ಯುದ್ಧ ಮೂರು ರಾಷ್ಟ್ರಗಳ ನಡುವೆ ನಡೆಯುತ್ತಿದ್ದರೂ, (ಇರಾನ್-ಅಮೆರಿಕ ಹಾಗೂ ಇಸ್ರೇಲ್) ಇದರಿಂದ ಬೆಲೆಯೇರಿಕೆಯ ಸಂಕಷ್ಟ ಜಗತ್ತಿನ ಬಹುತೇಕ ದೇಶಗಳಿಗೆ ತಟ್ಟಿದೆ. ಭಾರತದ ಮಟ್ಟಿಗಂತೂ ಇದು ಭಾರಿ ಸಮಸ್ಯೆಯಾಗಿ ಪರಿಣಮಿಸಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಎಲ್ಪಿಜಿ, ಆಹಾರಧಾನ್ಯ, ತರಕಾರಿ, ತಿಂಡಿತಿನಿಸು ಮಾತ್ರವಲ್ಲ ಚಹಾ, ಕಾಫಿಯ ಬೆಲೆಯಲ್ಲೂ ಭರ್ಜರಿ ಏರಿಕೆಯಾಗಿದೆ. ಕರೊನಾ ಸಾಂಕ್ರಾಮಿಕದ ಹೊತ್ತಲ್ಲಿ ಇದೇ ಬಗೆಯ ಸಂಕಷ್ಟ ಉದ್ಭವಿಸಿತ್ತು. ಆ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದ ಭಾರತೀಯ ಆರ್ಥಿಕತೆ ಈ ಬಾರಿ ಬೆಲೆಯೇರಿಕೆಯನ್ನು ತಡೆಯುವಲ್ಲಿ ಸಫಲವಾಗುವುದೇ ಕಾದುನೋಡಬೇಕು. ಯುದ್ಧದ ಮುಂಚಿನ ಮತ್ತು ಈಗಿನ ಸ್ಥಿತಿಗೆ ತುಂಬ ವ್ಯತ್ಯಾಸವಿದ್ದು, ಬೆಲೆಯೇರಿಕೆಯ ವೇಗ ನಿಜಕ್ಕೂ ಗಾಬರಿಗೊಳಿಸಿದೆ. ಈ ಸಮಸ್ಯೆಯಿಂದ ಹೇಗೆ ಹೊರಬರಬಹುದು? ಯುದ್ಧ ಇನ್ನೂ ಮುಂದುವರಿದರೆ ಹೇಗೆ? ಈ ಎಲ್ಲ ಸಂಗತಿಗಳ ಅವಲೋಕನ ಇಲ್ಲಿದೆ.
ದೂರದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ನಮ್ಮ ಅಡುಗೆಮನೆ ಬಜೆಟ್ನ್ನು ತಲೆಕೆಳಗಾಗಿಸಿದೆ. ಶ್ರೀಸಾಮಾನ್ಯರು ದರ್ಶಿನಿಯಲ್ಲಿ ಒಂದು ಲೋಟ ಚಹಾ, ಕಾಫಿ ಕುಡಿಯಲು ಹತ್ತು ಬಾರಿ ಯೋಚನೆ ಮಾಡುವಂತಾಗಿದೆ. ಬೆಲೆಯೇರಿಕೆಯ ಬಿಸಿ ಭಾರತದ ಹಳ್ಳಿ-ಹಳ್ಳಿಗಳಿಗೂ ತಟ್ಟಿದೆ. ತೈಲ ಬೆಲೆ ನಿಯಂತ್ರಣಕ್ಕೆ ಬಾರದ ಹೊರತು ಆಹಾರ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದರೂ, ಈ ಮೇ 1ರಂದು ಹಿಂದೆಂದೂ ಆಗದಷ್ಟು ಅಂದರೆ ಒಂದೇ ಬಾರಿಗೆ 975-993 ರೂ.ವರೆಗೆ ಏರಿಕೆಯಾಗಿದೆ. ಇದರಿಂದ ಹೋಟೆಲ್, ಆತಿಥ್ಯ ರಂಗ ಚಿಂತೆಗೀಡಾಗಿದೆ. ಫೆಬ್ರವರಿ 28ರಂದು ಯುದ್ಧ ಆರಂಭಗೊಂಡಿದ್ದು, ಇನ್ನೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಸಮರ 62 ದಿನಗಳನ್ನು ಪೂರೈಸಿದ್ದು, ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ನೀಡಿದೆ. ಏಷ್ಯಾದ ಇತರ ರಾಷ್ಟ್ರಗಳಿಗೂ ಬೆಲೆಯೇರಿಕೆಯ ಶಾಕ್ ಬಲವಾಗಿಯೇ ತಟ್ಟಿದೆ. ಹೊಮುಜ್ ಜಲಸಂಧಿ ಸಂಘರ್ಷದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದ್ದು, ಕಚ್ಚಾ ತೈಲ ಸಾಗಾಣಿಕೆಗೆ ಅಡ್ಡಿಯಾಗಿದೆ. ಯುದ್ಧಕ್ಕೆ ಮುಂಚೆ 70-80 ಡಾಲರ್ ಪ್ರತಿ ಬ್ಯಾರೆಲ್ನಷ್ಟಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ 110-118 ಡಾಲರ್ಗೆ ಏರಿಕೆಯಾಗಿದೆ. ತನ್ನ ಅಗತ್ಯದ ಶೇಕಡ 85ರಷ್ಟು ಕಚ್ಚಾತೈಲಕ್ಕೆ ಆಮದನ್ನೇ ಅವಲಂಬಿಸಿರುವ ಭಾರತ ಸಮಸ್ಯೆಗೆ ಸಿಲುಕಿದೆ. ಸಾಗಾಣಿಕೆ ವೆಚ್ಚ ಏರಿರುವುದರಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗುತ್ತಿದ್ದು, ಕೃಷಿ, ಸಾರಿಗೆ, ಉದ್ಯಮ ಮತ್ತು ನಿರ್ಮಾಣ ರಂಗಗಳು ಭಾರೀ ನಷ್ಟ ಅನುಭವಿಸುತ್ತಿವೆ. ಸರ್ಕಾರವು ಸಬ್ಸಿಡಿ, ಆಮದು ವೈವಿಧ್ಯಕರಣ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಆದರೆ ಸಾಮಾನ್ಯ ಜನರ ಜೀವನ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಯುದ್ಧ ದೀರ್ಘಕಾಲ ಮುಂದುವರಿದರೆ ಆಹಾರ ಹಣದುಬ್ಬರ ಮತ್ತಷ್ಟು ಏರಿಕೆಯಾಗಿ, ಪರಿಸ್ಥಿತಿ ಗಂಭೀರವಾಗಲಿದೆ.
ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ
ನಗರ ಹೊಸ ದರ ಹಳೆಯ ದರ (ಏಪ್ರಿಲ್ 2026)
ಬೆಂಗಳೂರು - ₹3,152 -₹2,161
ದೆಹಲಿ - ₹3071.50 -₹2078.50
ಕೋಲ್ಕತ್ತ - ₹3,202 -₹2208
ಮುಂಬೈ - ₹3024 -₹2031
ಚೆನ್ನೈ - ₹3237 -₹2246.50
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಆಹಾರ ಧಾನ್ಯಗಳು ತುಟ್ಟಿಯಾಗಿವೆ. ಕೃಷಿ ಯಂತ್ರೋಪಕರಣಗಳ (ಟ್ರಾಕ್ಟರ್, ಹಾರ್ವೆಸ್ಟರ್) ಬಳಕೆ ದುಬಾರಿಯಾಗಿದೆ. ಇದರಿಂದ ಪ್ರತಿ ಕೆ.ಜಿ ಅಕ್ಕಿಯ ಬೆಲೆಯಲ್ಲಿ -ಠಿ;15 ರಿಂದ -ಠಿ;20 ಏರಿಕೆಯಾಗಿದೆ. ಬೇಳೆಕಾಳುಗಳ ಅಭಾವ ಸೃಷ್ಟಿಯಾಗಿದೆ. ಕೆ.ಜಿ ತೊಗರಿ ಬೇಳೆಯ ಬೆಲೆ -ಠಿ;155--ಠಿ;190ರಿಂದ -ಠಿ;200ಕ್ಕೆ, ಹೆಸರು ಬೇಳೆ -ಠಿ;110ರಿಂದ -ಠಿ;140ಕ್ಕೆ, ಗೋಧಿ ಹಿಟ್ಟು ಬೆಲೆ -ಠಿ;45ರಿಂದ -ಠಿ;55ಕ್ಕೆ ಏರಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೊಬೈಲ್ ಫೋನ್ಗಳ ಬಿಡಿಭಾಗಗಳ ಆಮದು ವೆಚ್ಚ ಹೆಚ್ಚಾದ ಕಾರಣ, ಸ್ಮಾರ್ಟ್ಫೋನ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯೂ ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೆಪೊ ದರಗಳನ್ನು ಹೆಚ್ಚಿಸಿದರೆ, ಅದು ಮನೆ ಮತ್ತು ವಾಹನ ಸಾಲಗಳ ಇಎಂಐ ಹೆಚ್ಚಳಕ್ಕೆ ಕಾರಣವಾಗುತ್ತದೆ.
ವಿಮಾನ ಇಂಧನ ಬೆಲೆಯಲ್ಲಿ ಭಾರೀ ಹೆಚ್ಚಳದಿಂದ ವಿಮಾನಯಾನ ಟಿಕೆಟ್ಗಳು ದುಬಾರಿಯಾಗಿವೆ.
ಭಾರತವು ಪ್ರತಿವರ್ಷ 1.67 ಕೋಟಿ ಟನ್ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಜಾಗತಿಕ ಅಸ್ಥಿರತೆಯಿಂದಾಗಿ ಇದರ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಬೆಲೆಯಲ್ಲಿ ಏರಿಕೆ ಆಗಿದೆ. ಭಾರತದ ಆಮದಿನಲ್ಲಿ ಸಿಂಹಪಾಲು, ಅಂದರೆ ಶೇ.40ರಷ್ಟು ಪಾಲನ್ನು ಪಾಮ್ ಆಯಿಲ್ (ತಾಳೆ ಎಣ್ಣೆ) ಹೊಂದಿದೆ. ಈ ಎಣ್ಣೆಯು ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಮಲಕ್ಕಾ ಜಲಸಂಧಿ ಮಾರ್ಗದ ಮೂಲಕ ಸಮುದ್ರ ಹಡಗುಗಳಲ್ಲಿ ಭಾರತವನ್ನು ತಲುಪುತ್ತದೆ. ಇರಾನ್-ಅಮೆರಿಕ ಸಂಘರ್ಷದಿಂದಾಗಿ ಹಡಗುಗಳ ಸಂಚಾರದ ಬಾಡಿಗೆ ಅಥವಾ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಈ ಹೆಚ್ಚುವರಿ ವೆಚ್ಚದ ಪೂರ್ಣ ಹೊರೆ ಅಂತಿಮವಾಗಿ ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸುವ ಎಣ್ಣೆಯ ಪ್ಯಾಕೆಟ್ಗಳ ಮೇಲೆ ಬೀಳುತ್ತಿದೆ. ಒಂದೆಡೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ವಿಶ್ವದ ಅತಿದೊಡ್ಡ ಪಾಮ್ ಆಯಿಲ್ ಉತ್ಪಾದಕ ದೇಶವಾದ ಇಂಡೋನೇಷ್ಯಾ ರಫ್ತು ನಿಯಂತ್ರಣದ ಮುನ್ಸೂಚನೆ ನೀಡಿದೆ.
ಇಂಡೋನೇಷ್ಯಾ ಸರ್ಕಾರ ತನ್ನಲ್ಲಿರುವ ಪಾಮ್ ಆಯಿಲ್ ಅನ್ನು ಹೊರದೇಶಗಳಿಗೆ ಮಾರುವ ಬದಲು ಸ್ವಂತ ಬಳಕೆಗಾಗಿ ಕಾಯ್ದಿರಿಸಲು ಮುಂದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಮತ್ತು ಸಾಗಣೆ ವೆಚ್ಚ ಏರುತ್ತಿರುವ ಕಾರಣ, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಪ್ರತಿ ಲೀಟರ್ಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ತೈಲ ಬೆಲೆ ಏರಿಕೆಯಿಂದ ರಸಗೊಬ್ಬರ (ಯೂರಿಯಾ) ಬೆಲೆ ಹೆಚ್ಚಳವಾಗಿದೆ. ಇದು ಖರೀಫ್ ಬೆಳೆಯ ಉತ್ಪಾದನಾ ವೆಚ್ಚ ಹೆಚ್ಚಿಸಿದೆ. ಟೊಮಾಟೋ ಬೆಲೆ ಈಗಾಗಲೇ 34-36% ಏರಿಕೆ ಕಂಡಿದೆ. ಆಹಾರ ಧಾನ್ಯಗಳ ಹಣದುಬ್ಬರ ಮಾರ್ಚ್ನಲ್ಲಿ 3.87%ಗೆ ಏರಿದೆ. ಅಕ್ಕಿ ಮತ್ತು ಗೋಧಿ ಬೆಲೆಗಳು 5-15% ಏರಿಕೆಯಾಗಿವೆ. ಖಾದ್ಯ ತೈಲ ಬೆಲೆಯೂ ಹೆಚ್ಚಳಗೊಂಡಿದೆ.
ಆರ್ಥಿಕ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 2026ರ ಮಾರ್ಚ್-ಏಪ್ರಿಲ್ ತಿಂಗಳ ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟಾರೆ ಹಣದುಬ್ಬರ ದರವು ಶೇಕಡ 3.4ಕ್ಕೆ ತಲುಪಿದ್ದು, ಇದು ಕಳೆದ ಒಂದು ವರ್ಷದಲ್ಲೇ ದಾಖಲಾದ ಗರಿಷ್ಠ ಮಟ್ಟವಾಗಿದೆ. ಅದರಲ್ಲೂ ಆಹಾರ ಪದಾರ್ಥಗಳ ಹಣದುಬ್ಬರ ಶೇ.3.87ಕ್ಕೆ ಏರಿಕೆಯಾಗಿದ್ದು, ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಬಿಸಿಗಾಳಿಯಿಂದಾಗಿ ಕೃಷಿ ಉತ್ಪಾದನೆಗೆ ಹೊಡೆತ ಬಿದ್ದರೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗದಿದ್ದರೆ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಲಿದೆ. ಸದ್ಯಕ್ಕೆ ಕೈಗೆಟುಕದ ದರದಲ್ಲಿರುವ ಆಹಾರ ಪದಾರ್ಥಗಳು ಮತ್ತು ಇಂಧನ ವೆಚ್ಚದಿಂದಾಗಿ ಸಾಮಾನ್ಯ ನಾಗರಿಕರು ಉಳಿತಾಯ ಮಾಡುವುದನ್ನೇ ಮರೆತು ಬದುಕು ಸಾಗಿಸುವಂತಾಗಿದೆ.
ನಗರ ದರ
ಬೆಂಗಳೂರು -₹915.50
ದೆಹಲಿ -₹913
ಕೋಲ್ಕತ್ತ -₹939
ಮುಂಬೈ -₹912.50
ಚೆನ್ನೈ -₹928.50
ರಾಯಪುರ -₹984
ಪಟನಾ -₹1011
ಭೋಪಾಲ್ -₹918.50