ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

CBSC ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಜಾರಿ ಪ್ರಸ್ತಾಪ; ಇದು ಹಿಂದಿ ಹೇರಿಕೆಯ ಸಂಚು: ಕೇಂದ್ರದ ವಿರುದ್ಧ ಸಿಎಂ ಎಂ.ಕೆ.ಸ್ಟಾಲಿನ್ ವಾಗ್ದಾಳಿ

ಚೆನ್ನೈ: 2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್​ಇ(CBSC) 6ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಜಾರಿಗೆ ತರುವ ಪ್ರಸ್ತಾಪದ ಕುರಿತಾಗಿ ಕೇಂದ್ರ ಸರ್ಕಾರ ಮತ್ತು ಸಿಬಿಎಸ್​ಇ ವಿರುದ್ಧ ವಾಗ್ದಾಳಿ ನಡೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಇದು ಹಿಂದಿಯೇತರ ರಾಜ್ಯಗಳ ಮೇಲೆ ಭಾಷೆ ಹೇರಿಕೆ ಮಾಡುವ ರಹಸ್ಯ ಕಾರ್ಯತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಭಾಗವಾಗಿ ಪರಿಚಯಿಸಲಾದ ಈ ನೀತಿಯು ರಾಜಕೀಯ ಪ್ರೇರಿತ ನಡೆ ಮತ್ತು ದೇಶದ ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನ. ಇದನ್ನು ತಮಿಳುನಾಡು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಈಗಲೂ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಇದು ಸರಳ ಶಿಕ್ಷಣ ಸುಧಾರಣೆಯಲ್ಲ, ಬದಲಾಗಿ ಭಾರತೀಯ ಭಾಷೆಗಳನ್ನು ಉತ್ತೇಜಿಸುವ ನೆಪದಲ್ಲಿ ಹಿಂದಿಯನ್ನು ಹೇರುವ ಗೊಂದಲದ ಪ್ರಯತ್ನ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಇತರ ಪ್ರಾದೇಶಿಕ ಭಾಷೆಗಳ ವೆಚ್ಚದಲ್ಲಿ ಹಿಂದಿಗೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
ಭಾಷಾ ನೀತಿಯ ಹೆಸರಿನಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ.ಇದು ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳಿಗೆ ಬಲವಂತವಾಗಿ ಹಿಂದಿ ಕಲಿಸುವುದಲ್ಲದೆ ಬೇರೇನೂ ಅಲ್ಲ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಂತಹ ದಕ್ಷಿಣ ಭಾಷೆಗಳನ್ನು ಕಲಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರೀಯ ಶಾಲೆಗಳಲ್ಲಿ ತಮಿಳು ಕಡ್ಡಾಯಗೊಳಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ, ಈಗ ಭಾಷೆಗಳ ಬಗ್ಗೆ ರಾಜ್ಯಗಳಿಗೆ ಆದೇಶಿಸುವುದು ದ್ವಂದ್ವತೆಯ ಪರಮಾವಧಿ. ತ್ರಿಭಾಷಾ ನೀತಿಯು ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಇತರೆ ರಾಜ್ಯಗಳ ನಡುವೆ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಕೃತಕ ಬುದ್ಧಿಮತ್ತೆ, ಅನಿಮೇಷನ್ ಹಾಗೂ ಗೇಮಿಂಗ್‌ನಂತಹ ಆಧುನಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಒದಗಿಸಬೇಕಾದ ಸಮಯದಲ್ಲಿ, ಅವರ ಮೇಲೆ ಹೆಚ್ಚುವರಿ ಭಾಷಾ ಹೊರೆ ಹೇರುವುದು ಸರಿಯಲ್ಲ. ರಾಜ್ಯಗಳ ಕಾಳಜಿಗಳನ್ನು ಕೇಂದ್ರ ನಿರ್ಲಕ್ಷಿಸುವುದು, ಒಕ್ಕೂಟದ ಮನೋಭಾವ ಮತ್ತು ಕೋಟ್ಯಂತರ ಜನರ ಭಾಷಾ ಗುರುತಿಗೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).