ಒಬ್ಬರು. ಬ್ರ್ಯಾಂಡ್ ಪ್ರಮೋಷನ್​ಗಳನ್ನು ಅವಲಂಬಿಸುವ ಬದಲು ನೇರವಾಗಿ ಫಾಲೋವರ್ಸ್​ಗಳಿಂದ ಹಣ ಗಳಿಸುವ ಆಲೋಚನೆ ಮೂಲಕ ಸುದ್ದಿಯಾಗಿದ್ದಾರೆ.

ಇನ್​ಸ್ಟಾ ಅಕೌಂಟ್ ಮಾಯ​

ಅಚ್ಚರಿಯ ಸಂಗತಿ ಏನೆಂದರೆ, ಅಶ್ವನಿ ಅವರ ಇನ್​ಸ್ಟಾಗ್ರಾಂ ಖಾತೆ ನಾಪತ್ತೆಯಾಗಿದೆ. ಹೌದು, ಇತ್ತೀಚೆಗೆ ಎಲ್ಲರ ಗಮನ ಸೆಳೆದಿರುವ ಅಶ್ವನಿ ಅವರ ಪ್ರೊಫೈಲ್ ಇನ್‌ಸ್ಟಾಗ್ರಾಂನಲ್ಲಿ ಕಾಣಿಸುತ್ತಿಲ್ಲ. ಸರ್ಚ್​ ಬಾರ್​ನಲ್ಲಿ ಎಷ್ಟೇ ಹುಡುಕಾಡಿದರೂ ಖಾತೆ ಪತ್ತೆಯಾಗುತ್ತಿಲ್ಲ. ಬಾಹ್ಯ ಲಿಂಕ್‌ಗಳ ಮೂಲಕ ಇನ್​ಸ್ಟಾ ಅಕೌಂಟ್​ ಪ್ರವೇಶಿಸಲು ಪ್ರಯತ್ನಿಸಿದರು ಕೂಡ ಪುಟ ಲಭ್ಯವಿಲ್ಲ ಎಂದು ತೋರಿಸುತ್ತಿದೆ. ಅಶ್ವನಿ ಅವರು ಇನ್‌ಸ್ಟಾಗ್ರಾಂನಲ್ಲಿ 25,000 ಪಾವತಿಸಿದ ಸಬ್​ಸ್ಕ್ರೈಬರ್ಸ್​ ಮೈಲಿಗಲ್ಲನ್ನು ದಾಟಿದ್ದಾರೆ ಎಂದು ವರದಿ ಮಾಡಿದ ಸ್ವಲ್ಪ ಸಮಯದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ಜಾಲತಾಣದಲ್ಲಿ ಅಶ್ವನಿ ಅವರ ಸಖತ್​ ಸದ್ದು ಮಾಡುತ್ತಿದ್ದಾರೆ. ಸುಮಾರು 1 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಅವರ ಇನ್​ಸ್ಟಾ ಖಾತೆ ಮಾಯ ಆಗಿರುವುದು ಭಾರಿ ಕುತೂಹಲ ಕೆರಳಿಸಿದೆ. ಖಾತೆಯನ್ನು ಸ್ವತಃ ಇನ್​ಸ್ಟಾಗ್ರಾಂ ತನ್ನ ವೇದಿಕೆಯಿಂದ ತೆಗೆದುಹಾಕಲಾಗಿದೆಯೇ? ಅಥವಾ ಅಶ್ವಿನಿ ಅವರೇ ನಿಷ್ಕ್ರಿಯಗೊಳಿಸಿದ್ದಾರೆಯೇ ಅಥವಾ ಬಳಕೆದಾರರು ರಿಪೋರ್ಟ್​ ಮಾಡಿದ್ದರಿಂದ ಅದನ್ನು ಡಿಲೀಟ್​ ಮಾಡಲಾಗಿದೆಯೇ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ಸ್ಪಷ್ಟೀಕರಣವಿಲ್ಲ.
ತಮ್ಮ ಇನ್​ಸ್ಟಾ ಖಾತೆ ಮಾಯವಾಗುವ ಮೊದಲು ಅಶ್ವನಿ ಅವರು 285,000 ಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದರು ಮತ್ತು 100 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಮಾಡಿದ್ದರು. ಪರ್ಪಲ್ ಹಾಲ್ಸಿಯಾನ್ ಹೆಸರಿನಲ್ಲಿ, ಅಶ್ವನಿ ಎ ಪ್ರಯಾಣ, ಫ್ಯಾಷನ್ ಮತ್ತು ಜೀವನಶೈಲಿಯನ್ನು ಕೇಂದ್ರವಾಗಿಟ್ಟುಕೊಂಡು ವಿಡಿಯೋಗಳನ್ನು ಮಾಡುತ್ತಿದ್ದರು. ಇನ್​ಸ್ಟಾಗ್ರಾಂನ ಸಬ್​ಸ್ಕ್ರೈಬರ್ಸ್​ ಫೀಚರ್​ ಮೇಲೆ ಮೇಲೆ ಹೆಚ್ಚು ಗಮನಹರಿಸಿದ್ದರು. ಈ ಫೀಚರ್​ನಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ಗೋಚರಿಸದ ವಿಶೇಷ ಪೋಸ್ಟ್‌ಗಳು, ಕಥೆಗಳು ಮತ್ತು ರೀಲ್‌ಗಳನ್ನು ನೋಡಲು ಸಬ್​ಸ್ಕ್ರೈಬ್​ ಆದವರಿಗೆ ಅನುವು ಮಾಡಿಕೊಡುತ್ತದೆ. ಆದರೆ, ಸಬ್​ಸ್ಕ್ರೈಬ್​ ಮಾಡಿಕೊಳ್ಳುವವರು ಮಾಸಿಕ ಶುಲ್ಕವನ್ನು ಪಾವತಿಸಬೇಕು.
ಅಶ್ವನಿ ಅವರ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಖಾತೆಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಇದರ ಬೆನ್ನಲ್ಲೇ ಅವರ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಸೃಷ್ಟಿಯಾಗಿದ್ದು, ಅವುಗಳ ಅಧಿಕೃತತೆಯ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ಹಿಂದೆ ತಮ್ಮ ರೀಲ್ಸ್ ವಿಚಾರವಾಗಿ ಟೀಕೆ ಎದುರಿಸಿದ್ದ ಅಶ್ವನಿ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈಗ ಅವರ ಖಾತೆಗಳು ಡಿಲೀಟ್ ಆಗಿರುವುದಕ್ಕೂ ಈ ಹಿಂದಿನ ವಿವಾದಗಳಿಗೂ ಸಂಬಂಧವಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಸದ್ಯಕ್ಕೆ ಅವರ ಯಾವುದೇ ಖಾತೆಗಳು ಸರ್ಚ್ ರಿಸಲ್ಟ್‌ನಲ್ಲಿ ಕಾಣಿಸುತ್ತಿಲ್ಲವಾದರೂ, ಹಳೆಯ ವಿಡಿಯೋಗಳು ಹ್ಯಾಶ್‌ಟ್ಯಾಗ್ ಮೂಲಕ ಹರಿದಾಡುತ್ತಿವೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಸಂಸ್ಥೆಯಾಗಲಿ ಅಥವಾ ಸ್ವತಃ ಅಶ್ವನಿ ಅವರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಅವರ ಖಾತೆಗಳು ಶಾಶ್ವತವಾಗಿ ಸ್ಥಗಿತಗೊಂಡಿವೆಯೇ ಅಥವಾ ಶೀಘ್ರದಲ್ಲೇ ಮರುಸ್ಥಾಪನೆಗೊಳ್ಳಲಿವೆಯೇ ಎಂಬ ಕುತೂಹಲ ಹಾಗೆಯೇ ಉಳಿದಿದೆ, (ಏಜೆನ್ಸೀಸ್​).