ಸಿಎಂ ಎಂ.ಕೆ.ಸ್ಟಾಲಿನ್ ಗಡಿ ವಿಂಗಡಣೆ ಮಸೂದೆ ಪ್ರತಿ ಸುಡುತ್ತಿರುವುದು.
ಚೆನ್ನೈ: ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡೆ ಪ್ರಕ್ರಿಯೆ ತಿದ್ದುಪಡಿ ವಿರೋಧಿಸಿ ತಮಿಳುನಾಡಿನಾದ್ಯಂತ ಕಪ್ಪು ಬಟ್ಟೆ ಧರಿಸಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಿಎಂ ಎಂ.ಕೆ.ಸ್ಟಾಲಿನ್(CM M K Stalin) ಗಡಿ ವಿಂಗಡಣೆ ಮಸೂದೆಯ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆ & ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ಮಸೂದೆ, ಕ್ಷೇತ್ರ ಪುರ್ನವಿಂಗಡೆ ಪ್ರಕ್ರಿಯೆ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಮಹಿಳಾ ಮೀಸಲಾತಿಯನ್ನು ಒಪ್ಪಿದರೂ, ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಪ್ರಸ್ತಾಪಿಸುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆ-2026 ಅನ್ನು ಕಪ್ಪು ಕಾನೂನು ಎಂದು ಕರೆದಿರುವ ಸಿಎಂ ಎಂ.ಕೆ.ಸ್ಟಾಲಿನ್ ಅದರ ಪ್ರತಿಯನ್ನು ಸುಟ್ಟು ಹಾಕಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತಮಿಳುನಾಡಿನಾದ್ಯಂತ ಪ್ರತಿರೋಧದ ಜ್ವಾಲೆಗಳು ಹರಡಲಿ!, ಫ್ಯಾಸಿಸ್ಟ್ ಬಿಜೆಪಿಯ ದುರಹಂಕಾರವನ್ನು ಕಡಿಮೆಯಾಗಲಿ. ಈ ಹಿಂದೆ ತಮಿಳುನಾಡಿನಿಂದ ಎದ್ದ ಹಿಂದಿ ವಿರೋಧಿ ಆಂದೋಲನ ದೆಹಲಿಯನ್ನು ಬಲವಂತವಾಗಿ ಮಣಿಸಿದ ಬಳಿಕವೇ ಅದು ಶಾಂತವಾಯಿತು.
ಇಂದು ತಮಿಳರನ್ನು ತಮ್ಮ ಸ್ವಂತ ಭೂಮಿಯಲ್ಲಿ ನಿರಾಶ್ರಿತರನ್ನಾಗಿ ಮಾಡಲು ಪ್ರಯತ್ನಿಸುವ ಇಂತಹ ಕಪ್ಪು ಕಾನೂನಿನ ಪ್ರತಿಯನ್ನು ಸುಟ್ಟು, ಕಪ್ಪು ಧ್ವಜ ಹಾರಿಸುವ ಮೂಲಕ ಮತ್ತೆ ಆ ಹೋರಾಟದ ಕಿಡಿಯನ್ನು ಹೊತ್ತಿಸಿದ್ದೇನೆ. ಈ ಬೆಂಕಿ ದ್ರಾವಿಡ ಭೂಮಿಯಾದ್ಯಂತ ಹರಡುತ್ತದೆ. ಅದು ಬಿಜೆಪಿಯ ದುರಹಂಕಾರವನ್ನು ಕಿತ್ತೊಗೆಯುತ್ತದೆ ಎಂದು ಹೇಳಿದ್ದಾರೆ.
ಲೋಕಸಭೆ & ವಿಧಾನಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಗೆ ಎಲ್ಲಾ ವಿರೋಧ ಪಕ್ಷಗಳು ಅನುಮೋದಿಸಿದ್ದರೂ, 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಅದನ್ನು ಜಾರಿಗೆ ತರವುದನ್ನೂ ವಿರೋಧಿಸಿವೆ. 2011ರ ಜನಗಣತಿಯನ್ನು ಆಧರಿಸಿ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮುಂದಿನ ವರ್ಷ ಪೂರ್ಣಗೊಳ್ಳುವ 2026 ಜನಗಣಿತಿ ಪ್ರಕಾರ ಮಾಡಲು ವಿಪಕ್ಷಗಳು ಒತ್ತಾಯಿಸಿವೆ (ಏಜೆನ್ಸೀಸ್).