- ಮೊದಲು ವಿಫಲವಾದ ಕೊಲೆ ಯತ್ನ, ನಾಲ್ಕು ದಿನಗಳ ಬಳಿಕ ಸಕ್ಸಸ್! ಪುಣೆ ಪ್ರಕರಣದ ಹೊಸ ರಹಸ್ಯ ಬಯಲು
- ಕಂದಕಕ್ಕೆ ತಳ್ಳುವ ಮುನ್ನ ಲೊಕೇಷನ್ ಹಂಚಿಕೊಂಡಿದ್ದಳಾ? ಪೊಲೀಸರ ಕೈಗೆ ಸಿಕ್ಕ ಮಹತ್ವದ ಸಾಕ್ಷಿ
- 3 ತಿಂಗಳ ಚಾಟ್‌ಗಳನ್ನೆಲ್ಲ ಡಿಲೀಟ್; ಕೊಲೆ ಸಂಚು ಮುಚ್ಚಿಡಲು ಪ್ರಿಯಕರ-ಪ್ರಿಯೆಯ ಪ್ರಯತ್ನ?
ಪುಣೆ: ತನ್ನ ನಿಶ್ಚಿತಾರ್ಥದ ಯುವಕನನ್ನು ಕಂದಕಕ್ಕೆ ತಳ್ಳಿ ಕೊಲೆ(Pune murder) ಮಾಡಿದ ಆರೋಪ ಎದುರಿಸುತ್ತಿರುವ 20 ವರ್ಷದ ಯುವತಿ ಸಿಯಾ ಗೋಯಲ್, ಘಟನೆ ನಡೆಯುವ ಕೇವಲ 34 ನಿಮಿಷಗಳ ಮೊದಲು ತನ್ನ ಪ್ರಿಯಕರ ಹಾಗೂ ಸಹ ಆರೋಪಿ ಚೇತನ್ ಚೌಧರಿಗೆ ಕರೆ ಮಾಡಿದ್ದಳು ಎಂಬ ಮಹತ್ವದ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊಬೈಲ್ ಫೋನ್‌ಗಳ ಪರಿಶೀಲನೆಯಲ್ಲಿ ಬಯಲು
ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರ ಮೊಬೈಲ್‌ಗಳ ಫೋರೆನ್ಸಿಕ್ ಪರಿಶೀಲನೆಯ ವೇಳೆ ಈ ಮಾಹಿತಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇವರಿಬ್ಬರ ನಡುವಿನ ಕೊನೆಯ ಕರೆ ಈಗ ಪ್ರಕರಣದ ಪ್ರಮುಖ ಡಿಜಿಟಲ್ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಪುಣೆ ಗ್ರಾಮೀಣ ಪೊಲೀಸ್ ತಾಂತ್ರಿಕ ನಿಗಾ ತಂಡ ಈ ಮಾಹಿತಿಯನ್ನು ಸಂಗ್ರಹಿಸಿದೆ.
ಪೊಲೀಸರ ಶಂಕೆಯ ಪ್ರಕಾರ, ಕರೆ ವೇಳೆ ಸಿಯಾ ಗೋಯಲ್ ಲೋಹಗಢ ಕೋಟೆಯ ವೀಕ್ಷಣಾ ಸ್ಥಳದಲ್ಲಿದ್ದ ತನ್ನ ನಿಖರ ಸ್ಥಳವನ್ನು ಚೇತನ್‌ಗೆ ತಿಳಿಸಿದ್ದಳು. ಅಲ್ಲದೆ, ಸುತ್ತಮುತ್ತ ಯಾವುದೇ ಪ್ರವಾಸಿಗರು ಇಲ್ಲ ಎಂಬ ಮಾಹಿತಿಯನ್ನೂ ನೀಡಿದ್ದಳು ಎನ್ನಲಾಗಿದೆ.
ಡಿಲೀಟ್ ಮಾಡಿದ ಚಾಟ್‌ಗಳ ಹುಡುಕಾಟ
ಕೊಲೆ ಸಂಚಿನ ಮಾಹಿತಿ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಕಳೆದ ಮೂರು ತಿಂಗಳ ಅವಧಿಯ ವಾಟ್ಸ್ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಸಂದೇಶಗಳು, ಧ್ವನಿ ಸಂದೇಶಗಳನ್ನು ಇಬ್ಬರೂ ಅಳಿಸಿ ಹಾಕಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಸೈಬರ್ ತಜ್ಞರ ನೆರವಿನಿಂದ ಡಿಲೀಟ್ ಮಾಡಿರುವ ಚಾಟ್‌ಗಳು ಮತ್ತು ಡೇಟಾವನ್ನು ಮರುಪಡೆಯುವ ಕೆಲಸ ನಡೆಯುತ್ತಿದೆ.
ಪೊಲೀಸರು ಮರುಪಡೆಯಲಾದ ಮಾಹಿತಿ, ಲೊಕೇಷನ್ ದಾಖಲೆಗಳು ಹಾಗೂ ಅಂತಿಮ ಕರೆ ನಡೆದ ಸಮಯದ ಐಪಿ ವಿಳಾಸಗಳನ್ನು ಪರಿಶೀಲಿಸುತ್ತಿದ್ದಾರೆ. ಇವುಗಳನ್ನು ನ್ಯಾಯಾಲಯದಲ್ಲಿ ಪೂರ್ವನಿಯೋಜಿತ ಕೊಲೆ ಎಂಬುದಕ್ಕೆ ಸಾಕ್ಷಿಯಾಗಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ.
ಮೊದಲ ಯತ್ನ ವಿಫಲವಾಗಿತ್ತು!
ಜೂನ್ 18ರಂದು ಪುಣೆಯ ಲೋಹಗಢ ಕೋಟೆಯಲ್ಲಿ 25 ವರ್ಷದ ಕೇತನ ಅಗರ್ವಾಲ್ ಅವರನ್ನು ಸಿಯಾ ಗೋಯಲ್ ಕಂದಕಕ್ಕೆ ತಳ್ಳಿದ ಆರೋಪವಿದೆ. ಆದರೆ ಇದು ಮೊದಲ ಯತ್ನವಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮೇ ತಿಂಗಳ ಕೊನೆಯಲ್ಲೇ ಕೊಲೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 14ರಂದು ಮೊದಲ ಬಾರಿಗೆ ಕೇತನನನ್ನು ಕಂದಕಕ್ಕೆ ತಳ್ಳಲು ಸಿಯಾ ಯತ್ನಿಸಿದ್ದಳು ಎನ್ನಲಾಗಿದೆ. ಆದರೆ ಕೇತನ ಪೊದೆಯೊಂದನ್ನು ಹಿಡಿದುಕೊಂಡು ಪಾರಾಗಿದ್ದ ಎಂದು ಮೂಲಗಳು ಹೇಳಿವೆ. ಆ ವೇಳೆ ಹಾವು ಕಂಡು ಹೆದರಿದ ಕಾರಣ ಆಕಸ್ಮಿಕವಾಗಿ ತಳ್ಳಿಬಿಟ್ಟೆ ಎಂದು ಸಿಯಾ ಕಥೆ ಕಟ್ಟಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಎರಡನೇ ಯತ್ನದಲ್ಲಿ ಸಕ್ಸಸ್
ಮೊದಲ ಪ್ರಯತ್ನ ವಿಫಲವಾದ ಬಳಿಕ ಜೂನ್ 18ರಂದು ಮತ್ತೊಮ್ಮೆ ಯೋಜನೆ ರೂಪಿಸಲಾಗಿತ್ತು. ಈ ಬಾರಿ ಕೇತನ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಚೇತನ್ ಚೌಧರಿಯೂ ಕೋಟೆಯವರೆಗೆ ಹಿಂಬಾಲಿಸಿಕೊಂಡು ಬಂದಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಸಿಯಾ ಗೋಯಲ್ ಅವರ ಸಹೋದರ ನೀಡಿದ ಹೇಳಿಕೆಯ ಪ್ರಕಾರ, ಸಿಯಾ ಮೊದಲು ಚೇತನ್‌ನನ್ನು ಕ್ರಿಕೆಟ್ ಪಂದ್ಯವೊಂದರಲ್ಲಿ ಭೇಟಿಯಾಗಿದ್ದಳು. ಬಳಿಕ ಸಾಮಾನ್ಯ ಸ್ನೇಹಿತನ ಮೂಲಕ ಮತ್ತೆ ಸಂಪರ್ಕ ಬೆಳೆದು, ಅವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಗೆ ಪೊಲೀಸರು ಹೆಚ್ಚಿನ ಒತ್ತು ನೀಡಿದ್ದಾರೆ,(ಏಜೆನ್ಸೀಸ್).