ದೇಶ

ಸೋನಿಯಾ ಪುಸ್ತಕ ಬಿಡುಗಡೆ ವೇದಿಕೆಯಲ್ಲಿ ಅಪರೂಪದ ದೃಶ್ಯ: ಪ್ರಿಯಾಂಕಾ ಗಾಂಧಿ ಮನೆಕೆಲಸದಾಕೆಯ ಬಹುದಿನಗಳ ಆಸೆ ಈಡೇರಿಸಿದ ವಿಜಯ್! | Priyanka Gandhi Staff Member Wish

Priyanka Gandhi Staff Member Wish: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ ಸಮಾರಂಭವು ಸೋಮವಾರ ನವದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ತಮ್ಮ ಸರಳ ಮತ್ತು ಆತ್ಮೀಯ ನಡೆವಳಿಕೆಯಿಂದ ಎಲ್ಲರ ಮನಗೆದ್ದಿದ್ದಾರೆ.

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ದೀರ್ಘಕಾಲದ ಆಸೆಯನ್ನು ವಿಜಯ್ ಈಗ ಈಡೇರಿಸಿದ್ದಾರೆ.

22 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳೆ

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಿಎಂ ವಿಜಯ್ ಬಳಿ ಬಂದು ಮಹಿಳೆಯೊಬ್ಬರನ್ನು ಪರಿಚಯಿಸಿದರು. ಈಕೆ ಕಳೆದ 22 ವರ್ಷಗಳಿಂದ ತಮ್ಮ ನಿವಾಸದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ ಪ್ರಿಯಾಂಕಾ, ಅವರಿಗೆ ಬಹುದಿನಗಳ ಆಸೆಯೊಂದಿದೆ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ವಿಜಯ್, ಅವರ ಆಸೆ ಏನು ಮತ್ತು ನಾನು ಹೇಗೆ ಸಹಾಯ ಮಾಡಬಹುದು? ಎಂದು ನಗುತ್ತಲೇ ಪ್ರಶ್ನಿಸಿದರು. ಈ ಮಹಿಳೆ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದು, ನಿಮ್ಮೊಂದಿಗೆ ಮಾತನಾಡಲು ಮತ್ತು ಒಂದು ಫೋಟೋ ತೆಗೆಸಿಕೊಳ್ಳಲು ಬಹಳ ದಿನಗಳಿಂದ ಕಾಯುತ್ತಿದ್ದರು ಎಂದು ಪ್ರಿಯಾಂಕಾ ವಿವರಿಸಿದರು. ತಕ್ಷಣವೇ ಒಪ್ಪಿಕೊಂಡ ವಿಜಯ್, ಆ ಮಹಿಳೆಯೊಂದಿಗೆ ನಿಂತು ಸೆಲ್ಫಿ ತೆಗೆಸಿಕೊಂಡರಲ್ಲದೆ, ಅವರ ಯೋಗಕ್ಷೇಮವನ್ನು ವಿಚಾರಿಸಿ ಕೆಲಕಾಲ ಆತ್ಮೀಯವಾಗಿ ಮಾತನಾಡಿದರು. ಸಿಎಂ ವಿಜಯ್ ಅವರ ಈ ಸರಳತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿಎಂ ವಿಜಯ್ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ ಅಭಿಮಾನಿ

ರಾಹುಲ್ ಗಾಂಧಿ ಪಕ್ಕದಲ್ಲೇ ಆಸೀನರಾದ ವಿಜಯ್

ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಜಯ್​ರನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಕದಲ್ಲೇ ವಿಜಯ್​ಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇತ್ತ ಸೋನಿಯಾ ಗಾಂಧಿ ಅವರ ಪಕ್ಕದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕುಳಿತಿದ್ದರು. ಈ ಗಣ್ಯರ ಆಸನ ವ್ಯವಸ್ಥೆ ಮತ್ತು ಪರಸ್ಪರ ಮಾತುಕತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಮೇಕೆದಾಟು ವಿವಾದದ ನಡುವೆ ಗಮನ ಸೆಳೆದ ಉಪಸ್ಥಿತಿ

ತಮಿಳುನಾಡು ಮತ್ತು ರಾಜ್ಯದ ನಡುವೆ ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಮತ್ತು ಕಾನೂನು ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಈ ಕಾರ್ಯಕ್ರಮದಲ್ಲಿ ವಿಜಯ್ ಅವರ ಉಪಸ್ಥಿತಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೂಡ ಇದೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ವಿಜಯ್​​ರೊಂದಿಗೆ ಆತ್ಮೀಯತೆಯಿಂದ ನಡೆದುಕೊಂಡಿದ್ದು.

ಒಟ್ಟಾರೆಯಾಗಿ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಹೈ-ಪ್ರೊಫೈಲ್ ಕಾರ್ಯಕ್ರಮವು ರಾಜಕೀಯ ಸಮೀಕರಣಗಳ ಜೊತೆಗೆ ತಮಿಳುನಾಡು ಸಿಎಂ ವಿಜಯ್​ ಅವರ ಮಾನವೀಯ ಮತ್ತು ಸರಳ ನಡೆಗೆ ಸಾಕ್ಷಿಯಾಯಿತು(ಏಜೆನ್ಸೀಸ್​).