Bihar Wedding (ಚಿತ್ರ X) 
ದೇಶ

ಮದುವೆ ಊಟದಲ್ಲಿ ಮಟನ್ ಬದಲು ಚಿಕನ್ ಬಡಿಸಿದ್ದಕ್ಕೆ ಭೀಕರ ಘರ್ಷಣೆ: 12 ಜನರಿಗೆ ಗಂಭೀರ ಗಾಯ! Bihar Wedding

ಪ್ರಮುಖ ಮುಖ್ಯಾಂಶಗಳು

  • ಮದುವೆ ಸಮಾರಂಭವೊಂದರಲ್ಲಿ, ಅತಿಥಿಗಳಿಗೆ ಮಟನ್​ ಬದಲು ಕೋಳಿ ಮಾಂಸ ಬಡಿಸಿದ ಆರೋಪ
  • ವಧು ಮತ್ತು ವರನ ಕಡೆಯವರ ನಡುವೆ ತೀವ್ರ ಘರ್ಷಣೆ ನಡೆದು, ದೈಹಿಕ ವಾಗ್ವಾದಕ್ಕೆ ಕಾರಣವಾಗಿದೆ
  • ಮದುವೆಯ ವಿಧಿವಿಧಾನಗಳು ಪೂರ್ಣಗೊಂಡಿದ್ದವು. ಆದರೆ, ಊಟ ಪ್ರಾರಂಭವಾದ ತಕ್ಷಣ ವಿವಾದ ಭುಗಿಲೆದ್ದಿತು.
Bihar Wedding: ಬಿಹಾರದಲ್ಲಿ ಮದುವೆ ಸಮಾರಂಭಗಳು ಎಂದರೆ ಕೇವಲ ಸಡಗರ, ಸಂಭ್ರಮ ಮಾತ್ರವಲ್ಲ; ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ, ಸಂಭ್ರಮಾಚರಣೆಯ ಹೆಸರಿನಲ್ಲಿ ಗುಂಡಿನ ದಾಳಿ ಮತ್ತು ಹಿಂಸಾಚಾರದ ಸುದ್ದಿಗಳು ಅಲ್ಲಿ ಸಾಮಾನ್ಯ ಎಂಬಂತಾಗಿದೆ. ಈಗ ಅಂತಹದ್ದೇ ಒಂದು ಆಘಾತಕಾರಿ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಸಂಭವಿಸಿದ್ದು, ಮದುವೆ ಮನೆಯ ಊಟದ ವಿಚಾರವಾಗಿ ಭಾರಿ ವಿವಾದ ಭುಗಿಲೆದ್ದಿದೆ.
ಗುರುವಾರ (ಜು. 9) ರಾತ್ರಿ ನಡೆದ ಮದುವೆ ಸಮಾರಂಭವೊಂದರಲ್ಲಿ, ಅತಿಥಿಗಳಿಗೆ ಕುರಿಮರಿ ಮಾಂಸದ (Mutton) ಬದಲು ಕೋಳಿ ಮಾಂಸವನ್ನು (Chicken) ಬಡಿಸಿದ ಒಂದೇ ಒಂದು ಕಾರಣಕ್ಕೆ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ.
ಊಟದ ಮೆನುವಿನಲ್ಲಿ ಆದ ಈ ಬದಲಾವಣೆಯಿಂದಾಗಿ ವಧು ಮತ್ತು ವರನ ಕಡೆಯವರ ನಡುವೆ ತೀವ್ರ ಘರ್ಷಣೆ ನಡೆದು, ದೈಹಿಕ ವಾಗ್ವಾದಕ್ಕೆ ಕಾರಣವಾಯಿತು. ತಾಳ್ಮೆ ಕಳೆದುಕೊಂಡ ಜನರು ಸಿಕ್ಕ ಮೊದಲ ಅವಕಾಶದಲ್ಲೇ ಪರಸ್ಪರರ ಮೇಲೆ ಭೀಕರವಾಗಿ ಹಲ್ಲೆ ಮಾಡಿಕೊಂಡಿದ್ದಾರೆ. ಈ ಹಿಂಸಾಚಾರದಲ್ಲಿ ಉಭಯ ಕಡೆಯ ಅರ್ಧ ಡಜನ್‌ನಷ್ಟು (ಆರು ಜನ) ಅತಿಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಊಟ ಶುರುವಾದ ಕೂಡಲೇ ಜಗಳ ಆರಂಭ

ವರದಿಗಳ ಪ್ರಕಾರ, ಸಹರ್ಸಾದ ಸಿಮ್ರಿ ಭಕ್ತಿಯಾರ್ಪುರದ ನಿವಾಸಿ ಮೊಹಮ್ಮದ್​ ಅನ್ವರ್​ ಅವರ ಪುತ್ರ ಮೊಹಮ್ಮದ್​ ಮೊಹಮ್ಮದ್ ಅಬ್ದುಲ್ಲಾ, ರಾಜನ್‌ಪುರದ ನಿವಾಸಿ ಮೊಹಮ್ಮದ್ ಜಾವಿದ್ ಅಲಿಯಾಸ್ ಮೋಟೋ ಅವರ ಮಗಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದಾಗ್ಯೂ, ವಿವಾಹ ಮೆರವಣಿಗೆಗಾಗಿ ವರ ಮತ್ತು ಅವರ ಆಪ್ತರು ವಧುವಿನ ಮನೆಗೆ ಆಗಮಿಸಿದ್ದರು. ಮದುವೆಯ ವಿಧಿವಿಧಾನಗಳು ಪೂರ್ಣಗೊಂಡಿದ್ದವು. ಆದರೆ, ಊಟ ಪ್ರಾರಂಭವಾದ ತಕ್ಷಣ ವಿವಾದ ಭುಗಿಲೆದ್ದಿತು.
ಮದುವೆಯ ಮೆನುವಿನಲ್ಲಿ ಮಟನ್​​ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಊಟವನ್ನು ಬಡಿಸುವಾಗ ಅದು ಚಿಕನ್​ ಆಗಿತ್ತು ಎಂದು ವರನ ಕಡೆಯವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರನ ಚಿಕ್ಕಪ್ಪ ಮೊಹಮ್ಮದ್ ಇರ್ಫಾನ್ ಮಾತನಾಡಿ, ಆಹಾರ ವಿವಾದದ ಹಿನ್ನೆಲೆಯಲ್ಲಿ ವಧುವಿನ ಕುಟುಂಬವು ಹಠಾತ್ತನೆ ತಮ್ಮ ಮೇಲೆ ಹಲ್ಲೆ ನಡೆಸಿದ್ದರಿಂದ ನಮ್ಮ ಅತಿಥಿಗಳು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಸಿಮ್ರಿ ಭಕ್ತಿಯಾರ್ಪುರದ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಾತುಕತೆಯ ಮೂಲಕ ಸುಖಾಂತ್ಯ ಕಂಡ ವಿವಾದ

ಘಟನೆಯ ತೀವ್ರತೆಯನ್ನು ಅರಿತ ಮದುವೆ ಮನೆಯಲ್ಲಿದ್ದ ಹಿರಿಯರು ಮತ್ತು ಕೆಲವು ಗಣ್ಯರು ತಕ್ಷಣವೇ ಮಧ್ಯಪ್ರವೇಶಿಸಿದರು. ಉಭಯ ಪಕ್ಷಗಳ ಮನವೊಲಿಸಿ, ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯನ್ನು ಅಲ್ಲಿಯೇ ತಾವಾಗಿಯೇ ಬಗೆಹರಿಸಿಕೊಂಡರು. ಮದುವೆಯೂ ಪೂರ್ಣಗೊಂಡಿದೆ (ಏಜೆನ್ಸೀಸ್​).