- ಕೃಷ್ಣಾ ನದಿಯಿಂದ ಹೊರಬಂದ ಮೊಸಳೆಗೆ ಪೂಜೆ ಮಾಡಿದ ಅರ್ಚಕ
- ಮೊಸಳೆ ಕಂಡು ಭಯಪಟ್ಟು ದೂರ ಓಡಿದ ಭಕ್ತರು, ವಿಡಿಯೋ ವೈರಲ್
- ತೆಲಂಗಾಣದ ಬೀಚುಪಲ್ಲಿ ಕೃಷ್ಣಾ ನದಿ ಪುಷ್ಕರ್ ಘಾಟ್‌ನಲ್ಲಿ ವಿಚಿತ್ರ ಘಟನೆ
ತೆಲಂಗಾಣ: ಬೀಚುಪಲ್ಲಿ ಕೃಷ್ಣಾ ನದಿ ಪುಷ್ಕರ್ ಘಾಟ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ನದಿಯಿಂದ ಮೊಸಳೆಯೊಂದು ಜನಗಳಿರುವ ಘಾಟ್‌ಗೆ ಬಂದಿದ್ದು, ಇದನ್ನು ಕಂಡು ಪ್ರವಾಸಿಗರು ಕೆಲಕಾಲ ಆತಂಕಗೊಂಡಿದ್ದಾರೆ. ಇದರ ನಡುವೆ ಪೂಜಾರಿಯೊಬ್ಬ ಅದೇ ಮೊಸಳೆಗೆ ಪೂಜೆ ಸಲ್ಲಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹುಬ್ಬೇರುಸುವಂತೆ ಮಾಡಿದೆ.
ಇನ್ನು, ಮೊಸಳೆ ಘಾಟ್‌ನ ಬಳಿ ಕಾಣಿಸಿಕೊಂಡ ಬಳಿಕ ಕುತೂಹಲಕಾರಿ ಘಟನೆಯೊಂದು ನಡೆದಿದದೆ. ದೇವಾಲಯದ ಅರ್ಚಕ ಅನಿಲ್ ಶರ್ಮಾ ಮೊಸಳೆಗೆ ಪೂಜೆ ಸಲ್ಲಿಸಿ, ಮಂತ್ರಗಳನ್ನು ಪಠಿಸಿ ಅಭಿಷೇಕ ಮಾಡಿದ್ದಾರೆ. ಈ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊಸಳೆಗೆ ಪೂಜೆ ಸಲ್ಲಿಸಿದ್ದೇಕೆ?
ಮೊಸಳೆಯನ್ನು ಮಳೆ ದೇವರು ವರುಣ ಮತ್ತು ಗಂಗಾಮಾತೆಯ ವಾಹನ ಎಂದು ಅರ್ಚಕ ಅನಿಲ್ ಶರ್ಮಾ ಹೇಳಿದ್ದಾರೆ. ಹೀಗಾಗಿ ಉತ್ತಮ ಮಳೆ ಹಾಗೂ ಜನರಿಗೆ ಸಮೃದ್ಧಿ ಸಿಗಲೆಂದು ಮೊಸಳೆಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಆ ವಿಡಿಯೋದಲ್ಲಿ ಅರ್ಚಕ ಪೂಜೆ ಮಾಡುವ ವೇಳೆ ಮೊಸಳೆ ಸುಮ್ಮನೆ ಕುಳಿತಿದ್ದು ಮಾತ್ರ ಜನರ ಅಚ್ಚರಿಗೆ ಕಾರಣವಾಗಿದೆ.
ಪ್ರವಾಸಿಗರಿಗೆ ಖಾಕಿ ಎಚ್ಚರಿಕೆ
ಆದರೆ ಪೂಜೆ ಬಳಿಕ ಮೊಸಳೆ ಹತ್ತಿರದ ಕಟ್ಟಡದೊಳಗೆ ನುಗ್ಗಿದ್ದು, ಇದರಿಂದ ಸ್ಥಳದಲ್ಲಿದ್ದ ಜನರು ಮತ್ತಷ್ಟು ಭಯಭೀತರಾಗಿದ್ದರು. ಇತ್ತೀಚೆಗೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ್ದರಿಂದ ಮೊಸಳೆಗಳ ಚಲನವಲನದ ಬಗ್ಗೆ ಪೊಲೀಸರು ಈಗಾಗಲೇ ಭಕ್ತರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರು.
ಅರಣ್ಯ ಇಲಾಖೆ ಕಾರ್ಯಾಚರಣೆ
ಘಟನೆ ಬಗ್ಗೆ ಪೊಲೀಸರು ಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯ ಮೀನುಗಾರರ ಸಹಾಯದಿಂದ ಮೊಸಳೆಯನ್ನು ಸೆರೆಹಿಡಿದರು. ಹಗ್ಗಗಳ ಮೂಲಕ ಮೊಸಳೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಅರಣ್ಯ ಸಿಬ್ಬಂದಿ, ಬಳಿಕ ಅದನ್ನು ಸುರಕ್ಷಿತವಾಗಿ ಕೃಷ್ಣಾ ನದಿಗೆ ಬಿಟ್ಟಿದ್ದಾರೆ.
ಸದ್ಯ ಬೀಚುಪಲ್ಲಿ ಪುಷ್ಕರ್ ಘಾಟ್‌ನಲ್ಲಿ ಮೊಸಳೆಗೆ ಅರ್ಚಕರು ಪೂಜೆ ಸಲ್ಲಿಸಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಕುರಿತು ನೆಟ್ಟಿಗರು ಕೂಡ ವಿವಿಧ ರೀತಿಯಲ್ಲಿ ಕಾಮೇಂಟ್ ಮಾಡಿದ್ದಾರೆ.(ಏಜೆನ್ಸೀಸ್).