PUBG ಆಡುವಾಗ ಬಿಪಿ 300 ದಾಟಿ ಯುವಕ ಸಾವು
- ಪಬ್‌ಜಿ ಗೇಮ್ ತುಂಬಾ ಅಪಾಯಕಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ
- ಎಷ್ಟೊಂದು ಡೇಂಜರ್ ಅನ್ನೋದಕ್ಕೆ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆದಿರುವೆ ಘಟನೆ ತಾಜಾ ಸಾಕ್ಷಿ
- ಹೆಡ್‌ಫೋನ್‌ಗಳನ್ನು ಹಾಕಿಕೊಂಡು ಗೇಮ್ ಆಡಲು ಪ್ರಾರಂಭಿಸಿದ ಯುವಕ ಭೀಕರ ಸಾವು
PUBG Game : ಪಬ್‌ಜಿ ಗೇಮ್ ತುಂಬಾ ಅಪಾಯಕಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಎಷ್ಟೊಂದು ಡೇಂಜರ್ ಅನ್ನೋದಕ್ಕೆ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆದಿರುವೆ ಘಟನೆ ತಾಜಾ ಸಾಕ್ಷಿಯಾಗಿದೆ. ತನ್ನ ಮಾಯಾ ಲೋಕಕ್ಕೆ ಸೆಳೆದು ಬಿಡುವ ಪಬ್‌ಜಿ, ಈಗಾಗಲೇ ಅನೇಕ ಜೀವಗಳನ್ನು ಬಲಿ ಪಡೆದಿದೆ. ಅಲ್ಲದೆ, ಪಬ್‌ಜಿ ಗೇಮ್ಗೆ ದಾಸರಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಪಬ್ಜಿಯ ಪರಿಣಾಮವನ್ನು ಕಣ್ಣಾರೆ ಕಂಡರು ಕೂಡ ಕೆಲವರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗಷ್ಟೇ ಓರ್ವ ಯುವಕ ಬಲಿಯಾಗಿದ್ದಾನೆ.
ಈ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಮೀರತ್‌ನ ಮೊಹಮ್ಮದ್ ಕೈಫ್ (22) ಕಳೆದ ನಾಲ್ಕು ತಿಂಗಳಿನಿಂದ PUBG ಗೇಮ್ಗೆ ವ್ಯಸನಿಯಾಗಿದ್ದ. ಕಳೆದ ಶುಕ್ರವಾರ (ಫೆ.06) ಹೆಡ್‌ಫೋನ್‌ಗಳನ್ನು ಹಾಕಿಕೊಂಡು ಗೇಮ್ ಆಡಲು ಪ್ರಾರಂಭಿಸಿದ. ಆಡುತ್ತಲೇ ಗಂಟೆಗಳು ಕಳೆದವು. ಆದರೂ ಆತ ಮೊಬೈಲ್ ಮಾತ್ರ ಬಿಡಲಿಲ್ಲ. ಕೊನೆಗೆ ಮಧ್ಯರಾತ್ರಿಯವರೆಗೂ ಗೇಮ್ ಆಡುತ್ತಲೇ ಇದ್ದನು. ಇದರಿಂದಾಗಿ ಆತನ ಕಿವಿ ಮತ್ತು ಮೂಗಿನಿಂದ ರಕ್ತ ಹರಿಯಿತು. ಇದ್ದಕ್ಕಿದ್ದಂತೆ ಆತ ಕುಸಿದು ಬಿದ್ದ. ತಕ್ಷಣ, ಕೈಫ್‌ನ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು.
ಅಂದಹಾಗೆ, ವೈದ್ಯರು, ಕೈಫ್ಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಚಿಕಿತ್ಸೆ ಫಲಿಸದೇ ಕೈಫ್, ಭಾನುವಾರ (ಫೆ.08) ಕೊನೆಯುಸಿರೆಳೆದ. ಆತನನ್ನು ಪರೀಕ್ಷೆ ಮಾಡಿದ ವೈದ್ಯರು ಸಾವಿಗೆ ಕಾರಣ ಏನೆಂಬುದನ್ನು ಇದೇ ಸಂದರ್ಭದಲ್ಲಿ ತಿಳಿಸಿದರು. ವೈದ್ಯರ ಪ್ರಕಾರ, ದೀರ್ಘ ಸಮಯ ಪಬ್‌ಜಿ ಆಡಿದ್ದರಿಂದ, ಕೈಫ್ ಮಾನಸಿಕ ಒತ್ತಡಕ್ಕೆ ಸಿಲುಕಿದ. ಇದರಿಂದ ಆತನ ರಕ್ತದ ಒತ್ತಡ (ಬಿಪಿ) 300 ದಾಟಿತು. ಇದರಿಂದ ಆತನ ಮೆದುಳಿನಲ್ಲಿನ ನರಗಳು ಹಾನಿಯಾಗಿ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೈಫ್ ಪಾಲಕರು, ಪಬ್‌ಜಿ ಆಡುವಾಗ ಕೈಫ್ ಇದ್ದಕ್ಕಿದ್ದಂತೆ ಕುಸಿದು ಬಿದ್ದ. ನಾವು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಆತನಿಗೆ ಅಗತ್ಯ ಚಿಕಿತ್ಸೆ ನೀಡಿದೆವು. ಬಳಿಕ, ಹೆಚ್ಚುವರಿ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದೆವು. ಈ ವೇಳೆ ಕೈಫ್ನನ್ನು ಕಾಪಾಡಲು ವೈದ್ಯರು ಸಾಕಷ್ಟು ಶ್ರಮಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕೈಫ್ ಮೃತಪಟ್ಟನು ಎಂದು ಕಣ್ಣೀರು ಹಾಕಿದರು.
ಹತ್ತು ವರ್ಷಗಳ ಹಿಂದೆ ಕೈಫ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ಹೀಗಾಗಿ ಆತನಿಗೆ ಚಿಕಿತ್ಸೆ ನೀಡುತ್ತಿದ್ದೆವು. ಆದರೆ, ಕೈಫ್ PUBG ಆಟಕ್ಕೆ ವ್ಯಸನಿಯಾದನು. ಆ ಆಟ ಆಡಬೇಡ ಎಂದು ನಾವು ಸಾಕಷ್ಟು ಬಾರಿ ಹೇಳಿದ್ದೇವೆ. ಅಲ್ಲದೆ, ಆತನ ಬಳಿ ಬೇಡಿಕೊಂಡಿದ್ದೆವು. ಆದರೆ, ಕೈಫ್‌ನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆತ ತನ್ನ ಫೋನ್‌ನಲ್ಲಿ ಗಂಟೆಗಟ್ಟಲೆ ಆಟವಾಡುತ್ತಿದ್ದನು. ಪಬ್‌ಜಿ ಮಾತ್ರವಲ್ಲದೆ, ಆತ ರೀಲ್‌ಗಳನ್ನು ಸಹ ಮಾಡುತ್ತಿದ್ದನು. ಕೊನೆಗೆ ಅತಿಯಾದ ಗೀಳಿನಿಂದ ತನ್ನ ಪ್ರಾಣವನ್ನೇ ಕಳೆದುಕೊಂಡನು ಎಂದು ಕೈಫ್‌ನ ಪಾಲಕರು ಕಣ್ಣೀರಿಟ್ಟರು, (ಏಜೆನ್ಸೀಸ್).