ತಮಿಳುನಾಡು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಹೊಸ ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದನ್ನು ತಮಿಳುನಾಡು ಕಾಂಗ್ರೆಸ್ ಘಟಕ(Tamil Nadu Congress) ವಿರೋಧಿಸಿದ್ದು, ಹೊಸ ಮೇಕೆದಾಟು ಡ್ಯಾಂ ನಿರ್ಮಾಣ ಕಾವೇರಿ ಜಲ ವಿವಾದ ನ್ಯಾಯಮಂಡಳಿ ಮತ್ತು ಸುಪ್ರೀಂಕೋರ್ಟ್ ಆದೇಶಗಳ ಅಂತಿಮ ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಸೋಮವಾರ ತಮಿಳುನಾಡು ಕಾಂಗ್ರೆಸ್ ಘಟಕ ಕಾರ್ಯಕಾರಿ ಸಮಿತಿ ಸಭೆ ಸೇರಿದ್ದು, ಹಲವು ನಿರ್ಣಯಗಳನ್ನು ಕೈಗೊಂಡಿದೆ. ಅದರಲ್ಲಿ ಮೇಕೆದಾಟು ಡ್ಯಾಂ ನಿರ್ಮಾಣಕ್ಕೂ ವಿರೋಧ ವ್ಯಕ್ತಪಡಿಸಲಾಗಿದೆ. ಮುಂದುವರೆದು ಪಕ್ಷದ ರಚನೆಯನ್ನು ತಳಮಟ್ಟದವರೆಗೆ ಪುನರ್ರಚಿಸಲು ಮತ್ತು ರಾಜ್ಯಾದ್ಯಂತ ಮಂಡಲ ಕಾಂಗ್ರೆಸ್ ಸಮಿತಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಜೊತೆಗೆ ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿಎನ್‌ಸಿಸಿ ಅಧ್ಯಕ್ಷ ಮಾಣಿಕ್ಕಂ ಟ್ಯಾಗೋರ್, ಸಭೆಯಲ್ಲಿ ಮೇಕೆದಾಟು ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಕೆ.ಕಾಮರಾಜ್ ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಗುರುತು ಮತ್ತು ಸೈದ್ಧಾಂತಿಕ ಮುಖವಾಗಿ ಉಳಿದಿದ್ದಾರೆ. ಅವರ 123ನೇ ಜನ್ಮದಿನಾಚರಣೆಯನ್ನು 'ಲಂಜಮ್ ಥಾವಿರ್, ನೆಂಜಮ್ ನಿಮಿರ್' ಘೋಷಣೆಯಡಿ ಒಂದು ವಾರದ ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).