ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ: ಅಸ್ಪೃಶ್ಯತೆಯ ಮತ್ತೊಂದು ಹೆಸರೇ ಶುದ್ದೀಕರಣ ಎಂದು ಶನಿವಾರ(ಆ. 29) ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ದಲಿತರು ಸಾವಿರಾರು ವರ್ಷಗಳಿಂದ ತಾರತಮ್ಯ ಎದುರಿಸುತ್ತಿದ್ದಾರೆ. ಸಂವಿಧಾನದ ರಕ್ಷಣೆಗಳ ಹೊರತಾಗಿಯೂ ಈಗಲೂ ದಲಿತರು ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ದಲಿತ ಹೆಚ್ಚು ಯಶಸ್ವಿಯಾದಷ್ಟೂ ಅವನ ಮೇಲೆ ಹೆಚ್ಚು ದಾಳಿ ನಡೆಯುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಉತ್ತರಾಖಂಡಕ್ಕೆ ಭೇಟಿ ನೀಡಿ ಭಾಷಣ ಮಾಡಿದ ಬಳಿಕ ಸ್ಥಳವನ್ನು ಶುದ್ದೀಕರಣ ಮಾಡಿದ ಘಟನೆಯನ್ನು ಉಲ್ಲೇಖಿಸಿ ದಲಿತರು ಎದುರಿಸುತ್ತಿರುವ ತಾರತಮ್ಯಕ್ಕೆ ಇದು ಉದಾಹರಣೆಯಾಗಿದೆ ಎಂದಿದ್ದಾರೆ.
ಶುದ್ದೀಕರಣ ಎನ್ನುವುದು ಅಸ್ಪೃಶ್ಯತೆಯ ಮತ್ತೊಂದು ಹೆಸರು. ದಲಿತರು ಎದುರಿಸುತ್ತಿರುವ ತಾರತಮ್ಯಕ್ಕೆ ಉದಾಹರಣೆಯಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಅಸ್ಪೃಶ್ಯತೆಯನ್ನು ಬಹಿರಂಗವಾಗಿ ಆಚರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದು ಕಾನೂನಿನಡಿಯಲ್ಲಿ ಅಪರಾಧವಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).