ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಶಾ ಮಹಾಂತ
ಗುವಾಹಟಿ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಹೊಣೆಗಾರಿಕೆ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ಯುವಕರು ಪ್ರತಿಭಟನೆ ನಡೆಸುತ್ತಿದ್ದು, ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಸಚಿವರೊಬ್ಬರ ಪುತ್ರಿ(minister daughter) ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾಜ್ಯ ಕಂದಾಯ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಶಾ ಮಹಾಂತ ಅವರು ನೀಟ್ ವಿವಾದದ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಅವರು ಗುವಾಹಟಿಯ ಚಂಚಲ್ ಪ್ರದೇಶದಲ್ಲಿ ಕೇಂದ್ರದ ವಿರುದ್ಧ ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ನೀಟ್-ಯುಜಿ ಪರೀಕ್ಷೆಯಲ್ಲಿನ ರಿಗ್ಗಿಂಗ್ ಆರೋಪಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು. ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.
ಏತನ್ಮಧ್ಯೆ, ಕೇಶಬ್ ಮಹಾಂತ ಅವರು ಅಸ್ಸಾಂ ಗಣ ಪರಿಷತ್ (ಎಜಿಪಿ) ಯ ಹಿರಿಯ ನಾಯಕರಾಗಿದ್ದಾರೆ. ಅವರು 2016ರಿಂದ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಎಜಿಪಿ ಬಿಜೆಪಿಯೊಂದಿಗೆ ಆಡಳಿತಾರೂಢ ಒಕ್ಕೂಟದಲ್ಲಿ ಪಾಲುದಾರರಾಗಿರುವುದರಿಂದ, ಅದೇ ಒಕ್ಕೂಟದ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಸಚಿವರ ಮಗಳು ಭಾಗವಹಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇನ್ನೂ ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಸರ್ಕಾರ ಗೌರವಿಸುತ್ತದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಅವರು ಗೌರವಿಸಿದ್ದಾರೆ. ಮತ್ತು ಕೇಂದ್ರ ಸರ್ಕಾರವು ನೀಟ್-ಯುಜಿ ವಿಷಯವನ್ನು ಪರಿಗಣಿಸುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).