- ಜಲಂಧರ್‌ನಲ್ಲಿ ವೈದ್ಯೆ ಸಾವು, ಪತಿಯಿಂದಾಗುತ್ತಿದ್ದ ದೈಹಿಕ ಹಲ್ಲೆಯೇ ಕಾರಣ ಎಂದ ಕುಟುಂಬಸ್ಥರು
- ಅಕ್ಟೋಬರ್ 2018ರಲ್ಲಿ ಡಾ. ಮೀನಾಕ್ಷಿ ಸೂದ್ ಮತ್ತು ವೈದ್ಯ ಪಿಯೂಷ್ ಜೊತೆಗೆ ಮದುವೆ
- ಡಾ.ಮೀನಾಕ್ಷಿ ಮೇಲೆ ಸಾಕಷ್ಟು ಸಾಲದ ಹೊರೆ ಇತ್ತು ಎಂದ ಕುಟುಂಬಸ್ಥರು
Punjab doctor found dead : ವೈದ್ಯೆಯೊಬ್ಬರು ಪಂಜಾಬ್ನ ಜಲಂಧರ್ನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಗಂಡನಿಂದಾಗುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳ ಹಾಗೂ ಅಕ್ರಮ ಸಂಬಂಧವೇ ಕಾರಣ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಕಪುರ್ತಲಾದಲ್ಲಿ ನಿಯೋಜನೆಗೊಂಡಿದ್ದ ಸರ್ಕಾರಿ ವೈದ್ಯೆ ಡಾ. ಮೀನಾಕ್ಷಿ ಸೂದ್ ಹಾಗೂ ಜಲಂಧರ್‌ನಲ್ಲಿ ರಾಷ್ಟ್ರೀಯ ಕಣ್ಣಿನ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯ ಪಿಯೂಷ್ ಅಕ್ಟೋಬರ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಖುಷಿಯಲ್ಲಿ ಥಾರ್ ಕಾರನ್ನು ಖರೀದಿ ಮಾಡಿದರು. ಕಾಲಾನಂತರದಲ್ಲಿ ಅದರ EMI ಅನ್ನು ಮೀನಾಕ್ಷಿ ಪಾವತಿ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ವೈದ್ಯೆ ಮೀನಾಕ್ಷಿ ಅವರು ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಎಲ್ಲಾ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದರಿಂದ, ಪೊಲೀಸರು ಮನೆಯೊಳಗೆ ಪ್ರವೇಶಿಸಲು ಗಾಜಿನ ಕಿಟಕಿಗಳನ್ನು ಒಡೆದು ಹಾಕಬೇಕಾಯಿತು. ಅವರು ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ವಿವಾಹೇತರ ಸಂಬಂಧ ಆರೋಪ
ಮೀನಾಕ್ಷಿ ಅವರ ಕುಟುಂಬಸ್ಥರು ಹೇಳಿದ್ದಿಷ್ಟು, ಡಾ, ಪಿಯೂಷ್ಗೆ ಆಸ್ಪತ್ರೆಯ ನರ್ಸ್ ಜೊತೆ ವಿವಾಹೇತರ ಸಂಬಂಧವಿತ್ತು. ಈ ಬಗ್ಗೆ ಮೀನಾಕ್ಷಿಗೆ ಹೇಗೋ ವಿಚಾರ ಗೊತ್ತಾಗಿ ನಂಬಲಾಗದೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಲೆ ಪಿಯೂಷ್ ಮತ್ತು ನರ್ಸ್ ಒಟ್ಟಾಗಿ ಸಲುಗೆಯಿಂದ ಇರುವುದು ಖಚಿತವಾಗಿದೆ. ಪಿಯೂಷ್ ಮಗಳನ್ನು ಹೊಡೆಯುತ್ತಿದ್ದ.
'ಹಲ್ಲೆಯ ನಂತರ ಪಿಯೂಷ್ ನನಗೆ ಕರೆ ಮಾಡಿ ನಾನು ಮೀನಾಕ್ಷಿಯನ್ನು ಹೊಡೆದಿದ್ದೇನೆ, ನಾನು ತಪ್ಪು ಮಾಡಿದೆ' ಎಂದು ಹೇಳುತ್ತಿದ್ದ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ಪತಿ ನೀಡುತ್ತಿದ್ದ ಹಲ್ಲೆಯಿಂದ ಬೇಸತ್ತ ಮೀನಾಕ್ಷಿ ಜುಲೈ 2025 ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳು. ಡಿವೋರ್ಸ್ಗಾಗಿ ಕಾಯುತ್ತಿದ್ದಳು. ನಾವೇ ಸ್ವಲ್ಪ ಕಾಯಿ ಎಂದಿದ್ದೆವು ಎಂದರು
ಕೋಟಿ ಕೋಟಿ ಸಾಲ ಸಾವಿಗೆ ಕಾರಣ?
'ಮೀನಾಕ್ಷಿ ಈ ತಿಂಗಳು ಸ್ವಂತ ಮನೆ ಖರೀದಿಸಬೇಕು ಎಂದಿದ್ದಳು. ಕೆಲವು ದಿನಗಳ ಹಿಂದೆ ಅದಕ್ಕಾಗಿ ಅವರು ಬ್ಯಾಂಕಿಗೆ ಹೋದಾಗ, ಅವರ ಹೆಸರಿನಲ್ಲಿ ಈಗಾಗಲೇ 2.5 ಕೋಟಿ ರೂ. ಸಾಲ ಇದೆ ಎನ್ನುವುದು ತಿಳಿಯಿತು. ಕೆಲವು ಕಾರಿಗೆ ಇನ್ನು ಕೆಲವು ಆಸ್ಪತ್ರೆ ವಿಚಾರವಾಗಿ ದಾಖಲೆ ಇಲ್ಲದೆ, ಸಹಿ ಇಲ್ಲದೆ ಸಾಲ ಪಡೆಯಲಾಗಿದೆ' ಎಂದಿದ್ದಾರೆ.
ಪೊಲೀಸ್ ಠಾಣೆ ವಿಭಾಗ ಸಂಖ್ಯೆ 6 ರ ಸ್ಟೇಷನ್ ಹೌಸ್ ಅಧಿಕಾರಿ ಸುಶೀಲ್ ಕುಮಾರ್ ಮಾತನಾಡಿ, 'ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ನಮಗೆ ತಿಳಿದಿಲ್ಲ. ಮರಣೋತ್ತರ ಪರೀಕ್ಷೆಯಿಂದ ಮಾತ್ರ ಕಾರಣ ತಿಳಿದುಬರುತ್ತದೆ. ಮಹಿಳೆಯ ಕುಟುಂಬಸ್ಥರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪಿಯೂಷ್ ಅವರ ಫೋನ್ ಪ್ರಸ್ತುತ ಸ್ವಿಚ್ ಆಫ್ ಆಗಿದೆ. ಇನ್ನೂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ' ಎಂದು ತಿಳಿಸಿದ್ದಾರೆ.