Pregnant Telangana Woman Dies By Suicide 
ದೇಶ

ಹುಟ್ಟಲಿರುವ ಮಗುವಿನ DNA ಟೆಸ್ಟ್​ ಮಾಡಿಸು ಎಂದು ಪೀಡಿಸುತ್ತಿದ್ದ ಪತಿ; ಮನನೊಂದು 5 ತಿಂಗಳ ಗರ್ಭಿಣಿ ಆತ್ಮಹತ್ಯೆ..Telangana

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದ ಮೇದಕ್ ಜಿಲ್ಲೆಯ ಗಾದಿಪೆದ್ದಾಪುರ ಗ್ರಾಮದಲ್ಲಿ ಘಟನೆ.
  • ಹುಟ್ಟಲಿರುವ ಮಗುವಿನ ಪಿತೃತ್ವ ಸಂಶಯಿಸಿ ಡಿಎನ್‌ಎ ಟೆಸ್ಟ್‌ಗೆ ಪೀಡಿಸುತ್ತಿದ್ದ ಪತಿ.
  • ಮನನೊಂದು ಆತ್ಮಹತ್ಯೆಗೆ ಶರಣಾದ 23 ವರ್ಷದ 5 ತಿಂಗಳ ಗರ್ಭಿಣಿ.
ಹೈದರಾಬಾದ್​: ಹುಟ್ಟಲಿರುವ ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಹಿನ್ನೆಲೆ, 23 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಅಲ್ಲಾದುರ್ಗ್ ಮಂಡಲದ ಗಾದಿಪೆದ್ದಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 
ಮೃತ ಮಹಿಳೆಯನ್ನು ಸುಶ್ಮಿತಾ(23)ಎಂದು ಗುರುತಿಸಲಾಗಿದೆ. 18 ತಿಂಗಳ ಹಿಂದೆ ಜಿ. ಅಭಿಲಾಷ್ ಎಂಬುವವನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸುಶ್ಮಿತಾ ಐದು ತಿಂಗಳ ಗರ್ಭಿಣಿ. ಅವಳಿಗೆ ಪತಿಯಿಂದ ನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಳು. ತನ್ನ ಮಗಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು  ಸುಶ್ಮಿತಾ ಅವರ ತಾಯಿ ಜನಾಬಾಯಿ ದೂರು ನೀಡಿದ್ದಾರೆ. 

ದೂರಿನಲ್ಲಿ ಏನಿದೆ?

ಪತಿ ಅಭಿಲಾಷ್​​ ತನ್ನ ಪತ್ನಿಯ ನಡತೆ ಬಗ್ಗೆ ಸದಾ ಸಂಶಯ ಪಡುತ್ತಿದ್ದ. ಇದೇ ವಿಚಾರವಾಗಿ ಹಿಂಸೆ ನೀಡುತ್ತಿದ್ದ. ಇಷ್ಟೇ ಅಲ್ಲದೆ ಆಕೆಯ ಅತ್ತೆ ಕೂಡ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು.ಜೂನ್ 23 ರಂದು ಸುಶ್ಮಿತಾ ಅವರ ಪೋಷಕರಾದ ಜನಾಬಾಯಿ ಮತ್ತು ಅವರ ಪತಿ, ಮಗಳ ಸೀಮಂತ ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಮಗಳ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲೇ ದೊಡ್ಡ ಜಗಳ ನಡೆದಿದೆ. 
ಜಗಳದ ಮಧ್ಯೆ ಪತಿ ಅಭಿಲಾಷ್, ಹುಟ್ಟಲಿರುವ ಮಗುವಿಗೆ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಹಠ ಹಿಡಿದು ಗದ್ದಲ ಸೃಷ್ಟಿಸಿದ್ದಾನೆ. ಆ ಸಮಯದಲ್ಲಿ ಸಮುದಾಯದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದ್ದರು. ಆದರೆ, ಹಿರಿಯರು ಹೋದ ಮೇಲೂ ಪತಿ ಮತ್ತು ಅತ್ತೆಯ ಕಿರುಕುಳ ಮುಂದುವರಿದಿದೆ ಎನ್ನಲಾಗಿದೆ. ಈ ಘಟನೆ ನಡೆದ ಎರಡು ದಿನಗಳ ಬಳಿಕ, ಸುಶ್ಮಿತಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪತಿ, ಅತ್ತೆ ಬಂಧನ

ಮಗಳ ಸಾವಿಗೆ ಪತಿ ಮತ್ತು ಅತ್ತೆಯ ಕಿರುಕುಳವೇ ಕಾರಣ ಎಂದು ತಾಯಿ ಜನಾಬಾಯಿ ಪೊಲೀಸರಿಗೆ ದೂರು ನೀಡಿ, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಘಟನೆಯ ನಂತರ ಪೊಲೀಸರು ಸುಶ್ಮಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗಾರೆಡ್ಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಪೊಲೀಸರು ಏನಂದ್ರು?

'ನಾವು ಮೃತರ ಪತಿ ಜಿ. ಅಭಿಲಾಷ್ ಮತ್ತು ಆತನ ತಾಯಿಯನ್ನು ಬಂಧಿಸಿದ್ದೇವೆ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು  ಅಲ್ಲಾದುರ್ಗ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಡಿ. ಶಂಕರ್ ಅವರು ಹೇಳಿದರು. 
ಮೃತ ಯುವತಿಯ ತಾಯಿ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 85, ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಸಾಮುದಾಯಿಕ ಉದ್ದೇಶಕ್ಕೆ ಸಂಬಂಧಿಸಿದ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ, (ಏಜೆನ್ಸೀಸ್).