ಹೈದರಾಬಾದ್: ಆರ್ಥಿಕ ಅಪರಾಧಗಳು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ (ED Action) ತನ್ನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಕಾರ್ಯಾಚರಣೆಯೊಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬರೋಬ್ಬರಿ 792 ಕೋಟಿ ರೂಪಾಯಿಗಳ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಐಷಾರಾಮಿ ‘ಹಾಕರ್ 800A’ (Hawker 800A) ಬಿಜಿನೆಸ್ ಜೆಟ್ ವಿಮಾನವನ್ನು ಇಡಿ ಅಧಿಕಾರಿಗಳು 3 ಕೋಟಿ ರೂಪಾಯಿಗಳಿಗೆ ಹರಾಜು ಹಾಕಿದ್ದಾರೆ.
ಜುಲೈ 1, 2026 ರಂದು ಜಾರಿ ನಿರ್ದೇಶನಾಲಯದ ಹೈದರಾಬಾದ್ ವಲಯ ಕಚೇರಿಯು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಇ-ಕಾಮರ್ಸ್ ಸಂಸ್ಥೆಯಾದ ಎಂಎಸ್‌ಟಿಸಿ ಪ್ಲಾಟ್‌ಫಾರ್ಮ್ ಮೂಲಕ ಈ ಐತಿಹಾಸಿಕ ಹರಾಜು ಪ್ರಕ್ರಿಯೆಯನ್ನು ಆಯೋಜಿಸಿತ್ತು.
ಅಮರ್‌ದೀಪ್ ಕುಮಾರ್, ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ ವಿರುದ್ಧ ತನಿಖೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು, ಮಾರ್ಚ್ 7, 2025 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾಷೆ ನಡೆಸಿ ಈ ಬಿಸಿನೆಸ್ ಜೆಟ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 2025 ರಲ್ಲಿ ಇಡಿ ಅಧಿಕಾರಿಗಳು ವಿಮಾನವನ್ನು ಜಪ್ತಿ ಮಾಡಿದ್ದು ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಪಿಎಂಎಲ್‌ಎ ವಿಶೇಷ ಮಂಡಳಿಯು ಅಧಿಕೃತವಾಗಿ ಆದೇಶ ನೀಡಿತ್ತು. ನಂತರ ವಿಮಾನವನ್ನು ಹಾಗೆಯೇ ನಿಲ್ಲಿಸಿಟ್ಟರೆ ಅದು ತುಕ್ಕು ಹಿಡಿದು ಹಾಳಾಗುತ್ತದೆ ಮತ್ತು ಅದರ ಮೌಲ್ಯ ಕಡಿಮೆಯಾಗುತ್ತದೆ. ಈ ನಷ್ಟವನ್ನು ತಪ್ಪಿಸಲು, 2013ರ ನಿಯಮಗಳ ಪ್ರಕಾರ ವಿಮಾನವನ್ನು ತಕ್ಷಣ ಮಾರಿಬಿಡಲು ಅಧಿಕಾರಿಗಳು ಮಂಡಳಿಯಿಂದ ಅನುಮತಿ ಪಡೆದರು.
ಹೈದರಾಬಾದ್ ಮೂಲದ ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಅದರ ಸಿಎಂಡಿ ಅಮರ್‌ದೀಪ್ ಕುಮಾರ್ ಮತ್ತು ಇತರರ ವಿರುದ್ಧ ಸೈಬರಾಬಾದ್‌ನ ಆರ್ಥಿಕ ಅಪರಾಧಗಳ ವಿಭಾಗವು ದಾಖಲಿಸಿದ ಮೂರು ಪ್ರಕರಣಗಳಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣ ಉದ್ಭವಿಸಿದೆ.
ED ಪ್ರಕಾರ, ಹೈದರಾಬಾದ್ ಮೂಲದ ‘ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ, ಅದರ ಸಿಎಂಡಿ ಅಮರ್‌ದೀಪ್ ಕುಮಾರ್ ಹಾಗೂ ಅವರ ಸಹಚರರ ವಿರುದ್ಧ ಸೈಬರಾಬಾದ್‌ನ ಆರ್ಥಿಕ ಅಪರಾಧಗಳ ವಿಭಾಗವು ಮೊದಲು ಮೂರು ಪ್ರತ್ಯೇಕ ವಂಚನೆ ಪ್ರಕರಣಗಳನ್ನು ದಾಖಲಿಸಿತ್ತು.
ಆರೋಪಿಗಳು ನಕಲಿ ಇನ್‌ವಾಯ್ಸ್ ರಿಯಾಯಿತಿ ಯೋಜನೆಯ ಮೂಲಕ ಹೂಡಿಕೆದಾರರಿಗೆ ಸುಮಾರು 792 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರು. ಆದಾಗ್ಯೂ, ಸಾರ್ವಜನಿಕರಿಂದ ಲೂಟಿ ಮಾಡಿದ ಈ ಕಪ್ಪು ಹಣವನ್ನು ವೈಯಕ್ತಿಕ ಐಷಾರಾಮಿ ಜೀವನಕ್ಕಾಗಿ ಬಳಸಲಾಗುತ್ತಿತ್ತು ಎನ್ನಲಾಗಿದೆ.
ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರದೀಪ್ ಕುಮಾರ್ ಅವರ ಸಹೋದರ ಸಂದೀಪ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ಶರದ್ ಚಂದ್ರ ತೋಷ್ನಿವಾಲ್ ಮತ್ತು ಫಾಲ್ಕನ್ ಇನ್‌ವಾಯ್ಸ್ ಡಿಸ್ಕೌಂಟಿಂಗ್‌ನ ಸಿಇಒ ಆರ್ಯನ್ ಸಿಂಗ್ ಛಾಬ್ರಾ ಅವರನ್ನು ಏಜೆನ್ಸಿ ಬಂಧಿಸಿತ್ತು. ಸೆಪ್ಟೆಂಬರ್ 2025 ರಲ್ಲಿ ಗೊತ್ತುಪಡಿಸಿದ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಲಾಯಿತು.
ಹರಾಜಿನಿಂದ ಸಂಗ್ರಹವಾದ 3 ಕೋಟಿ ರೂ.ಗಳನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಅನುಮತಿಗೆ ಒಳಪಟ್ಟು ನಿಜವಾದ ಹೂಡಿಕೆದಾರರಿಗೆ ಮರುಪಾವತಿ ಮಾಡಲು ಬಳಸಲಾಗುವುದು ಎಂದು ಇಡಿ ತಿಳಿಸಿದೆ (ಏಜೆನ್ಸೀಸ್).