ಚಂಡೀಗಢ: ಹಬ್ಬ ಬಂದಾಗಲೆಲ್ಲ ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ. ಕಳೆದ 15 ವರ್ಷಗಳಿಂದ ಯಾರಿಗೂ ತಿಳಿಯದಂತೆ ಈ ಹವ್ಯಾಸವನ್ನು ಮುಂದುವರಿಸಿದ್ದ ವ್ಯಕ್ತಿಗೆ ಕೊನೆಗೂ ಅದೃಷ್ಟ ಖುಲಾಯಿಸಿದೆ. ಪಂಜಾಬ್ನ ಟ್ರಕ್ ಚಾಲಕ ಹಾಗೂ ಸಣ್ಣ ರೈತರೊಬ್ಬರು 500 ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್ಗೆ ಬರೋಬ್ಬರಿ 12 ಕೋಟಿ ಬಹುಮಾನ ಗೆದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.
ಪಂಜಾಬ್ನ ಮೊಹಾಲಿ ಜಿಲ್ಲೆಯ ಡೇರಾ ಬಸ್ಸಿ ಪ್ರದೇಶದ ಹಮ್ಯೂನ್ಪುರ ಗ್ರಾಮದ ಬಲ್ಜಿಂದರ್ ಸಿಂಗ್ ಈ ಅದೃಷ್ಟಶಾಲಿ. ಇಬ್ಬರು ಮಕ್ಕಳ ತಂದೆಯಾಗಿರುವ ಅವರು, 2010ರಿಂದ ಪ್ರತಿ ಹಬ್ಬದ ಸಂದರ್ಭದಲ್ಲೂ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಆದರೆ ಈ ವಿಷಯವನ್ನು ಕುಟುಂಬದವರಿಂದಲೂ ಗೌಪ್ಯವಾಗಿಟ್ಟಿದ್ದರು. 2010ರಿಂದಲೂ ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ. ಒಂದು ದಿನವಾದರೂ ದೇವರು ನನ್ನ ಪ್ರಾರ್ಥನೆಗೆ ಉತ್ತರಿಸಿ ಬಹುಮಾನ ಕೊಡುತ್ತಾನೆ ಎಂಬ ನಿರೀಕ್ಷೆ ಇತ್ತು ಎಂದು ಬಲ್ಜಿಂದರ್ ಸಿಂಗ್ ಸುದ್ದಿಗಾರರೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಈ ಬಾರಿ ದೀಪಾವಳಿ ಬಂಪರ್ ಲಾಟರಿಯಲ್ಲಿ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದ್ದ ಬಲ್ಜಿಂದರ್ ಸಿಂಗ್, ಮೊಹಾಲಿಯ ಜಿರಕ್ಪುರದಲ್ಲಿರುವ ಲಾಟರಿ ಅಂಗಡಿಯೊಂದರಲ್ಲಿ 500 ನೀಡಿ ಟಿಕೆಟ್ ಖರೀದಿಸಿದ್ದರು. ನವೆಂಬರ್ 16ರಂದು ಪಂಜಾಬ್ ರಾಜ್ಯದ ಡಿಯರ್ ದೀಪಾವಳಿ ಬಂಪರ್ 2026 ಲಾಟರಿ ಡ್ರಾ ನಡೆದಿತ್ತು. ಸೋಮವಾರ ರಾತ್ರಿ ಲಾಟರಿ ಫಲಿತಾಂಶದ ಬಗ್ಗೆ ತಿಳಿದ ಅವರಿಗೆ ಮೊದಲಿಗೆ ನಂಬಲಾಗಲಿಲ್ಲ. ಬರೋಬ್ಬರಿ 12 ಕೋಟಿ ಪ್ರಥಮ ಬಹುಮಾನ ತಮ್ಮದಾಗಿರುವುದು ಖಚಿತವಾದ ಬಳಿಕ ಸಂತಸಕ್ಕೆ ಪಾರವೇ ಇರಲಿಲ್ಲ. ಮಂಗಳವಾರ ಲಾಟರಿ ಕಚೇರಿಗೆ ಭೇಟಿ ನೀಡಿದ ಅವರು ಬಹುಮಾನದ ಹಣ ಪಡೆಯಲು ಅಗತ್ಯ ದಾಖಲೆ ಮತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ : ಕರಾವಳಿಗೆ ಅಪ್ಪಳಿಸಿದ ಅಕ್ವಾನ್ ಚಂಡಮಾರುತ! 3 ಲಕ್ಷ ಜನರ ಸ್ಥಳಾಂತರ|Cyclone Akvan
ಇಷ್ಟು ದೊಡ್ಡ ಮೊತ್ತದ ಹಣ ಕೈ ಸೇರಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಬಲ್ಜಿಂದರ್ ಸಿಂಗ್ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಗೆದ್ದ ಹಣದ ಬಹುಪಾಲನ್ನು ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಬಳಸುವುದಾಗಿ ತಿಳಿಸಿದ್ದಾರೆ. ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಬಲ್ಜಿಂದರ್ ಅವರ ಮನೆಗೆ ಜನರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಕುಟುಂಬದವರೊಂದಿಗೆ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. 15 ವರ್ಷಗಳಿಂದ ಯಾರಿಗೂ ತಿಳಿಯದಂತೆ ಮುಂದುವರಿಸಿದ್ದ ಹವ್ಯಾಸವೊಂದು ಈಗ ಅವರ ಬದುಕಿನ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ. 500ರ ಟಿಕೆಟ್ನಿಂದ 12 ಕೋಟಿ ಒಲಿದಿರುವುದು ಗ್ರಾಮಸ್ಥರಲ್ಲೂ ಅಚ್ಚರಿ ಮೂಡಿಸಿದೆ.