Punjab Congress | ನಮಗೆ ರಾಜಿ ಮಾಡಿಕೊಳ್ಳುವ ನಾಯಕ ಬೇಡವೇ ಬೇಡ ಎಂದು ತೊಡೆತಟ್ಟಿದ ರೆಬೆಲ್ಸ್ ಟೀಮ್  
ದೇಶ

ವಾರಿಂಗ್​ ಜೊತೆ ಚೆನ್ನಿ ಬಣದ ವಾರ್​​!...ನಮಗೆ ರಾಜಿ ಮಾಡಿಕೊಳ್ಳುವ ನಾಯಕ ಬೇಡವೇ ಬೇಡ ಎಂದು ತೊಡೆತಟ್ಟಿದ ರೆಬೆಲ್ಸ್ ಟೀಮ್ | Punjab Congress

ಚಂಡೀಗಢ: ರಾಜ್ಯ ಉಸ್ತುವಾರಿ ಭೂಪೇಶ್ ಬಘೇಲ್ ಕರೆದಿದ್ದ ಪ್ರಮುಖ ಸಭೆಯು ಬಂಡಾಯ ಬಣಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವಲ್ಲಿ ವಿಫಲವಾದ ನಂತರ, ಪಂಜಾಬ್ ಕಾಂಗ್ರೆಸ್‌ನಲ್ಲಿ (Punjab Congress) ತೀವ್ರಗೊಂಡಿರುವ ಆಂತರಿಕ ಕದನವು ಈಗ ಪಕ್ಷದ ಕೇಂದ್ರ ನಾಯಕತ್ವದ ಅಂಗಳಕ್ಕೆ ತಲುಪಲು ಸಜ್ಜಾಗಿದೆ.
ಚರಂಜಿತ್ ಸಿಂಗ್ ಚನ್ನಿ ಅವರನ್ನು ಬೆಂಬಲಿಸುವ ನಾಯಕರು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ನೇತೃತ್ವಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಅಲ್ಲದೆ, ಕೆಲವು ನಾಯಕರು ಚನ್ನಿ ಅವರನ್ನೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ವಾರಿಂಗ್ ನಾಯಕತ್ವಕ್ಕೆ ಚನ್ನಿ ಕ್ಯಾಂಪ್ ವಿರೋಧ

ಪಕ್ಷದ ಮೂಲಗಳ ಪ್ರಕಾರ, ಬಘೇಲ್ ಮತ್ತು ಚರಂಜಿತ್ ಸಿಂಗ್ ಚನ್ನಿ-ಸುಖ್‌ಜಿಂದರ್ ಸಿಂಗ್ ರಾಂಧವಾ ಬಣದ ನಾಯಕರ ನಡುವಿನ ಸಭೆಯು ಯಾವುದೇ ಅಂತಿಮ ನಿರ್ಧಾರವಿಲ್ಲದೇ ಅಂತ್ಯಗೊಂಡಿದೆ. ಚನ್ನಿ ಮತ್ತು ರಾಂಧವಾ ಇಬ್ಬರೂ ತಮ್ಮ ಬೇಡಿಕೆಗಳ ಮೇಲೆ ದೃಢವಾದ ನಿಲುವು ತಳೆದಿದ್ದಾರೆ. ಯಾವುದೇ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರಕ್ಕಾಗಿ ವಿಷಯವನ್ನು ಈಗ ಕಾಂಗ್ರೆಸ್ ಹೈಕಮಾಂಡ್‌ ಅಂಗಳಕ್ಕೆ ತಲುಪಿಸಲು ತೀರ್ಮಾನಿಸಲಾಗಿದೆ.
ರಾಜಾ ವಾರಿಂಗ್ ನಾಯಕತ್ವದಲ್ಲಿ ಪಂಜಾಬ್ ಚುನಾವಣೆಯನ್ನು ಎದುರಿಸಲು ತಮಗೆ ಇಷ್ಟವಿಲ್ಲ ಎಂದು ಹಲವು ನಾಯಕರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾರಿಂಗ್ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ ಎಂದು ವಾದಿಸಿರುವ ನಾಯಕರು, ತಕ್ಷಣವೇ ಹೊಸ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ಗೆ ರಾಜಿ ಮಾಡಿಕೊಳ್ಳುವ ನಾಯಕನ ಅಗತ್ಯವಿಲ್ಲ

ಸಭೆಯ ಬಳಿಕ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಸುಖ್‌ಜಿಂದರ್ ಸಿಂಗ್ ರಾಂಧವಾ, ಹಾಲಿ ಅಧ್ಯಕ್ಷರ ವಿರುದ್ಧದ ತಮ್ಮ ವಿರೋಧವನ್ನು ಪುನರುಚ್ಚರಿಸಿದ್ದು, ಪಂಜಾಬ್ ಕಾಂಗ್ರೆಸ್‌ಗೆ ರಾಜಿ ಮಾಡಿಕೊಳ್ಳುವ ನಾಯಕನ ಅಗತ್ಯವಿಲ್ಲ ಎಂದು ಹೇಳಿದರು. ರಾಂಧವಾ ಅವರ ಹೇಳಿಕೆಗಳ ಜೊತೆಗೆ ಸಭೆಯ ವಿಡಿಯೋ ಕೂಡ ಬಿಡುಗಡೆಯಾಗಿದ್ದು, ಇದು ರಾಜ್ಯ ಘಟಕದಲ್ಲಿ ಮುಂದುವರಿದಿರುವ ತೀವ್ರ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ.
ಪಕ್ಷದ ನಾಯಕರನ್ನು ಭೇಟಿಯಾದ ನಂತರ ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೂಪೇಶ್ ಬಘೇಲ್, ತಾವು ಹಲವು ನಾಯಕರನ್ನು ಅವರ ನಿವಾಸಗಳಲ್ಲಿ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿರುವುದಾಗಿ ತಿಳಿಸಿದರು. ನಮಗೆ ಪಕ್ಷದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ನಾಯಕ ಬೇಡ. ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬ ನಾಯಕನಿಗೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಹಕ್ಕಿದೆ. ಹೈಕಮಾಂಡ್ ತೆಗೆದುಕೊಂಡ ನಿರ್ಧಾರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶಿಸ್ತಿನ ಗಡಿ ದಾಟುವ ಯಾರೇ ಆಗಲಿ ಅವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ. ಸರ್ಕಾರ ರಚನೆಯಾದ ನಂತರ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಘೇಲ್ ಹೇಳಿದರು.

ಪಂಜಾಬ್ ಕಾಂಗ್ರೆಸ್‌ನಲ್ಲಿ ಕಿತ್ತಾಟ ಏಕೆ..?

2022 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ವಿರುದ್ಧ ಕಾಂಗ್ರೆಸ್ ಸೋತಾಗಿನಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕಿತ್ತಾಟ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಾಂಸ್ಥಿಕ ನೇಮಕಾತಿಗಳು, ನಾಯಕತ್ವದ ಶೈಲಿ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಸಿದ್ಧಗೊಳಿಸುವ ತಂತ್ರಗಳ ಬಗ್ಗೆ ಬಣಗಳ ನಡುವೆ ಪದೇ ಪದೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪಕ್ಷವನ್ನು ಮತ್ತೆ ಸಂಘಟಿಸುವ ಜವಾಬ್ದಾರಿಯೊಂದಿಗೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ಪಂಜಾಬ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಚನ್ನಿ, ಸುಖ್‌ಜಿಂದರ್ ಸಿಂಗ್ ರಾಂಧವಾ ಮತ್ತು ಹಲವು ಶಾಸಕರು ಸೇರಿದಂತೆ ಹಿರಿಯ ನಾಯಕರ ಒಂದು ವಿಭಾಗವು ಅವರ ನಾಯಕತ್ವದಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸುತ್ತಿರುವುದು ಹೈ ಕಮಾಂಡ್​ ತಲೆ ನೋವಿಗೆ ಕಾರಣವಾಗಿದೆ(ಏಜೆನ್ಸೀಸ್​).