Pratibha Patil | ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್
ದೆಹಲಿ: ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ (Pratibha Patil) ಅವರು ಏಪ್ರಿಲ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ನಾರಿ ಶಕ್ತಿ ವಂದನ ಅಧಿನಿಯಮ್ (ಮಹಿಳಾ ಮೀಸಲಾತಿ ಕಾಯ್ದೆ) ಕುರಿತು ತಮ್ಮ ಬೆಂಬಲ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಐತಿಹಾಸಿಕ ಶಾಸನವು ಭಾರತದ ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಮೂಲಕ ದೇಶದ ಸಾಂವಿಧಾನಿಕ ಚೌಕಟ್ಟನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರತಿಭಾ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲೇನಿದೆ..?
ತಮ್ಮ ಪತ್ರದಲ್ಲಿ ಪ್ರತಿಭಾ ಪಾಟೀಲ್ ಅವರು, ನಾರಿ ಶಕ್ತಿ ವಂದನ ಅಧಿನಿಯಮದ ಐತಿಹಾಸಿಕ ಅನುಷ್ಠಾನಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಹೆಗ್ಗುರುತು ಸಾಂವಿಧಾನಿಕ ತಿದ್ದುಪಡಿಯು ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಭಾರತದ ಪ್ರಜಾಪ್ರಭುತ್ವ ಚೌಕಟ್ಟನ್ನು ಬಲಪಡಿಸುವಲ್ಲಿ ಒಂದು ಪರಿವರ್ತನಾತ್ಮಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ತಾವು ಯಾವಾಗಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಅವರ ಸಬಲೀಕರಣದ ಪರವಾಗಿ ಧ್ವನಿ ಎತ್ತಿರುವುದನ್ನು ಸ್ಮರಿಸಿದ ಅವರು, ಈ ಮಹತ್ವದ ಪ್ರಯತ್ನಕ್ಕೆ ಶ್ರಮಿಸಿದ ಎಲ್ಲಾ ಮಿತ್ರರನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಚುರುಕುಗೊಳಿಸಿದ್ದು, ಕಾನೂನು ರಚನೆ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಒಂದು ಪ್ರಮುಖ ಸುಧಾರಣೆಯಾಗಿದೆ ಎಂದು ಬಣ್ಣಿಸಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಪತ್ರ ಬರೆದು, ಬಹುನಿರೀಕ್ಷಿತ ಕ್ರಮದ ಬಗ್ಗೆ ತ್ವರಿತವಾಗಿ ಕಾರ್ಯಪ್ರವೃತ್ತರಾಗುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಕಾನೂನು ರಚನಾ ಪ್ರಕ್ರಿಯೆಯಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯ ಮಹತ್ವವನ್ನು ಪ್ರಧಾನಿ ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದು, ಮುಂಬರುವ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ರಾಜಕೀಯ ಪಕ್ಷಗಳ ಸದನ ನಾಯಕರಿಗೆ ಪತ್ರ ಬರೆದಿದ್ದಾರೆ. ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ಸಹಕರಿಸುವಂತೆ ವಿನಂತಿಸಿದ್ದಾರೆ.
ಸರ್ಕಾರದ ಈ ನಿರ್ಧಾರವು ಮುಂಬರುವ ಅಧಿವೇಶನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದು, ಸಾಂವಿಧಾನಿಕ ತಿದ್ದುಪಡಿಯನ್ನು ಮುಂದಕ್ಕೆ ತರುವತ್ತ ಸರ್ಕಾರ ಗಮನಹರಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 16 ರಿಂದ 18 ರವರೆಗೆ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ. ಸೆಪ್ಟೆಂಬರ್ 2023 ರಲ್ಲಿ ಅಂಗೀಕರಿಸಲ್ಪಟ್ಟಿರುವ ಈ ಮಹಿಳಾ ಮೀಸಲಾತಿ ಕಾಯ್ದೆಯು ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ಗುರಿಯನ್ನು ಹೊಂದಿದ್ದು, ಇದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಇಟ್ಟಿರುವ ಅತ್ಯಂತ ದೊಡ್ಡ ಹೆಜ್ಜೆಯಾಗಿದೆ(ಏಜೆನ್ಸೀಸ್).