ಮುಂಬೈ/ಬೀಡ್: ಮದುವೆಯ ಸಂಭ್ರಮದ ಮನೆಯಲ್ಲಿ ಮಂಗಳ ವಾದ್ಯಗಳು ಮೊಳಗಬೇಕಿತ್ತು. ಆದರೆ ಅಲ್ಲಿ ಕೇಳಿಬಂದಿದ್ದು ಮಸಣದ ಮೌನ(Groom Kills Friend) ಮತ್ತು ಪೊಲೀಸರ ಸೈರನ್ ಸದ್ದು! ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಆಪ್ತ ಸ್ನೇಹಿತನನ್ನೇ ಮದುವೆಗೆ ಕೆಲವೇ ಗಂಟೆಗಳ ಮೊದಲು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು 30 ವರ್ಷದ ಚಂದ್ ಅಲಿಯಾಸ್ ಗುಡ್ಡು ತಂಬೋಲಿ ಎಂದು ಗುರುತಿಸಲಾಗಿದೆ. ಆರೋಪಿ ಅತಿಕ್ ತಂಬೋಲಿ ಮತ್ತು ಚಂದ್ ಆಪ್ತ ಸ್ನೇಹಿತರಾಗಿದ್ದರು. ತನಿಖೆಯ ಪ್ರಕಾರ, ಅತಿಕ್ ತನ್ನ ಸ್ನೇಹಿತ ಚಂದ್ ಬಳಿ 1.5 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಮದುವೆ ಫಿಕ್ಸ್ ಆದ ನಂತರ ಚಂದ್ ತನ್ನ ಹಣವನ್ನು ಮರುಪಾವತಿಸುವಂತೆ ವಾರಗಳಿಂದ ಒತ್ತಾಯಿಸುತ್ತಿದ್ದ. ಆದರೆ, ಅತಿಕ್ ಹಣ ನೀಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ.
ಸೋಮವಾರ ಅತಿಕ್ ಮದುವೆ ನಿಶ್ಚಯವಾಗಿತ್ತು. "ಮದುವೆಯ ದಿನದೊಳಗೆ ನನ್ನ ಹಣ ನೀಡದಿದ್ದರೆ, ನಿನ್ನ ಮದುವೆ ಮಂಟಪಕ್ಕೆ ಬಂದು ಎಲ್ಲರ ಮುಂದೆ ರಂಪಾಟ ಮಾಡುತ್ತೇನೆ" ಎಂದು ಚಂದ್ ಎಚ್ಚರಿಕೆ ನೀಡಿದ್ದನು. ಈ ಮಾತು ಅತಿಕ್‌ನನ್ನು ಆತಂಕಕ್ಕೆ ದೂಡಿತು. ಮದುವೆಯ ಸಂಭ್ರಮದಲ್ಲಿ ಅವಮಾನಕ್ಕೊಳಗಾಗುವ ಭಯ ಮತ್ತು ಹತಾಶೆಯಿಂದ ಅತಿಕ್, ತನ್ನ ಸ್ನೇಹಿತನನ್ನು ಶಾಶ್ವತವಾಗಿ ಮೌನಗೊಳಿಸಲು ಸಂಚು ರೂಪಿಸಿದನು.
ನಿರ್ಜನ ಪ್ರದೇಶದಲ್ಲಿ ರಕ್ತಪಾತ!
ಭಾನುವಾರ ರಾತ್ರಿ ಮದುವೆ ತಯಾರಿಗಳ ನಡುವೆಯೇ ಅತಿಕ್, ಚಂದ್‌ನನ್ನು ಮಾತುಕತೆ ನಡೆಸುವ ನೆಪದಲ್ಲಿ ಶಿರೂರ್ ಕಾಸರ್ ತಹಸಿಲ್‌ನ ಖೋಕರ್ಮೋಹ್ ಗ್ರಾಮದ ಹೊರವಲಯಕ್ಕೆ ಕರೆಸಿಕೊಂಡಿದ್ದಾನೆ. ನಿರ್ಜನ ಪ್ರದೇಶಕ್ಕೆ ಬಂದ ತಕ್ಷಣ ಅತಿಕ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ಚಂದ್‌ನ ತಲೆಗೆ ಬಲವಾಗಿ ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾನೆ. ಶವವನ್ನು ರಕ್ತದ ಮಡುವಿನಲ್ಲಿ ಅಲ್ಲೇ ಬಿಟ್ಟು, ಏನೂ ಅರಿಯದವನಂತೆ ಅತಿಕ್ ಮತ್ತೆ ಮದುವೆ ತಯಾರಿಗಳಲ್ಲಿ ಭಾಗಿಯಾಗಿದ್ದಾನೆ. ಸೋಮವಾರ ಬೆಳಿಗ್ಗೆ ಗ್ರಾಮಸ್ಥರು ರಕ್ತಸಿಕ್ತ ಶವವನ್ನು ಕಂಡು ಪೊಲೀಸರಿಗೆ ದೂರು ನೀಡಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಮದುವೆ ದಿನವೇ ಬೇಡಿ!
ಬೀಡ್ ಜಿಲ್ಲೆಯ ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದರು. ಚಂದ್ ಮತ್ತು ಅತಿಕ್ ನಡುವಿನ ಸಾಲದ ವಿವಾದದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಅತಿಕ್‌ನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಅತಿಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸದ್ಯ ಈತ ಜೈಲು ಪಾಲಾಗಿದ್ದಾನೆ. ಇತ್ತ ಮದುವೆ ಸಂಭ್ರಮದಲ್ಲಿದ್ದ ಕುಟುಂಬಗಳು ಈಗ ಕಣ್ಣೀರಲ್ಲಿ ಮುಳುಗಿವೆ,(ಏಜೆನ್ಸೀಸ್).