ಸೋನಮ್ ವಾಂಗ್‌ಚುಕ್ ಮನವಿಗೆ ಸ್ಪಂದಿಸಿ ಉಪವಾಸ ಕೈಬಿಟ್ಟ ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ.
- ಜಾರ್ಖಂಡ್ನಲ್ಲಿ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ
- ಸೋನಮ್ ವಾಂಗ್‌ಚುಕ್ ಮನವಿಗೆ ಸ್ಪಂದಿಸಿ ಉಪವಾಸ ಕೈಬಿಟ್ಟ ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ
- ಜಲಪಾನ ಮಾಡಿ ಉಪವಾಸ ನಿಲ್ಲಿಸಿದ ವಿದ್ಯಾರ್ಥಿ ನಾಯಕ
ರಾಂಚಿ: ಜಾರ್ಖಂಡ್ನಲ್ಲಿ ನಡೆಯುತ್ತಿರುವ ಸರ್ಕಾರಿ ಪರೀಕ್ಷೆಗಳ ಅಕ್ರಮವನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿ ಸಮುದಾಯ ಕಳೆದೊಂದು ವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳಬೇಕೆನ್ನುವುದು ಅವರು ಆಗ್ರಹವಾಗಿದೆ.
ಆದರೆ, ಈ ಕುರಿತು ಅಲ್ಲಿನ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವ ಹಿನ್ನಲೆ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹ್ತೊ ಆಗಸ್ಟ್ 2 ರಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಆದರೆ ಇಂದು (ಆ.5) ಖ್ಯಾತ ಪರಿಸರವಾದಿ ಸೋನಮ್ ವಾಂಗ್‌ಚುಕ್ (Sonam Wangchuk on Devendra Mahto), ಮಹ್ತೊ ಅವರ ಜೊತೆ ಮಾತನಾಡಿ, ಈ ಹೋರಾಟಕ್ಕೆ ಅವರು ಜೀವಂತವಾಗಿರುವುದು ಅತ್ಯಗತ್ಯವೆಂದು ಮನವರಿಕೆ ಮಾಡಿಸಿ, ನೀರನ್ನು ಸೇವಿಸುವಂತೆ ಮನವೊಲಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಬೇಡಿ!
ವಿಡಿಯೋ ಕಾಲ್ನಲ್ಲಿ ಸೋನಮ್ ವಾಂಗ್‌ಚುಕ್ ಜೊತೆ ಮಾತನಾಡಿದ ದೇವೇಂದ್ರ ಮಹ್ತೊ, ನಾನು ಜುಲೈ 26 ರಿಂದ ಸತ್ಯಾಗ್ರಹ ನಡೆಸುತ್ತಿದ್ದು, ಆಗಸ್ಟ್ 2 ರಿಂದ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಂಡಿದ್ದೆನೆ. ನಮ್ಮ ರಾಜ್ಯದಲ್ಲಿ ಕಳೆದ 26 ವರ್ಷಗಳಿಂದ ಸರ್ಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಸೋನಮ್ ವಾಂಗ್‌ಚುಕ್, ಎಲ್ಲದಕ್ಕಿಂತ ಮೊದಲು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ, ನೀವು ಜೀವಂತವಿದ್ದರೆ ಮಾತ್ರ ಈ ಹೋರಾಟಕ್ಕೆ ಒಂದು ಅರ್ಥವಿರುತ್ತದೆ. ನೀವು ಸತ್ಯಾಗ್ರಹದ ಹೆಸರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ದಯಮಾಡಿ ಆಹಾರವನ್ನು ಸೇವಿಸಿ ಎಂದು ಮನವಿ ಮಾಡಿದ್ದಾರೆ.
ವಾಂಗ್‌ಚುಕ್ ಮನವಿಗೆ ಸಮ್ಮತಿಸಿದ ಮಹ್ತೊ, ತಾವು ಉಪವಾಸವನ್ನು ಕೈಬಿಟ್ಟು ಕೇವಲ ನೀರು ಹಾಗೂ ಉಪ್ಪನ್ನು ಮಾತ್ರ ಸೇವಿಸುತ್ತೇನೆ, ನಮ್ಮ ಬೇಡಿಕೆಗಳು ಈಡೇರಿದ ಬಳಿಕವೇ ಅನ್ನ ಸೇವಿಸುವುದಾಗಿ ಶಪಥ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಭರವಸೆ!
ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿರುವ ಸಿಎಂ ಹೆಮಂತ್ ಸೊರೆನ್, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ವಿಚಾರಣೆ ನಡೆಯುತ್ತಿದೆ. ಸಿಐಡಿ ತನಿಖೆಯಲ್ಲಿ ಈಗಾಗಲೇ ಸುಮಾರು 14 ಜನರನ್ನು ಬಂಧಿಸಲಾಗಿದೆ, ಶೀಘ್ರದಲ್ಲಿಯೇ ಈ ಕುರಿತು ನಮ್ಮ ನಿರ್ಧಾರ ಪ್ರಕಟಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ, (ಏಜನ್ಸೀಸ್).