Navjot Kaur Sidhu | ರಾಘವ್ ಛಡ್ಡಾ ಬಿಜೆಪಿ ಸೇರ್ಪಡೆ ಹಿಂದೆ ಪ್ರಿಯಾಂಕಾ ಚೋಪ್ರಾ ಕೈವಾಡ!.. ನವಜೋತ್ ಕೌರ್ ಸಿಧು ಸ್ಫೋಟಕ ಹೇಳಿಕೆ!  
ದೇಶ

ರಾಘವ್ ಛಡ್ಡಾ ಬಿಜೆಪಿ ಸೇರ್ಪಡೆ ಹಿಂದೆ ಪ್ರಿಯಾಂಕಾ ಚೋಪ್ರಾ ಕೈವಾಡ!.. ನವಜೋತ್ ಕೌರ್ ಸಿಧು ಸ್ಫೋಟಕ ಹೇಳಿಕೆ! | Navjot Kaur Sidhu

ನವದೆಹಲಿ: ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕರಾಗಿದ್ದ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಪಕ್ಷದೊಂದಿಗಿನ ಸುಮಾರು 15 ವರ್ಷಗಳ ಸುದೀರ್ಘ ಒಡನಾಟದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿರುವುದು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ ಮೂಡಿಸಿದೆ.
ರಾಘವ್ ಚಡ್ಡಾ ಬಿಜೆಪಿಗೆ ಸೇರಲು ನಟಿ ಪ್ರಿಯಾಂಕಾ ಚೋಪ್ರಾ ಅವರೇ ಮುಖ್ಯ ಕಾರಣ ಎಂದು ನವಜೋತ್ ಕೌರ್ ಸಿಧು ಅಭಿಪ್ರಾಯಪಟ್ಟಿದ್ದು, ರಾಘವ್ ಮೇಲೆ ಇಡಿ (ED) ದಾಳಿಯಾಗುವ ಸಾಧ್ಯತೆಯಿದೆ ಎಂದು ಪ್ರಿಯಾಂಕಾಗೆ ಸುಳಿವು ಸಿಕ್ಕಿತ್ತು. ಹೀಗಾಗಿ, ತಮ್ಮ ತಂಗಿ ಪರಿಣಿತಿ ಚೋಪ್ರಾ ಸಂಸಾರವನ್ನು ರಕ್ಷಿಸುವ ಉದ್ದೇಶದಿಂದ ಪ್ರಿಯಾಂಕಾ ರಾಘವ್​​ರನ್ನು ಬಿಜೆಪಿಗೆ ಸೇರುವಂತೆ ಪ್ರೇರೇಪಿಸಿದರು ಎಂದು ಕೌರ್ ಗಂಭೀರವಾಗಿ ಹೇಳಿಕೆ ನೀಡಿದ್ದಾರೆ.
ರಾಘವ್ ಛಡ್ಡಾ ಮಾತ್ರವಲ್ಲದೆ, ಎಎಪಿಯ ಒಟ್ಟು 10 ರಾಜ್ಯಸಭಾ ಸದಸ್ಯರ ಪೈಕಿ ಹರ್ಭಜನ್ ಸಿಂಗ್ ಮತ್ತು ಸ್ವಾತಿ ಮಾಲಿವಾಲ್ ಸೇರಿದಂತೆ ಒಟ್ಟು ಏಳು ಸದಸ್ಯರು ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ಇದು ಎಎಪಿಗೆ ಸಂಸತ್ತಿನ ಮೇಲ್ಮನೆಯಲ್ಲಿ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ನವಜೋತ್ ಕೌರ್ ಸಿಧು ನೀಡಿರುವ ಹೇಳಿಕೆಯು ರಾಜಕೀಯ ಮತ್ತು ಚಿತ್ರರಂಗದ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಭಾರಿ ಚರ್ಚೆಯಾಗುತ್ತಿದೆ.

ವಿಷಕಾರಿ ವಾತಾವರಣ ಮನೆಮಾಡಿದೆ

ತಮ್ಮ ರಾಜಕೀಯ ನಡೆಯನ್ನು ಸಮರ್ಥಿಸಿಕೊಂಡಿರುವ ರಾಘವ್ ಛಡ್ಡಾ, ಆಮ್ ಆದ್ಮಿ ಪಕ್ಷದಲ್ಲಿ ಈಗ ವಿಷಕಾರಿ ವಾತಾವರಣ ಮನೆಮಾಡಿದೆ ಎಂದು ಆರೋಪಿಸಿದ್ದಾರೆ. ನಾನು ನನ್ನ ಯೌವನದ 15 ವರ್ಷಗಳನ್ನು ಈ ಪಕ್ಷಕ್ಕಾಗಿ ರಕ್ತ ಮತ್ತು ಬೆವರಿನಿಂದ ಕಟ್ಟಿದ್ದೇನೆ. ಆದರೆ ಇಂದು ಪಕ್ಷವು ತನ್ನ ಮೂಲ ಆದರ್ಶಗಳಿಂದ ದೂರ ಸರಿದಿದೆ. ಇಲ್ಲಿ ನಮಗೆ ಕೆಲಸ ಮಾಡಲು ಅಥವಾ ಸಂಸತ್ತಿನಲ್ಲಿ ಸ್ವತಂತ್ರವಾಗಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ತಪ್ಪು ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ ಎಂಬುದು ನನಗೆ ಅರಿವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಘವ್ ಛಡ್ಡಾ ಈ ಹಿಂದೆ ಎಎಪಿಯಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆಪ್​​ ಸಂಸದರ ಸೇರ್ಪಡೆ ಬಿಜೆಪಿಗೆ ಸಂಖ್ಯಾಬಲದ ದೃಷ್ಟಿಯಿಂದ ದೊಡ್ಡ ಬಲ ತಂದಿದ್ದು, ನವಜೋತ್ ಕೌರ್ ಸಿಧು ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯಾಗಲಿ ಅಥವಾ ರಾಘವ್ ಛಡ್ಡಾ ಅವರಾಗಲಿ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ(ಏಜೆನ್ಸೀಸ್​​).