ಭಾರತದ ಒಟ್ಟಾರೆ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜನರ ಜೀವನದ ಬೆನ್ನೆಲುಬಾಗಿರುವ ಮುಂಗಾರು ಮಾರುತಗಳ ಆರಂಭಿಕ ಹೆಜ್ಜೆಗಳು ಈ ಬಾರಿ ತೀವ್ರ ಆತಂಕವನ್ನು ಮೂಡಿಸಿವೆ. ಜೂನ್ ಆರಂಭದಲ್ಲಿ ಆಶಾದಾಯಕವಾಗಿ ಗೋಚರಿಸಿದ್ದ ಮುಂಗಾರು, ತಿಂಗಳ ಮಧ್ಯಭಾಗಕ್ಕೆ ಬರುವಷ್ಟರಲ್ಲಿ ದೇಶದ ಹಲವು ಭಾಗಗಳಲ್ಲಿ ತಾತ್ಕಾಲಿಕವಾಗಿ ಸ್ತಬ್ಧಗೊಂಡಿದೆ. ಇದು ಕೃಷಿ ವಲಯದ ಮೇಲೆ ಕಡುಗತ್ತಲು ಕವಿಯುವಂತೆ ಮಾಡಿದೆ. ಹವಾಮಾನ ವೈಪರೀತ್ಯದ ಇತ್ತೀಚಿನ ವಿದ್ಯಮಾನಗಳು ಕೃಷಿಕರಲ್ಲಿ ಮತ್ತು ಜನಸಾಮಾನ್ಯರಲ್ಲಿ ಭೀತಿಯನ್ನು ಹೆಚ್ಚಿಸಿವೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ಬಾರಿ ಮುಂಗಾರು ಜೂ. 4ರಂದು, ಅಂದರೆ ವಾಡಿಕೆಗಿಂತ 3 ದಿನ ತಡವಾಗಿ ಕೇರಳದ ಕರಾವಳಿಯನ್ನು ಪ್ರವೇಶಿಸಿತು. ಆರಂಭದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಹಲವು ಭಾಗಗಳಿಗೆ ವೇಗವಾಗಿ ಮುನ್ನಡೆದ ಪರಿಣಾಮವಾಗಿ ರೈತರು ಬಿತ್ತನೆಗೆ ಸಜ್ಜಾಗಿದ್ದರು. ಆದರೆ, ಈಗ ಮುಂಗಾರಿನ ವೇಗ ಕ್ಷೀಣಿಸಿದ್ದು, ದೇಶದ ಒಟ್ಟಾರೆ ಮಳೆಯಲ್ಲಿ ಶೇ. 64ರಷ್ಟು ಕೊರತೆ ದಾಖಲಾಗಿದೆ. ಕೃಷಿ ಚಟುವಟಿಕೆಗಳು ಚುರುಕಾಗಬೇಕಿದ್ದ ಈ ನಿರ್ಣಾಯಕ ಸಮಯದಲ್ಲಿ ಮಳೆಯೇ ನಾಪತ್ತೆಯಾಗಿರುವುದು ಗ್ರಾಮೀಣ ಭಾರತವನ್ನು ತಲ್ಲಣಗೊಳಿಸಿದೆ.
ಈ ಬಾರಿಯ ಮುಂಗಾರಿನ ಹಿನ್ನಡೆಗೆ ಎಲ್ ನಿನೊ ವಿದ್ಯಮಾನ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಜಾಗತಿಕ ಹವಾಮಾನದ ಮೇಲಿನ ಈ ನಕಾರಾತ್ಮಕ ಪ್ರಭಾವ ಭಾರತೀಯ ಮುಂಗಾರನ್ನು ಕುಂಠಿತಗೊಳಿಸಿದೆ. ಇದರ ನೇರ ಪರಿಣಾಮ ಬಿತ್ತನೆ ಕಾರ್ಯದ ಮೇಲೆ ಬಿದ್ದಿದ್ದು, ತೇವಾಂಶದ ಕೊರತೆಯಿಂದಾಗಿ ಮುಂಗಾರು ಬೆಳೆಗಳ ಇಳುವರಿ ಕುಸಿಯುವ ಭೀತಿ ಎದುರಾಗಿದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಕುಟುಂಬಗಳಿಗೆ ಇದು ಬದುಕಿನ ಪ್ರಶ್ನೆಯಾಗಿದೆ.
ಮುಂಗಾರು ವೈಫಲ್ಯದ ದೀರ್ಘಾವಧಿ ಪರಿಣಾಮಗಳು ಇಡೀ ದೇಶದ ಮೇಲೆ ಆಗುತ್ತವೆ. ಕೃಷಿ ಉತ್ಪಾದನೆ ಕುಂಠಿತಗೊಂಡರೆ ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳು, ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಎಲ್ಲರ ಆರ್ಥಿಕ ಲೆಕ್ಕಾಚಾರವನ್ನು ತಲೆಕೆಳಗಾಗಿಸುತ್ತದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸಿ, ವಲಸೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.
ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿ ಮುಂಗಾರು ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಿದ್ದರೂ, ಸದ್ಯದ ಪರಿಸ್ಥಿತಿ ಗಮನಿಸಿದಾಗ ಸರ್ಕಾರ ಮತ್ತು ಕೃಷಿ ವಲಯ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ. ಮಳೆಯನ್ನೇ ನೆಚ್ಚಿ ಕೂರದೆ, ಮುನ್ನೆಚ್ಚರಿಕೆ ಕ್ರಮವಾಗಿ ಪರ್ಯಾಯ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ಕಡಿಮೆ ನೀರು ಸಾಕಾಗುವ ಮತ್ತು ಅಲ್ಪಾವಧಿಯ ಪರ್ಯಾಯ ಬೆಳೆಗಳ ಬಿತ್ತನೆಗೆ ಸರ್ಕಾರ ಉತ್ತೇಜನ ನೀಡಬೇಕು. ಉಚಿತವಾಗಿ ಬೀಜಗಳನ್ನು ವಿತರಿಸಬೇಕು. ಲಭ್ಯವಿರುವ ಜಲಮೂಲಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು. ಹನಿ ನೀರಾವರಿ ಪದ್ಧತಿಗೆ ಆದ್ಯತೆ ನೀಡಬೇಕು. ಕೃಷಿ ಇಲಾಖೆ ಮೂಲಕ ಹಳ್ಳಿಹಳ್ಳಿಗಳಲ್ಲಿ ಹವಾಮಾನದ ನಿಖರ ಮಾಹಿತಿ ತಲುಪಿಸಬೇಕು. ಬೆಳೆ ವಿಮೆ ಪ್ರಕ್ರಿಯೆ ಸರಳಗೊಳಿಸಬೇಕು. ಪ್ರಕೃತಿಯ ಏರುಪೇರುಗಳನ್ನು ನಿಯಂತ್ರಿಸುವುದು ಅಸಾಧ್ಯವಾದರೂ, ವೈಜ್ಞಾನಿಕ ಸಿದ್ಧತೆ ಮತ್ತು ದೂರದೃಷ್ಟಿಯ ಯೋಜನೆಗಳ ಮೂಲಕ ಅದರ ತೀವ್ರತೆಯನ್ನು ಖಂಡಿತವಾಗಿಯೂ ತಗ್ಗಿಸಬಹುದು. ವಿಳಂಬ ನೀತಿಯನ್ನು ಬಿಟ್ಟು, ಈಗಿನಿಂದಲೇ ಬರ ಪರಿಸ್ಥಿತಿಯನ್ನು ಎದುರಿಸುವ ಮುನ್ನೆಚ್ಚರಿಕೆ ಕ್ರಮಗಳಿಗೆ ಸರ್ಕಾರಗಳು ಮುಂದಾಗಬೇಕಿದೆ.