ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಕ್ಕೆ ಸಂತೋಷ ವ್ಯಕ್ತಪಡಿರುವ ವಿಜಯ್ ತಂದೆ ಎಸ್.ಎ.ಚಂದ್ರಶೇಖರ್, ವಿಜಯ್ ಸಿಎಂ ಆಗುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ 234 ಕ್ಷೇತ್ರಗಳಲ್ಲಿ ವಿಜಯ್ ಅವರ ಟಿವಿಕೆ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತರೂಢ ಡಿಎಂಕೆ 73 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದು, ಎಐಎಡಿಎಂಕೆ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ.
ಎಎನ್ಐ ಜೊತೆ ಮಾತನಾಡಿರುವ ವಿಜಯ್ ತಂದೆ ಮತ್ತು ಚಲನಚಿತ್ರ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರು, ವಿಜಯ್ ತಂದೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಯಾವುದೇ ಮೈತ್ರಿ ಇಲ್ಲದೆ ವಿಜಯ್ ಯಶಸ್ಸು ಸಾಧಿಸಿರುವುದು, ಆತನ ಧೈರ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ವಿಜಯ್ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರುತ್ತಿದ್ದಾನೆ. 30 ವರ್ಷಗಳಿಂದ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದನು. ಇಂದು ಅದು ನನಸಾಗುತ್ತಿದೆ. ತಮಿಳು ಜನರು ವಿಜಯನನ್ನು ನಾಯಕನಾಗಿ ಮಾತ್ರವಲ್ಲದೆ ತಮ್ಮ ಮನೆಯ ಮಗನನ್ನಾಗಿ ಪ್ರೀತಿಸುತ್ತಿದ್ದರು. ಪ್ರತಿಯೊಬ್ಬ ಮಹಿಳೆಯೂ ಅವರನ್ನು ತಮ್ಮ ಸ್ವಂತ ಮಗನಂತೆ, ತಮ್ಮ ಸ್ವಂತ ಸಹೋದರನಂತೆ ನೋಡುತ್ತಾರೆ. ಅರವತ್ತು ವರ್ಷ ವಯಸ್ಸಿನವರು ಅವರನ್ನು ಮೊಮ್ಮಗ ಎನ್ನುತ್ತಾರೆ. ಆ ರೀತಿ ಸಾರ್ವಜನಿಕರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ನೂ ಟಿವಿಕೆ ಅಧಿಕಾರಕ್ಕೇರಲು ಬೇಕಾದ 118 ಸ್ಥಾನಗಳನ್ನು ಗಳಿಸದ ಹಿನ್ನೆಲೆ ಮೈತ್ರಿ ಬಗ್ಗೆ ಪ್ರಸ್ತಾಪದ ಪುತ್ರನೇ ನಿರ್ಧರಿಸುತ್ತಾನೆ ಎಂದಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಸಂದೇಶ ನೀಡಿದ್ದಾರೆ. ಮೊದಲು ಟಿವಿಕೆ ಬೆಂಬಲ ನೀಡುವಂತೆ ಕಾಂಗ್ರೆಸ್ಗೆ ಆಹ್ವಾನಿಸಿದ್ದಾರೆ (ಏಜೆನ್ಸೀಸ್).