Ketan Agrawal Murder Case
- ಪ್ರಿಯಕರನ ಜತೆ ಸೇರಿ ಭಾವಿ ಪತಿಯ ಪ್ರಪಾತಕ್ಕೆ ತಳ್ಳಿ ಕೊಲೆ
- ಉದ್ಯಮಿ ಅಗರ್‌ವಾಲ್ ಸಾವು ಆಕಸ್ಮಿಕ ಅವಘಡವಲ್ಲ ಆರೋಪಿಗಳಿಬ್ಬರ ಬಂಧನ
- ಬಾಲಿ ಪ್ರವಾಸ ರದ್ದುಪಡಿಸಲು ಪಾಸ್‌ಪೋರ್ಟ್ ಹರಿದು ಹಾಕಿದ್ದ ಸಿಯಾ ಗೋಯಲ್
ಪುಣೆ: ಯುವ ಉದ್ಯೋಮಿ ಕೇತನ್ ವಿಶಾಲ್ ಅಗರ್‌ವಾಲ್ (26) ಜೂನ್ 18ರಂದು ಲೋಹಾಗಢ ಕೋಟೆ ಸಮೀಪ 400 ಅಡಿ ಆಳದ ಕಮರಿಗೆ ಬಿದ್ದು ಮೃತಪಟ್ಟಿದ್ದರು. ಸದ್ಯ ಈ ಘಟನೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೇತನ್ ಸಾವು ಆಕಸ್ಮಿಕವಲ್ಲ. ಬದಲಿಗೆ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಪ್ರಿಯಕರ ಚೇತನ್ ಚೌಧರಿ ನಡೆಸಿದ ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದೀಗ ಈ ಕೊಲೆ ಸಂಚಿನ ಮೊದಲ ಹೆಜ್ಜೆಯಾಗಿ ಕೇತನ್ ಅವರ ಪಾಸ್‌ಪೋರ್ಟ್ ನಾಪತ್ತೆಯಾಗಿದ್ದ ಘಟನೆಯನ್ನು ತನಿಖಾಧಿಕಾರಿಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ.
ಪಾಸ್‌ಪೋರ್ಟ್ ನಾಪತ್ತೆ
ಕೇತನ್ ಮತ್ತು ಸಿಯಾ ಗೋಯಲ್ಗೆ ಫೆಬ್ರವರಿಯಲ್ಲಿ ಎಂಗೇಜ್ಮೆಂಟ್ ಜರುಗಿತ್ತು. ನವೆಂಬರ್ನಲ್ಲಿ ರಾಜಸ್ಥಾನದ ಅರಮನೆಯೊಂದರಲ್ಲಿ ಅದ್ಧೂರಿ ವಿವಾಹ ನಿಶ್ಚಯವಾಗಿತ್ತು. ಪ್ರೀ ವೆಡ್ಡಿಂಗ್ ಶೂಟ್ಗಾಗಿ ಇವರಿಬ್ಬರು ಜೂನ್ 6 ರಂದು ಇಂಡೋನೇಷ್ಯಾದ ಬಾಲಿಗೆ ತೆರಳಬೇಕಿತ್ತು. ಇವರೊಂದಿಗೆ ಒಟ್ಟು ನಾಲ್ಕು ಜನರು ಕಾರಿನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು.
ಕಾರಿನಲ್ಲಿ ಕೂತಿದ್ದಾಗ ಎಲ್ಲರೂ ಪಾಸ್‌ಪೋರ್ಟ್ ವಿದೇಶಿ ಕರೆನ್ಸಿ ಸೇರಿದಂತೆ ಕ್ರೆಡಿಟ್ ಕಾರ್ಡ್ ಸುರಕ್ಷಿತವಾಗಿಟ್ಟುಕೊಂಡಿದ್ದರು. ಆದರೆ ಏರ್ಪೋರ್ಟ್ ತಲುಪಿದಾಗ ಕೇತನ್ ಪಾಸ್‌ಪೋರ್ಟ್ ಮಾತ್ರ ಕಾಣೆಯಾಗಿತ್ತು. ಕೇತನ್ರನ್ನು ಕೊಲ್ಲುವ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ಅವರ ಪಾಸ್ ಪೋರ್ಟನ್ನೇ ಸಿಯಾ ನಾಪತ್ತೆ ಮಾಡಿದ್ದಳು. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲಷ್ಟೇ ಅದು ಗೊತ್ತಾಗಿ ಬಾಲಿ ಪ್ರವಾಸವನ್ನು ರದ್ದುಪಡಿಸಲಾಗಿತ್ತು.
ಪೊಲೀಸರು ಹೀಗಂದ್ರು
ಪೊಲೀಸರ ತನಿಖೆ ಪ್ರಕಾರ, ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಉಪಾಹಾರಕ್ಕಾಗಿ ಗ್ರೂಪ್ ನಿಲ್ಲಿಸಿದ್ದ ಹೋಟೆಲ್‌ನ ವಾಶ್‌ರೂಮ್‌ನಲ್ಲಿ ಸಿಯಾ, ಕೇತನ್ ಪಾಸ್‌ಪೋರ್ಟ್ ಅನ್ನು ಕದ್ದು, ಹರಿದು ಹಾಕಿದ್ದಳು.ಕೇತನ್ ವಿದೇಶಕ್ಕೆ ಹೋಗುವುದನ್ನು ತಡೆಯಲು ಈ ಸಂಚು ರೂಪಿಸಲಾಗಿತ್ತು.
ಕೇತನ್ ತಂದೆ ಹೇಳಿದ್ದೀಗೆ
ಮದುವೆ ಬೇಡ ಎಂದಿದ್ದರೆ ನೇರವಾಗಿ ನಮ್ಮ ಬಳಿ ಮಾತನಾಡಿ ನಿರಾಕರಿಸಬೇಕಿತ್ತು. ಇಂತಹ ಭೀಕರ ಕೃತ್ಯಕ್ಕೆ ಕೈ ಹಾಕಬಾರದಿತ್ತು ಎಂದು ಮೃತ ಕೇತನ್ ತಂದೆ ವಿಶಾಲ್ ಅಗರ್ವಾಲ್ ಹೇಳಿದರು.
ಹಿಂದೆ ನಡೆದಿತ್ತು ಕೊಲೆ ಯತ್ನ
ಸಿಯಾ ಗೋಯಲ್ ಪ್ರಿಯಕರ ಚೇತನ್ ಚೌಧರಿ ಜೊತೆ ಸಂಬಂಧ ಹೊಂದಿದ್ದಳು. ಕೇತನ್‌ನನ್ನು ತನ್ನ ಜೀವನದಿಂದ ದೂರ ಮಾಡಲು ಇಬ್ಬರೂ ವಾರಗಳ ಹಿಂದೆಯೇ ಸ್ಕೆಚ್ ಹಾಕಿದ್ದರು. ಜೂನ್ 14 ರಂದು ಲೋಹಗಢ ಕೋಟೆಗೆ ಭೇಟಿ ನೀಡಿದ್ದಾಗ, ಸಿಯಾ ಹಾವಿನ ಭಯ ಹುಟ್ಟಿಸಿ ಕೇತನ್‌ನನ್ನು ಕಂದಕಕ್ಕೆ ತಳ್ಳಲು ಯತ್ನಿಸಿದ್ದಳು. ಆದರೆ ಅಂದು ಕೇತನ್ ಅದೃಷ್ಟವಶಾತ್ ಬದುಕುಳಿದಿದ್ದರು.
ಜಾಕೆಟ್ ಚೌಧರಿ ಹಾಕಿಕೊಂಡಿದ್ದ ಸುಳಿವು
ಜಾಕೆಟ್ ಪೊಲೀಸರಿಗೆ ದುಷ್ಕರ್ಮಿಗಳ ಸುಳಿವು ನೀಡುವಲ್ಲಿ ಬಹಳ ನೆರವಾಯಿತು ಎನ್ನಲಾಗಿದೆ. ಕೋಟೆಗೆ ತೆರಳುವ ಮಾರ್ಗದಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಕೇತನ್ ಅಗರ್‌ವಾಲ್ ಮತ್ತು ಸಿಯಾ ಇದ್ದ ವಾಹನವನ್ನು ಹಿಂಬಾಲಿಸಿದ್ದು ಕಂಡು ಬಂದಿತ್ತು. ಸಹಿಸಲಸಾಧ್ಯ ಸೆಕೆಯಿದ್ದರೂ ಆತ ತಲೆ ಮುಚ್ಚುವ ಹೂಡಿ ಹಾಕಿಕೊಂಡಿದ್ದು ಪೊಲೀಸರಿಗೆ ಅನುಮಾನ ಮೂಡಲು ಕಾರಣವಾಯಿತು.
ಮೊಸಳೆ ಕಣ್ಣೀರ ಸಂದೇಶ
ಭಾವಿ ಪತಿಯನ್ನು ಕೊಲೆ ಮಾಡಿ ಅದನ್ನು ಮುಚ್ಚಿ ಹಾಕುವ ಉದ್ದೇಶದಿಂದ 'ನನ್ನ ಜನ್ಮ ದಿನದಂದೇ ನೀನು ನನ್ನನ್ನು ಅಗಲಿದೆ' ಎಂಬುದಾಗಿ ಸಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸಂದೇಶ ಹಾಕಿ ಅನುಕಂಪ ಗಿಟ್ಟಿಸಿಕೊಂಡಿದ್ದಳು. ಆದರೆ, ಪೊಲೀಸರು ಕೇತನ್ನ ಮೃತದೇಹ ತಂದಾಗ ಆಕೆಯಲ್ಲಿ ಮೊಗದಲ್ಲಿ ಯಾವುದೇ ದುಃಖ ಇರಲಿಲ್ಲ. ಇದನ್ನು ಗಮನಿಸಿದ ಕೇತನ್ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟರು. ತೀವ್ರ ತನಿಖೆ ನಡೆಸಿದ ಪೊಲೀಸರಿಗೆ ಭಾವಿ ಪತ್ನಿಯ ಕೊಲೆ ಸಂಚಿನ ಸುಳಿವು ಸಿಕ್ಕಿದೆ, (ಏಜೆನ್ಸೀಸ್).