Prateek Yadav 
ದೇಶ

ನಾನು ಈ ಸ್ವಾರ್ಥಿ ಮಹಿಳೆಯಿಂದ ವಿಚ್ಛೇದನ ಪಡೆಯಲಿದ್ದೇನೆ! ಪತ್ನಿ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತೀಕ್ ಯಾದವ್.. Prateek Yadav

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ( Prateek Yadav ) ಯಾದವ್, ತಮ್ಮ ಪತ್ನಿ ಹಾಗೂ ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ.
ಪ್ರತೀಕ್ ಯಾದವ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಪತ್ನಿ ಅಪರ್ಣಾ ಯಾದವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಾನು ಆದಷ್ಟು ಬೇಗ ಈ ಸ್ವಾರ್ಥಿ ಮಹಿಳೆಯಿಂದ ವಿಚ್ಛೇದನ ಪಡೆಯಲಿದ್ದೇನೆ.
ಆಕೆ ನನ್ನ ಕುಟುಂಬದ ಸಂಬಂಧಗಳನ್ನು ಹಾಳುಮಾಡಿದ್ದಾಳೆ. ಆಕೆಗೆ ಕೇವಲ ಪ್ರಸಿದ್ಧಿ ಮತ್ತು ಪ್ರಭಾವಶಾಲಿಯಾಗುವುದು ಮಾತ್ರ ಬೇಕಿದೆ.ಪ್ರಸ್ತುತ, ನಾನು ಮಾನಸಿಕವಾಗಿ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇನೆ ಮತ್ತು ಆಕೆ ಅದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಆಕೆಗೆ ತನ್ನ ಬಗ್ಗೆ ಮಾತ್ರ ಕಾಳಜಿ ಇರುವುದು. ಇಂತಹ ಕೆಟ್ಟ ಗುಣದ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ, ಅಂತಹವಳನ್ನು ಮದುವೆಯಾಗಿದ್ದು ನನ್ನ ದುರಾದೃಷ್ಟ ಎಂದು ಬರೆದುಕೊಂಡು ನಾನು ವಿಚ್ಛೇದನ ಪಡೆಯಲಿದ್ದೇನೆ ಎಂದು ಘೋಷಿಸಿದ್ದಾರೆ.
ಇನ್ನೊಂದೆಡೆ, ಅಪರ್ಣಾ ಯಾದವ್ ಅವರ ಸಹೋದರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರತೀಕ್ ಯಾದವ್ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪೋಸ್ಟ್ ನಿಜವೋ ಅಥವಾ ಖಾತೆ ಹ್ಯಾಕ್ ಆಗಿದೆಯೋ ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.
ಪ್ರತೀಕ್ ಯಾದವ್ ಮತ್ತು ಅಪರ್ಣಾ ಯಾದವ್ ಅವರ ವಿವಾಹ 2012ರಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಅಮಿತಾಭ್ ಬಚ್ಚನ್ ಸೇರಿದಂತೆ ದೇಶದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಪ್ರತೀಕ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ ಹಾಗೂ ಅಖಿಲೇಶ್ ಯಾದವ್ ಅವರ ಸಹೋದರರಾಗಿದ್ದಾರೆ. ಅಪರ್ಣಾ ಯಾದವ್ ಅವರು ಕಳೆದ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.