ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ 
ದೇಶ

ಕಾವೇರಿ ನೀರು ಬೇಕು! ಮರಳಿನಲ್ಲಿ ಹೂತುಕೊಂಡು ಪ್ರೊಟೆಸ್ಟ್​: ಇದೆಂತಾ ಪ್ರತಿಭಟನೆ..?

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯ
  • ನದಿ ತೀರದ ಮರಳಿನಲ್ಲಿ ದೇಹ ಹೂತುಕೊಂಡು ವಿನೂತನ ಪ್ರತಿಭಟನೆ
  • ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ ಕರ್ನಾಟಕ ನೀರು ಬಿಡುತ್ತಿಲ್ಲವೆಂದು ಕಿಡಿ
ಚೆನ್ನೈ: ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕಾವೇರಿ ನದಿ ತೀರದ ಮರಳಿನಲ್ಲಿ ತಮ್ಮ ದೇಹವನ್ನು ಹೂತುಕೊಂಡು, ಕೊರಳಿಗೆ ಹಗ್ಗದ ಕುಣಿಕೆ ಹಾಕಿಕೊಂಡು ಧರಣಿ ನಡೆಸಿದ್ದಾರೆ. ನೀರಾವರಿಗಾಗಿ ಕೂಡಲೇ ನೀರು ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಕರ್ನಾಟಕ ನೀರು ಬಿಡುತ್ತಿಲ್ಲ?

ರೈತ ನಾಯಕ ಪಿ.ಅಯ್ಯಕಣ್ಣು ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ ಕರ್ನಾಟಕ ನೀರು ಬಿಡಲು ತಕಕಾರು ಮಾಡುತ್ತಿದೆ ಎಂದು ಗುಡುಗಿದರು. ಅಲ್ಲದೆ ತಮಿಳುನಾಡು ಸರ್ಕಾರವು ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕು ಎಂದು ಅವರು ಒತ್ತಾಯಿಸಿದರು. ಬೆಳೆಗಳಿಗೆ ನೀರಿನ ಕೊರತೆ ಎದುರಾಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ಸಹಕಾರಿ ಸಾಲಗಳನ್ನು ಮನ್ನಾ ಮಾಡಬೇಕು ಅಂತಲೂ ಅವರು ಆಗ್ರಹಿಸಿದರು.


ಇತ್ತ ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎನ್ನುವ ಆದೇಶ ರಾಜ್ಯದಲ್ಲಿ ಕಿಚ್ಚು ಹಚ್ಚಿದೆ. ವಿವಿಧ ಕನ್ನಡಪರ ಸಂಘಟನೆಗಳು ಈ ಆದೇಶವನ್ನು ಖಂಡಿಸಿ ಆಗಸ್ಟ್‌ 13ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿವೆ. ಯಾವುದೇ ಕಾಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಅಂತ ವಿರೋಧ ಪಕಕ್ಷಗಳು ಸಹ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಿವೆ.

ಕಾವೇರಿ ವಿವಾದ ಹೊಸದೇನಲ್ಲ!


ಕಾವೇರಿ ನೀರು ಹಂಚಿಕೆ ವಿವಾದ ಇಂದು-ನಿನ್ನೆಯದ್ದಲ್ಲ. ಬ್ರಿಟಿಷರ ಆಡಳಿತದ ಕಾಲದಲ್ಲೇ ಆಗಿನ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ನಡುವೆ ಶುರುವಾದ ಈ ವಿವಾದ, ಸ್ವಾತಂತ್ರ್ಯ ನಂತರ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಜಲ ಜಗಳ ಭುಗಿಲೆದ್ದಿದೆ. ಪ್ರತಿ ಬಾರಿ ಮಳೆ ಕೊರತೆ ಮತ್ತು ಬರಗಾಲ ಎದುರಾದಾಗ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಅಂದುಕೊಂಡಂತೆ ಒಳ್ಳೆ ಮಳೆಯಾದರೆ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಆದರೆ ಮಳೆ ಬರದೆ ಇದ್ದಾಗ ಎರಡೂ ರಾಜ್ಯಗಳ ಕಾವೇರಿ ಕದನ ಉಲ್ಬಣವಾಗುತ್ತೆ.

ಕಾವೇರಿ ಜಲ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯ

ಕಾವೇರಿ ಜಲ ವಿವಾದದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ ಅನ್ನೋ ಭಾವನೆ ರಾಜ್ಯದಲ್ಲಿ ಬಹಳ ವರ್ಷಗಳಿಂದ ಇದೆ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಇದೆ ಎನ್ನುವ ಅಭಿಪ್ರಾಯವೂ ಕೇಳಿಬರುತ್ತದೆ. ಸ್ವಾತಂತ್ರ್ಯದ ನಂತರ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ ಹೆಚ್ಚಿದ್ದು, ಕೇಂದ್ರ ಸರ್ಕಾರಗಳ ಮೇಲೆ ಅವುಗಳ ಪ್ರಭಾವವೂ ಸಾಕಷ್ಟು ಇತ್ತು ಎನ್ನಲಾಗುತ್ತದೆ. ಹೀಗಾಗಿ ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಕಡೆ ಹೆಚ್ಚು ಒಲವು ತೋರಿಸುತ್ತದೆ ಎಂಬ ಆರೋಪವಿದೆ. ಹೀಗಾಗಿ ಕನ್ನಡ ನಾಡಿನ ಧ್ವನಿ ನಿರೀಕ್ಷಿತ ಮಟ್ಟದಲ್ಲಿ ಕೇಂದ್ರದವರೆಗೆ ತಲುಪಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾವೇರಿ ವಿವಾದ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)