ಅಹ್ಮದಾಬಾದ್: ರಾಜ್ಯದ ಸಿಎಂ ಬದಲಾವಣೆ ಕುರಿತು ತೀಕ್ಷ್ಣ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ(PM Modi), ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಲ್ಲಿನ ಜನರಲ್ಲಿ ಬಹಳ ಆಕ್ರೋಶವಿತ್ತು, ಮತ್ತು ಹಾಗಾಗಿ ಕಾಂಗ್ರೆಸ್ ಪಕ್ಷ ಅಲ್ಲಿನ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದೆ ಎಂದು ಶುಕ್ರವಾರ(ಜೂ. 05) ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಸುಮಾರು 18,800 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ನಕಾರಾತ್ಮಕತೆಯನ್ನು ಮೀರಿ ಇಂದು ಮುಂದೆ ಸಾಗಿದೆ. ನಮ್ಮದು ಆಶಾವಾದದಿಂದ ವ್ಯಾಖ್ಯಾನಿಸಲ್ಪಟ್ಟ ಮತ್ತು ಅಸಾಧಾರಣ ಆಕಾಂಕ್ಷೆಗಳಿಂದ ಉತ್ತೇಜಿಸಲ್ಪಟ್ಟ ದೇಶ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ದೇಶದ ಅಭಿವೃದ್ಧಿಯನ್ನು ತನ್ನ ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. ಅದಕ್ಕಾಗಿಯೇ ದೇಶದ ಜನ ಬಿಜೆಪಿ ಮತ್ತು ಅದರ ಅಭಿವೃದ್ಧಿ ಕಾರ್ಯಗಳ ಮೇಲೆ ನಂಬಿಕೆ ಇಟ್ಟು, ಜನ ಪದೇ-ಪದೇ ನಮಗೆ ಜನಾದೇಶವನ್ನು ನೀಡುತ್ತಾರೆ ಎಂದು ತಿಳಿಸಿದ್ದಾರೆ.
ನಾನು ಇತ್ತೀಚೆಗೆ ಐದು ದೇಶಗಳ ಪ್ರವಾಸದಲ್ಲಿದ್ದೆ, ಮತ್ತು ಅಲ್ಲಿಯೂ ಸಹ, ಮಾತು ಬಂಗಾಳದ ಬಗ್ಗೆಯೇ ಇತ್ತು. ಎಲ್ಲರೂ ಬಂಗಾಳದ ಬಗ್ಗೆ ಚರ್ಚಿಸುತ್ತಿದ್ದರು. ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಭಾರಿ ಜನಾದೇಶವನ್ನು ಪಡೆದಿವೆ ಎಂದಿದ್ದಾರೆ.
ಜಗತ್ತು ಅಭೂತಪೂರ್ವ ಸವಾಲುಗಳ ಹಂತದ ಮೂಲಕ ಸಾಗುತ್ತಿದೆ. ಕೆಲವು ಸಮಯದ ಹಿಂದೆ, ಈ ದಶಕವು ಜಗತ್ತಿಗೆ ವಿಪತ್ತುಗಳ ದಶಕವೆಂದು ಸಾಬೀತಾಗುತ್ತಿದೆ ಎಂದು ನಾನು ಹೇಳಿದ್ದೆ. ಇತ್ತೀಚಿನ ದಿನಗಳಲ್ಲಿ ನಾವು ಒಂದರ ನಂತರ ಒಂದರಂತೆ ಜಾಗತಿಕ ವಿಪತ್ತುಗಳನ್ನು ನೋಡಲಿದ್ದೇವೆ ಎಂದು ತಿಳಿಸಿದ್ದಾರೆ.
ಮೊದಲು COVID-19 ನಿಂದ ಉಂಟಾದ ಬೃಹತ್ ಬಿಕ್ಕಟ್ಟು ಇತ್ತು. ಬಳಿಕ ವಿವಿಧ ಸ್ಥಳಗಳಲ್ಲಿ ಯುದ್ಧಗಳು ಭುಗಿಲೆದ್ದವು. ಇಂದು ಇಡೀ ಜಗತ್ತು ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಪಂಚದಾದ್ಯಂತ ಪೆಟ್ರೋಲ್ ಬೆಲೆಗಳು ನಿರಂತರ ಏರಿಳಿತಗಳನ್ನು ಕಾಣುತ್ತಿವೆ. ಮತ್ತು ಅನಿಲ ಪೂರೈಕೆ ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).