ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ 
ದೇಶ

ಹಿಂಸಾಚಾರಕ್ಕೆ ತಿರುಗಿದ Punjab LPU ವಿವಿ ಸ್ಟೂಡೆಂಟ್ಸ್ ಪ್ರತಿಭಟನೆ; 10 ದಿನ ಕ್ಲಾಸಸ್ ಬಂದ್, ಪರೀಕ್ಷೆ ಮುಂದೂಡಿಕೆ

  • ಹಿಂಸಾಚಾರಕ್ಕೆ ತಿರುಗಿದ Punjab LPU ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

  • 10 ದಿನ ಕ್ಲಾಸಸ್​ ಬಂದ್​, ಮಧ್ಯಂತರ ಪರೀಕ್ಷೆಯನ್ನು ಮುಂದೂಡಿದ ವಿವಿ

  • ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡ ಆಡಳಿತ ಮಂಡಳಿ

ಚಂಡೀಗಢ; ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಪಂಜಾಬ್‌ನ ಫಾಗ್ವಾರಾದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು)ದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗಿದೆ. ಪ್ರಕರಣದ ಗಂಭೀರತೆ ಹಾಗೂ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ಇಂದಿನಿಂದ(ಸೆ.28)ರಿಂದ 10 ದಿನಗಳ ಕಾಲ ತರಗತಿಗಳನ್ನು ಬಂದ್​​ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ.

ವಿದ್ಯಾರ್ಥಿನಿ ಮೇಲೆ ಹೊರಗಿನ ವ್ಯಕ್ತಿಯೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಎಲ್‌ಪಿಯು ವಿವಿಯ ಮಹಿಳಾ ವಿದ್ಯಾರ್ಥಿನಿಲಯದ ಎದುರು ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ಮಾಸ್ಕ್​​ ಧರಿಸಿದ್ದ ಕೆಲವರು ಮಾಲ್​, ಮಳಿಗೆಗಳ ಕಿಟಕಿ, ಗಾಜುಗಳನ್ನು ದ್ವಂಸಗೊಳಿಸಿ ಬೆಂಕಿ ಹಂಚಿದರು. ಅಂಗಡಿಗಳಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು, ಎಟಿಎಂ ಕಿಯೋಸ್ಕ್​​​ ಹಾಗೂ ಕೆಲವು ವಾಹನಕ್ಕೆ ಹಾನಿಯಾಗಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿಗಳ ಆರೋಪವೇನು?

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ ಎಂದು ನಾವು ವಾರ್ಡನ್​ಗೆ ಮಾಹಿತಿ ಕೊಟ್ಟಿದ್ದೆವು. ಆದರೂ ಸಹ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ರಸ್ತೆಗಳು, ಹೆದ್ದಾರಿಗಳ ಮೇಲೆ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಪ್ರತಿಭಟನೆ ನಡೆಸಿದರು.

10ದಿನ ಎಲ್ಲವೂ ಬಂದ್​​

ವಿದ್ಯಾರ್ಥಿಗಳ ಪ್ರತಿಭಟನೆಯೂ ಹಿಂಸಾತ್ಮಕವಾಗಿ ಬದಲಾಗಿರುವ ಕಾರಣ 10 ದಿನ ತರಗತಿಗಳನ್ನು ಬಂದ್​​ ಮಾಡಿದ್ದು, ನಡೆಯಬೇಕಿದ್ದ ಮಿಡ್​ಟರ್ಮ್​ ಪರೀಕ್ಷೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ (UMS) ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು LPU ಹೇಳಿಕೆಯಲ್ಲಿ ತಿಳಿಸಿದೆ.

ಶಾಂತಿ ಕಾಪಾಡಲು ಮನವಿ

ಮುಂದಿನ ಸೂಚನೆ ಬರುವವರೆಗೂ ಶಾಂತವಾಗಿರಲು ಮತ್ತು ಅಧಿಕೃತ ಸೂಚನೆಗಳನ್ನು ಪಾಲಿಸಲು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡಿದೆ. ಅಲ್ಲದೆ 10 ದಿನಪೋಷಕರೊಂದಿಗೆ ಸಮಾಲೋಚಿಸಿ, ಊರುಗಳಿಗೆ ಪ್ರಯಾಣಿಸಲು ಸಹ ಅವಕಾಶ ನೀಡಲಾಗಿದೆ.

ಕ್ಯಾಂಪಸ್‌ನಲ್ಲಿಯೇ ಉಳಿಯಲು ಬಯಸುವವರು ವಸತಿ ನಿಲಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಡೆದುಕೊಳ್ಳಲು, ಶಾಂತ ರೀತಿಯಲ್ಲಿ ವರ್ತಿಸಲು ಮನವಿ ಮಾಡಿಕೊಂಡಿದ್ದಾರೆ.

ಏನಿದು ಘಟನೆ, ಏನೆಲ್ಲ ಆಯ್ತು?

ಮೂರು ದಿನದ ಹಿಂದೆ ಪ್ಲಂಬರ್​ವೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ತೆಲಂಗಾಣ ಮೂಲದ ಆಕೆ 15 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಾರ್ಡನ್​ಗೆ ದೂರು ಕೊಟ್ಟರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪಂಜಾಬ್​ ವಿವಿಯ ವಿದ್ಯಾರ್ಥಿಗಳು ಭಾನುವಾರ ನಡುರಾತ್ರಿ 1 ಗಂಟೆ ಸುಮಾರಿಗೆ ಬಾಲಕಿಯರ ಹಾಸ್ಟೆಲ್ -3 ಬಳಿ ಪ್ರತಿಭಟನೆ ಆರಂಭಿಸಿದರು. 4-5 ಪೊಲೀಸ್​ ವಾಹನಗಳನ್ನು ಹಾಳು ಮಾಡಲಾಗಿದೆ.

ವಿಶ್ವವಿದ್ಯಾಲಯದ ಮಾಲ್‌ನಲ್ಲಿರುವ ಅಂಗಡಿಗಳಿಗೆ ಹಾನಿಯಾಗಿದೆ. ಕೆಲವು ಪ್ರತಿಭಟನಾಕಾರರು ನಿಷ್ಕ್ರೀಯಗೊಂಡ MiG-23UM ವಿಮಾನ ಮತ್ತು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಮಿಲಿಟರಿ ಟ್ಯಾಂಕ್ ಅನ್ನು ಹತ್ತಿ ಪ್ರತಿಭಟಿಸಿರುವುದು, ರಸ್ತೆಗಳಲ್ಲಿನ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಿರುವ ವಿಡಿಯೋ ಇದೆ. ಜೊತೆಗೆ ವಿದ್ಯಾರ್ಥಿಗಳನ್ನು ತಡೆಯಲು ಬಂದ ಕೆಲ ಪೊಲೀಸ್​ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ.

FIR ದಾಖಲು, SIT ರಚನೆ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಅನ್ನು ಸಹ ರಚಿಸಿದೆ. ಸಿಸಿಟಿವಿ ದೃಶ್ಯಾವಳಿಗಳು, ಕಾಲ್​ ಡಿಟೇಲ್ಸ್​, ವಿಧಿ ವಿಜ್ಞಾನತಂಡದಿಂದ ಮಾದರಿ ಸಂಗ್ರಹಿಸಲಾಗಿದೆ ಎಂದು ಜಲಂಧರ್ ವಲಯ ಡಿಐಜಿ ನವೀನ್ ಸಿಂಗ್ಲಾ ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್).