ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
- ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಇಸ್ರೇಲ್-ಇರಾನ್ ಯುದ್ಧ
- ದೇಶದಲ್ಲಿ ಗ್ಯಾಸ್ ಕೊರತೆಯ ಬೆನ್ನಲ್ಲೇ ಪ್ರೀಮಿಯಂ ಇಂಧನ ದರದಲ್ಲಿ ಹೆಚ್ಚಳ
- ತೈಲ ಬಿಕ್ಕಟ್ಟಿನ ಹಿನ್ನೆಲೆ ಈ ನಿರ್ಧಾರ ಅನಿವಾರ್ಯ ಎಂಬಂತಾಗಿದೆ
Petrol Price Hike: ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧವು ಮುಂದುವರೆದಿದ್ದು, ಇಡೀ ಜಗತ್ತಿಗೆ ದೊಡ್ಡ ಸಂಕಷ್ಟವನ್ನು ತಂದಿಟ್ಟಿದೆ. ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಮೂಲಕ ತೈಲ ಬಿಸಿ ತಂದಿಟ್ಟಿರುವ ಇರಾನ್, ದೇಶದಲ್ಲಿ ಎಲ್ಪಿಜಿ ಗ್ಯಾಸ್ ಅಭಾವಕ್ಕೆ ಕಾರಣವಾಯಿತು. ಈ ಹೊಡೆತದಿಂದಲೇ ಇನ್ನೂ ಚೇತರಿಸಿಕೊಳ್ಳದ ಜನರಿಗೆ ಈಗ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ ದೊಡ್ಡ ಶಾಕ್ ನೀಡಿದೆ.
ದೇಶದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಗಳನ್ನು ತೈಲ ಬಿಕ್ಕಟ್ಟಿನ ಕಾರಣ ದಿಢೀರ್ ಏರಿಸಲಾಗಿದೆ. ನವೀಕರಣದ ಪ್ರಕಾರ, ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2.30 ರೂ. ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, ಹಿಂದೂಸ್ಥಾನ್ ಪೆಟ್ರೋಲಿಯಂ (ಎಚ್ಪಿಸಿಎಲ್), ಇಂಡಿಯನ್ ಆಯಿಲ್ ಸಂಸ್ಥೆಗಳು, ತಮ್ಮ ಪ್ರೀಮಿಯಂ ಪೆಟ್ರೋಲ್ ದರವನ್ನು ಲೀಟರ್‌ಗೆ 2 ರೂ.ಗೆ ಹೆಚ್ಚಿಸಿವೆ.
ಇದು ಹೆಚ್ಚಿನ ಮೈಲೇಜ್ ಮತ್ತು ಇಂಜಿನ್ ಸ್ಮೂತ್ನೆಸ್ಗಾಗಿ ಒಲವು ತೋರುತ್ತಿದ್ದ ಬಳಕೆದಾರರಿಗೆ ಪೆಟ್ಟು ನೀಡಲಿದೆ. ಸಂಸ್ಥೆಗಳು, ದಿಢೀರ್ ಹೆಚ್ಚಳಕ್ಕೆ ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚದಲ್ಲಿನ ಬದಲಾವಣೆಗಳು ಮತ್ತು ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷವು ಈ ಬದಲಾವಣೆಗೆ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ವಿಯೆಟ್ನಾಂ ದೇಶದಲ್ಲಿಯೂ ಬೆಲೆ ಏರಿಕೆ
ಇದಕ್ಕೂ ಮೊದಲು, ಶುಕ್ರವಾರ (ಮಾ.20) ವಿಯೆಟ್ನಾಂನಲ್ಲಿ ಪೆಟ್ರೋಲ್ ಬೆಲೆಗಳನ್ನು ಶೇ.20ರಷ್ಟು ಹೆಚ್ಚಿಸಲಾಯಿತು. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ತೈಲ ಮತ್ತು ಗ್ಯಾಸ್ ಕೊರತೆ ಹೆಚ್ಚಾದ ಬೆನ್ನಲ್ಲೇ ಸರ್ಕಾರವು ತಡರಾತ್ರಿಯೇ ದಿಢೀರ್ ದರಗಳನ್ನು ಏರಿಸಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).