ಸಂಗ್ರಹ ಚಿತ್ರ 
ದೇಶ

ಮದುವೆಯಾಗಬೇಕಿದ್ದವಳೇ ಹೆಣವಾದಳು: ಅನುಮಾನದ ಕಿಚ್ಚಿಗೆ ಬೇಸತ್ತು, ಲಿವ್​ಇನ್ ಸಂಗಾತಿಯನ್ನು ಹೊಡೆದು ಕೊಂದ ಟೆಕ್ಕಿ!..Pune

  • ಪುಣೆಯ ಹಿಂಜೇವಾಡಿಯಲ್ಲಿ 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಕೋಮಲ್ ದಹಲೆ ಬರ್ಬರ ಹತ್ಯೆ.

  • ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದ ಲಿವ್-ಇನ್ ಸಂಗಾತಿಯನ್ನ ಕೊಂದ 31 ವರ್ಷದ ಟೆಕ್ಕಿ ಶುಭಂ ಕಲಬಂದೆ.

  • ಬೇರೊಬ್ಬ ಯುವತಿಯೊಂದಿಗೆ ಸಂಬಂಧವಿದೆ ಎನ್ನುವ ಅನುಮಾನ, ಕೊಲೆಯಲ್ಲಿ ಅಂತ್ಯ.

ಪುಣೆ: ಪರಸ್ಪರ ಪ್ರೀತಿಸಿ, ಲಿವ್​​ ಇನ್​ನಲ್ಲಿದ್ದ ಸಂಗಾತಿಗಳು ಇನ್ನೇನು ಮದುವೆಯಾಗಬೇಕು ಎಂದು ನಿರ್ಧರಿಸಿದಾಗ ಕಾಡಿದ ಒಂದು ಅನುಮಾನವು...ಕೊಲೆಯಲ್ಲಿ ಅಂತ್ಯವಾದ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಪುಣೆಯ ಐಟಿ ಹಬ್ ಹಿಂಜೇವಾಡಿಯ ಪಿಜಿಯೊಂದರಲ್ಲಿ, 31 ವರ್ಷದ ಟೆಕ್ಕಿಯೊಬ್ಬ ತನ್ನ 26 ವರ್ಷದ ಲಿವ್-ಇನ್ ಸಂಗಾತಿಯನ್ನು ಕೈಗಳಿಂದಲೇ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.

ಮೃತ ಯುವತಿಯನ್ನು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ವಾರ್ಧಾ ಜಿಲ್ಲೆಯ ಮೂಲದ ಕೋಮಲ್ ದಹಲೆ (26) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ಬುಲ್ಧಾನ ಜಿಲ್ಲೆಯ ಶುಭಂ ಕಲಬಂದೆ (31) ಎಂಬಾತನನ್ನು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ಬಂಧಿಸಿದ್ದಾರೆ.

ಕೆಲಸ..ಪ್ರೀತಿ..ಮದುವೆ

ಕೋಮಲ್ ಮತ್ತು ಶುಭಂ ಇಬ್ಬರೂ ಸಹ ಪುಣೆಯ ಹಿಂಜೇವಾಡಿಯಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಸಾಫ್ಟ್​​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಯ ಆಧಾರದ ಮೇಲೆ ಪರಿಚಿತರಾದ ಅವರು, ಮೂರೂವರೆ ವರ್ಷಗಳಿಂದ ಪರಸ್ಪರ ಮಾತನಾಡುತ್ತಾ, ಪ್ರೀತಿಸುತ್ತಾ ಲಿವ್​​ ಇನ್​ ಟುಗೆದರ್ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರ ಕುಟುಂಬಸ್ಥರು ಸಹ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದರು.

ಆದರೆ, ಕಳೆದ ಎರಡು-ಮೂರು ತಿಂಗಳಿಂದ ಇವರಿಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಶುಭಂಗೆ ಬೇರೆ ಯುವತಿಯೊಂದಿಗೆ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಅಸಮಾಧಾನ ಇತ್ತು. ಕೊಲೆಯಾದ ದಿನವೂ ಸಹ ಇದೇ ಕಾರಣಕ್ಕೆ ಜಗಳವಾಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಪಾರ್ಟಿ ಬಳಿಕ ನಡೆದ ಹತ್ಯೆ

ಭಾನುವಾರ ರಾತ್ರಿ ಕೋಮಲ್ ಮತ್ತು ಶುಭಂ, ಕೋಮಲ್‌ಳ ಸ್ನೇಹಿತರೊಂದಿಗೆ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಹಿಂಜೇವಾಡಿಯ 'ಪ್ರಿಸ್ಟೀನ್ ಪಿಜಿ'ಯಲ್ಲಿದ್ದ ಕೋಮಲ್ ಕೊಠಡಿಗೆ ವಾಪಸಾಗಿದ್ದರು. ಕೊಠಡಿಗೆ ಬಂದ ಬಳಿಕ ಇಬ್ಬರ ನಡುವೆ ಮತ್ತೆ ವಾಗ್ವಾದ ಶುರುವಾಗಿದ್ದು, ಕೋಮಲ್ ಸ್ನೇಹಿತರು ಅಲ್ಲಿಂದ ಹೊರಟು ಹೋಗಿದ್ದರು.

ರಾತ್ರಿ ಸುಮಾರು 12:30ರ ವೇಳೆಗೆ ಆರಂಭವಾದ ಮಾತಿನ ಚಕಮಕಿ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ವಿಕೋಪಕ್ಕೆ ತಿರುಗಿದೆ. ತೀವ್ರ ಕೋಪಗೊಂಡ ಶುಭಂ, ಯಾವುದೇ ಆಯುಧ ಬಳಸದೆ ತನ್ನ ಮುಷ್ಟಿ ಮತ್ತು ಕೈಗಳಿಂದಲೇ ಕೋಮಲ್ ಮುಖ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಗುದ್ದಿ, ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ಹಲ್ಲೆಯಿಂದ ಕೋಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ರಾತ್ರಿಯಿಡೀ ಶವದ ಪಕ್ಕದಲ್ಲೇ ಕುಳಿತಿದ್ದ ಪ್ರೇಮಿ

ತೀವ್ರ ಒಡೆತದಿಂದ ಪ್ರಜ್ಞಾಹೀನಳಾಗಿ ಕೋಮಲ್​​ ನೆಲದ ಮೇಲೆ ಬಿದ್ದಿದ್ದಳು. ಆಕೆಯ ಶವದ ಪಕ್ಕ ಶುಭಂ ಕುಳಿತಿದ್ದ. ಸುಮಾರು 6:30ರ ವೇಳೆಗೆ ಆಕೆಯಲ್ಲಿ ಯಾವುದೇ ಚಲನವಲನ ಇಲ್ಲದಿರುವುದನ್ನು ಕಂಡು ಸ್ವತಃ ಪೊಲೀಸರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಕೋರಿದ್ದಾನೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹಿಂಜೇವಾಡಿ ಪೊಲೀಸರು ಕೋಮಲ್‌ಳನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತಳ ಕಣ್ಣುಗಳ ಸುತ್ತ ಹಾಗೂ ದೇಹದ ಇತರ ಭಾಗಗಳಲ್ಲಿ ತೀವ್ರ ಊತ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪ್ಪೊಪ್ಪಿಕೊಂಡ ಪ್ರೇಮಿ

ಪೊಲೀಸರ ವಿಚಾರಣೆ ವೇಳೆ ತಾನೇ ಹಲ್ಲೆ ನಡೆಸಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಆಯುಕ್ತ ವಿನಯ್ ಕುಮಾರ್ ಚೌಬೆ ಹಾಗೂ ಡಿಸಿಪಿ (ವಲಯ 2) ಪ್ರದೀಪ್ ಜಾಧವ್ ಘಟನೆಯನ್ನು ದೃಢಪಡಿಸಿದ್ದು, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್).