ದೇಶ

ಬಿಜೆಪಿಗೆ ನಿಷ್ಠರಾಗಿದ್ದಾರೆಂದು ನೀವು ಹೇಳ್ತಿರುವ ನ್ಯಾಯಾಧೀಶರ ಪಟ್ಟಿ ನೀಡಿ: ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್ ತರಾಟೆ | High Court

ಪಶ್ಚಿಮ ಬಂಗಾಳದ ರಾಜಕೀಯ ಮತ್ತೊಂದು ಹಂತಕ್ಕೆ ಹೋಗಿದ್ದು, ಕಳೆದ ಶನಿವಾರ ನಡೆದ ತಮ್ಮ ಮನೆ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಒಪ್ಪದ ಹಿನ್ನೆಲೆ ಹೈಕೋರ್ಟ್​​ನ ಕೆಲವು ನ್ಯಾಯಾಧೀಶರು ಬಿಜೆಪಿಗೆ ನಿಷ್ಠರಾಗಿದ್ದಾರೆ ಮತ್ತು ಅವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಟಿಎಂಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಮತ್ತೊಂದು ಹಂತಕ್ಕೆ ಹೋಗಿದ್ದು, ಕಳೆದ ಶನಿವಾರ ನಡೆದ ತಮ್ಮ ಮನೆ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ಒಪ್ಪದ ಹಿನ್ನೆಲೆ ಹೈಕೋರ್ಟ್​​ನ ಕೆಲವು ನ್ಯಾಯಾಧೀಶರು ಬಿಜೆಪಿಗೆ ನಿಷ್ಠರಾಗಿದ್ದಾರೆ ಮತ್ತು ಅವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಟಿಎಂಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಇತ್ತೀಚೆಗೆ ತಮ್ಮ ಅರ್ಜಿಗೆ ಸಂಬಂಧಿಸಿದಂತೆ ತ್ವರಿತ ವಿಚಾರಣೆ ನಡೆಸಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್​ನ ಆದೇಶವನ್ನು ಟೀಕಿಸಿ ಮಾತನಾಡಿದ್ದ ಬ್ಯಾನರ್ಜಿ, ಹಿಂದಿನ ದಿನವೂ ನಾನು ಹೇಳಿದ್ದೆ, ನಮ್ಮ ನ್ಯಾಯಾಂಗ, ಅದು ನಮ್ಮ ಹೈಕೋರ್ಟ್ ಆಗಿರಲಿ ಅಥವಾ ಸುಪ್ರೀಂ ಕೋರ್ಟ್ ಆಗಿರಲಿ, ತಮ್ಮ ಬೆನ್ನುಮೂಳೆಯನ್ನು ಮಾರಿಕೊಳ್ಳದ, ಸಂವಿಧಾನವನ್ನು ರಕ್ಷಿಸಲು ನಿಜವಾಗಿಯೂ ಶ್ರಮಿಸುತ್ತಿರುವ ಅನೇಕ ಉತ್ತಮ ನ್ಯಾಯಾಧೀಶರು ಇದ್ದಾರೆ.

ಆದರೆ ಅದರಲ್ಲಿ ಒಂದು ವರ್ಗ ಸಂಪೂರ್ಣವಾಗಿ ಬಿಜೆಪಿಗೆ ಮಾರಾಟವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಯಾವ ರೀತಿಯ ನ್ಯಾಯಾಂಗ? ನ್ಯಾಯಾಂಗವು ಸಂವಿಧಾನದ ವಿರುದ್ಧ ವರ್ತಿಸುವುದಕ್ಕಿಂತ ದೇಶಕ್ಕೆ ಹೆಚ್ಚು ದುಃಖಕರವಾದದ್ದು ಇನ್ನೊಂದಿಲ್ಲ. ನೀವು ಯಾವುದಕ್ಕೆ ಹೆದರುತ್ತಿದ್ದೀರಿ? ಅಭಿಷೇಕ್ ಬ್ಯಾನರ್ಜಿಯನ್ನು ಕೊಲ್ಲು ಎಂದು ಹೇಳುವುದು ಉತ್ತಮ ಎಂದು ಟೀಕಿಸಿದ್ದಾರೆ.

ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗುರುವಾರ(ನ.12) ಅಭಿಷೇಕ್ ಬ್ಯಾನರ್ಜಿ ಅವರ ಭದ್ರತಾ ವ್ಯಾಪ್ತಿಯನ್ನು Z+ ವರ್ಗಕ್ಕೆ ಏರಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್​ನ ನ್ಯಾ. ಕೃಷ್ಣ ರಾವ್ ನೇತೃತ್ವದ ಪೀಠ ವಿಚಾರಣೆ ನಡೆಸಿದ್ದು, ಈ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಬಿಲ್ವಾಡಲ್ ಭಟ್ಟಾಚಾರ್ಯ ಅವರು ಬ್ಯಾನರ್ಜಿಯವರ ಮಾತುಗಳನ್ನು ಪೀಠದ ಗಮನಕ್ಕೆ ತಂದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನ್ಯಾಯಾಧೀಶರು ಬಿಜೆಪಿಗೆ ಪಕ್ಷಪಾತಿಯಾಗಿದ್ದಾರೆ, ವಿರೋಧ ಪಕ್ಷದ ನಾಯಕರು ಮತ್ತು ಸಾಮಾನ್ಯ ನಾಗರಿಕ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲ್ಲ ಎಂಬ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶ ಕೃಷ್ಣ ರಾವ್, ನಿಮ್ಮ ನಾಯಕರು ಬಹಳ ಬುದ್ದಿವಂತರಿದ್ದಾರೆ, ಬಿಜೆಪಿಗೆ ಮತ್ತು ಟಿಎಂಸಿ ಪಕ್ಷಕ್ಕೆ ಯಾವ್ಯಾವ ನ್ಯಾಯಾಧೀಶರು ಸೇರಿದ್ದಾರೆ ಎಂಬ ಪಟ್ಟಿಯನ್ನು ಕೊಡಲು ಹೇಳಿ ಎಂದು ಬ್ಯಾನರ್ಜಿ ಪರ ವಕೀಲರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಶೋಯೆಬ್ ಆಲಂ, ಇದು ತೀವ್ರ ಹತಾಶೆಗೊಂಡಿರುವ ಮತ್ತು ತಮ್ಮ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿರುವ ವ್ಯಕ್ತಿಯೊಬ್ಬರ ಮಾತು. ಅವರು ತಮ್ಮ ಕುಟುಂಬಕ್ಕೆ ಮತ್ತು ತಮಗೆ ರಕ್ಷಣೆ ಸಿಗಲಿ ಎಂದು ಅಲೆದಾಡುತ್ತಿದ್ದಾರೆ. ಇದರಲ್ಲಿ ಅವರ ಯಾವುದೇ ತಪ್ಪಿಲ್ಲ, ಅವರ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸೋತಿದೆ ಎಂಬ ಕಾರಣಕ್ಕಷ್ಟೇ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಒಂದಲ್ಲ ಒಟ್ಟು ಆರು ಬಾರಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ನ್ಯಾ. ರಾವ್ ಅವರು ಇಂತಹ ಹೇಳಿಕೆಗಳಿಂದ ನಾವು ಪ್ರಭಾವಿತರಾಗಲ್ಲ, ಅವರು ಹೈಕೋರ್ಟ್‌ನ ಪ್ರತಿಕ್ರಿಯೆಯಿಂದ ಅತೃಪ್ತರಾಗಿದ್ದರೆ ಇತರ ಪರಿಹಾರಗಳನ್ನು ಪಡೆಯಲು ಸ್ವತಂತ್ರರು. ನಿಮಗೆ ತ್ವರಿತ ಪರಿಹಾರ ಬೇಕಾದರೆ, ನೀವು ಇತರ ವೇದಿಕೆಗಳಿಗೂ ಹೋಗಬಹುದು, ಸುಪ್ರೀಂ ಕೋರ್ಟ್ ಮತ್ತು ಈ ನ್ಯಾಯಾಲಯದ ಸಮನ್ವಯ ಪೀಠಗಳಿವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).