ದೆಹಲಿ,ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸಂಭವಿಸಿದ ಅಪಘಾತಗಳ ದೃಶ್ಯ 
ದೇಶ

ಓವರ್ ಸ್ಪೀಡ್, ರೀಲ್ಸ್ ಹುಚ್ಚಿಗೆ ಅಮೂಲ್ಯ ಜೀವಗಳ ಬಲಿ: ದೇಶದ ಮೂರು ಕಡೆ ಸಂಭವಿಸಿದ ಭೀಕರ ಆಕ್ಸಿಡೆಂಟ್‌ಗೆ 10 ಮಂದಿ ದುರ್ಮರಣ! Road Accidents

ಸಂಭಾಜಿನಗರ: ದೇಶದ ಹೆದ್ದಾರಿಗಳಲ್ಲಿ ಓವರ್ ಸ್ಪೀಡ್ ಮತ್ತು ಅಜಾಗರೂಕ ಡ್ರೈವಿಂಗ್ ಎಷ್ಟು ಡೇಂಜರಸ್ ಅನ್ನೋದಕ್ಕೆ ಇತ್ತೀಚೆಗೆ ನಡೆದಿರುವ ಈ ಮೂರು ಭೀಕರ ಘಟನೆಗಳೇ ಸಾಕ್ಷಿಯಾಗಿವೆ. ಮಹಾರಾಷ್ಟ್ರ, ದೆಹಲಿ ಮತ್ತು ಕೇರಳದಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 10 ಮಂದಿ ಪ್ರಾಣ ಕಳೆದುಕೊಂಡಿದ್ದು, ಸೋಷಿಯಲ್ ಮೀಡಿಯಾ ಹುಚ್ಚು, ಟ್ರಾಫಿಕ್​ ನಿಯಮ ಉಲ್ಲಂಘನೆ ಮತ್ತು ಅತಿಯಾದ ವೇಗವೇ ಈ ದುರಂತಗಳಿಗೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ತಡೆಗೋಡೆ ಮುರಿದು ಕೆಳಗೆ ಬಿದ್ದ ಖಾಸಗಿ ಬಸ್

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲೂ ಒಂದು ದೊಡ್ಡ ದುರಂತ ನಡೆದಿದೆ. ಅತಿ ವೇಗವಾಗಿ ಬರ್ತಿದ್ದ ಪ್ರೈವೇಟ್ ಬಸ್ಸೊಂದು ಡ್ರೈವರ್ ಕಂಟ್ರೋಲ್ ತಪ್ಪಿ, ಬ್ರಿಡ್ಜ್ ತಡೆಗೋಡೆಯನ್ನ ಮುರಿದುಕೊಂಡು ಕೆಳಗೆ ಬಿದ್ದಿದೆ. ಈ ಘಟನೆಯಲ್ಲಿ ಓರ್ವ ಮಹಿಳಾ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಶಬ್ದ ಕೇಳಿ ತಕ್ಷಣ ಓಡಿ ಬಂದ ಸ್ಥಳೀಯರು, ಪೊಲೀಸರು ಮತ್ತು ರೆಸ್ಕ್ಯೂ ಟೀಮ್ ಜೊತೆ ಸೇರಿ ಗಾಯಾಳುಗಳನ್ನ ಹೊರತೆಗೆದು ಆಸ್ಪತ್ರೆಗೆ ಸೇರಿಸಿದ್ದಾರೆ.

ಸ್ನ್ಯಾಪ್‌ಚಾಟ್ ಸ್ಟೋರಿ ಹಾಕೋಕೆ ಹೋಗಿ ಪ್ರಾಣ ಕಳೆದುಕೊಂಡ ಯುವಕ!

ದೆಹಲಿಯ ದ್ವಾರಕಾ ಎಕ್ಸ್‌ಪ್ರೆಸ್‌ವೇ ಏರ್‌ಪೋರ್ಟ್ ಸುರಂಗದಲ್ಲಿ ನಡೆದಿರುವ ಆಕ್ಸಿಡೆಂಟ್ ನಿಜಕ್ಕೂ ಮೈಜುಮ್ಮೆನ್ನಿಸುವಂತಿದೆ. ಇಲ್ಲಿ ಗಂಟೆಗೆ ಕೇವಲ 80 ಕಿ.ಮೀ ಸ್ಪೀಡ್ ಲಿಮಿಟ್ ಇದೆ. ಆದ್ರೆ 'ಸಿಂಗ್' ಎಂಬಾತ ಮಾಡಿಫೈ ಮಾಡಿದ್ದ 'ವೋಕ್ಸ್‌ವ್ಯಾಗನ್ ವರ್ಟಸ್' ಕಾರನ್ನು ಬರೋಬ್ಬರಿ 200 ಕಿ.ಮೀ ವೇಗದಲ್ಲಿ ಓಡಿಸಿದ್ದಾನೆ. ಸುರಂಗದ ಸಿಸಿಟಿವಿಯಲ್ಲಿ ಕಾರು ರಾಕೆಟ್ ತರಹ ನುಗ್ಗಿರೋ ದೃಶ್ಯ ಸೆರೆಯಾಗಿದೆ.

ಆಕ್ಸಿಡೆಂಟ್ ಆಗೋದಕ್ಕೂ ಕೆಲವೇ ಕ್ಷಣಗಳ ಮುಂಚೆ ಆತ ಕಾರಿನ ಸ್ಪೀಡೋಮೀಟರ್ ಫೋಟೋ ಮತ್ತು ವಿಡಿಯೋ ತೆಗೆದು, ಸ್ನ್ಯಾಪ್‌ಚಾಟ್ (Snapchat) ಮೂಲಕ ತನ್ನ ಗೆಳೆಯರೊಂದಿಗೆ ಆ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಸುರಂಗದಿಂದ, ರಾಷ್ಟ್ರೀಯ ಹೆದ್ದಾರಿಗೆ ತಿರುಗೋ ಜಾಗದಲ್ಲಿ ಕಂಟ್ರೋಲ್ ತಪ್ಪಿದ ಕಾರು ಸೀದಾ ಗೋಡೆಗೆ ಗುದ್ದಿದೆ.

ಗುದ್ದಿದ ರಭಸಕ್ಕೆ ಕಾರಿನ ಎಂಜಿನ್ ಕಿತ್ತುಕೊಂಡು ದೂರ ಹೋಗಿ ಬಿದ್ದಿದ್ದು, ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಒಳಗೆ ಸಿಲುಕಿದ್ದ ಸಿಂಗ್ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ಲುಧಿಯಾನದಲ್ಲಿದ್ದ ತನ್ನ ಗರ್ಲ್‌ಫ್ರೆಂಡ್‌ನ ಭೇಟಿಯಾಗಿ ಗುರುಗ್ರಾಮ್‌ಗೆ ಮರಳುತ್ತಿದ್ದಾಗ ಈ ದುರಂತ ನಡೆದಿದೆ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: 8 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಇನ್ನೊಂದೆಡೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದ ಭೀಕರ ಆಕ್ಸಿಡೆಂಟ್‌ಗೆ 8 ಮಂದಿ ಯುವಕರು ಬಲಿಯಾಗಿದ್ದಾರೆ. ಶುಕ್ರವಾರ ತಡರಾತ್ರಿ ಕೈಪಮಂಗಲಂನ ಪನಂಬಿಕುನ್ನು ಬಳಿ, NH-66 ರೋಡ್ ಸೈಡ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಗುದ್ದಿದೆ. ಮೃತಪಟ್ಟ 8 ಮಂದಿಯೂ ತಮಿಳುನಾಡಿನವರಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಗುರುವಾಯೂರಿನಿಂದ ಕೊಡಂಗಲ್ಲೂರು ಕಡೆ ಹೋಗ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ. ಓದಿಕೊಂಡು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಯುವಕರು ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರೋದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್!

ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವ್ಯೂಸ್ ಗಿಟ್ಟಿಸಿಕೊಳ್ಳೋಕೆ ಅಥವಾ ಫ್ರೆಂಡ್ಸ್ ಮುಂದೆ ಶೋ ಆಫ್ ಮಾಡೋಕೆ ಹೋಗಿ ಜೀವ ಕಳೆದುಕೊಳ್ಳೋದು ಎಷ್ಟರಮಟ್ಟಿಗೆ ಸರಿ? ವಾಹನ ಚಲಾಯಿಸುವಾಗ ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ. ಹೀಗಾಗಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡುತ್ತಾ, ಕಡಿಮೆ ವೇಗದಲ್ಲಿ ಜತೆಗೆ ಜಾಗರೂಕತೆಯಿಂದ ವರ್ತಿಸಿ ಎಂದು ಟ್ರಾಫಿಕ್​ ಪೊಲೀಸರು ಮನವಿ ಮಾಡಿದ್ದಾರೆ, (ಎಜೆನ್ಸೀಸ್).