Pune Lift Incident (ಚಿತ್ರ X) 
ದೇಶ

ಲಿಫ್ಟ್ ಮುಂದೆ ಶುರುವಾಯ್ತು ಕಿರಿಕ್.. ಮಹಿಳೆಯ ಹೊಟ್ಟೆಗೆ ಒದ್ದು, ನೆಲಕ್ಕೆ ತಳ್ಳಿ ರಾಕ್ಷಸನಂತೆ ವರ್ತಿಸಿದ ಯುವಕ! ವಿಡಿಯೋ ವೈರಲ್​.. Pune Lift Incident

ಪ್ರಮುಖ ಮುಖ್ಯಾಂಶಗಳು

  • ಪುಣೆಯ ವಸತಿ ಕಟ್ಟಡವೊಂದರಲ್ಲಿ ಲಿಫ್ಟ್ ಪ್ರವೇಶಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ
  • ಯುವಕ ಲಿಫ್ಟ್​ನಿಂದ ಹೊರ ಬರುವ ವೇಳೆ ಅಲ್ಲೇ ನಿಂತಿದ್ದ ಯುವತಿಗೆ ಡಿಕ್ಕಿ ಹೊಡೆದಿದ್ದಾನೆ
  • ಸಿಟ್ಟಿಗೆದ್ದ ಯುವಕನು ಅವಳಿಗೆ ಕೆಲವೇ ಕ್ಷಣಗಳಲ್ಲಿ ಆಕೆಯ ಮುಖಕ್ಕೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ
  • ಅಷ್ಟಕ್ಕೇ ನಿಲ್ಲದ ಅವನು, ಕೋಪದ ಭರದಲ್ಲಿ ಆಕೆಯ ಭುಜಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಒದೆಯುತ್ತಾನೆ
ಮಹಾರಾಷ್ಟ್ರ: ಪುಣೆಯ ವಸತಿ ಕಟ್ಟಡವೊಂದರಲ್ಲಿ ಲಿಫ್ಟ್ ಪ್ರವೇಶಿಸುವ (Pune Lift Incident) ವಿಷಯಕ್ಕೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿಯ ನಡುವೆ ನಡೆದ ಕ್ಷುಲ್ಲಕ ವಾಗ್ವಾದವು ವಿಕೋಪಕ್ಕೆ ತಿರುಗಿ, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.​ 
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಯುವಕ ಲಿಫ್ಟ್​ನಿಂದ ಹೊರ ಬರುವ ವೇಳೆ ಅಲ್ಲೇ ನಿಂತಿದ್ದ ಯುವತಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಆಗ ಕೋಪಗೊಂಡ ಯುವತಿಯು ಆತನ ಕಪಾಳಕ್ಕೆ ಹೊಡೆದಿದ್ದಾಳೆ. 
ಇದರಿಂದ ಸಿಟ್ಟಿಗೆದ್ದ ಯುವಕನು ಅವಳಿಗೆ ಕೆಲವೇ ಕ್ಷಣಗಳಲ್ಲಿ ಆಕೆಯ ಮುಖಕ್ಕೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಅವನು, ಕೋಪದ ಭರದಲ್ಲಿ ಆಕೆಯ ಭುಜಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಮೊಣಕಾಲುಗಳಿಂದ ಆಕೆಯ ಮೇಲೆ ಹಲ್ಲೆ ಮಾಡಲು ಆರಂಭಿಸಿದನು. ತದನಂತರ ಆಕೆಯ ಹೊಟ್ಟೆಯ ಭಾಗಕ್ಕೆ ಬಲವಾಗಿ ಹೊಡೆದು, ಕೊನೆಗೆ ಆಕೆಯನ್ನು ಅತ್ಯಂತ ನಿರ್ದಯವಾಗಿ ನೆಲಕ್ಕೆ ತಳ್ಳಿದನು.
ನೆಲದ ಮೇಲೆ ಬಿದ್ದಿದ್ದ ಮಹಿಳೆ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿದ್ದರೂ ಬಿಡದೇ ಅಲ್ಲೇ ಹತ್ತಿರದಲ್ಲಿದ್ದ ಒಂದು ಬಕೆಟ್ ಅನ್ನು ಎತ್ತಿಕೊಂಡು ಬಂದು ಆಕೆಯ ತಲೆಯ ಮೇಲೆ ಜೋರಾಗಿ ಹೊಡೆಯಲು ಆರಂಭಿಸಿದ. ನಂತರ ಆಕೆಯ ಕೂದಲನ್ನು ಹಿಡಿದು ಎಳೆದು ಆಕ್ರೋಶ ಹೊರಹಾಕಿದನು. 
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ಸಿಸಿಟಿವಿ ದೃಶ್ಯಾವಳಿಗಳು ಬಲವಾದ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದ್ದು, ಅನೇಕ ಬಳಕೆದಾರರು ಹೆಚ್ಚುತ್ತಿರುವ ಆಕ್ರಮಣಶೀಲತೆ ಮತ್ತು ದೈನಂದಿನ ವಿವಾದಗಳಲ್ಲಿ ಸಂಯಮದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).