ನವದೆಹಲಿ: ಬಿಹಾರದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಸ್ವಕ್ಷೇತ್ರವಾದ ಬಂಕಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ 30 ವರ್ಷಗಳ ಬಿಜೆಪಿ ಅಧಿಪತ್ಯವನ್ನು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್(Prashant Kishor) ಧೂಳಿಪಟ ಮಾಡಿದ್ದು, ಮೊದಲ ಚುನಾವಣೆ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿಯ ನೀರಜ್ ಕುಮಾರ್ ಅವರನ್ನು 18,953 ಮತಗಳಿಂದ ಸೋಲಿಸುವ ಮೂಲಕ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸೋಮವಾರ(ಆ. 03) ಭಾರಿ ಗೆಲುವು ಸಾಧಿಸಿದ್ದು, ತಮ್ಮ ಪಕ್ಷಕ್ಕೆ ಮೊದಲ ಚುನಾವಣಾ ಗೆಲುವು ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿತ್ತು.
ಪ್ರಶಾಂತ್ ಕಿಶೋರ್ ಅವರ ಈ ಗೆಲುವು 1995ರಿಂದ ಬಿಹಾರದಲ್ಲಿ ಬಿಜೆಪಿಯ ಪ್ರಬಲ ಭದ್ರಕೋಟೆಗಳಲ್ಲಿ ಒಂದಾದ ಬಂಕಿಪುರ ಕ್ಷೇತ್ರದ ಮೇಲಿನ 35 ವರ್ಷಗಳ ನಿರಂತರ ಹಿಡಿತವನ್ನು ಕೊನೆಗೊಳಿಸಿದೆ. ಮತ್ತು ಪ್ರಶಾಂತ್ ಅವರ ಮುಂಬರುವ ರಾಜಕೀಯಕ್ಕೆ ದಾರಿ ಎಂದೇ ಪರಿಗಣಿಸಲಾಗಿದೆ.
ಬಂಕಿಪುರ ಕ್ಷೇತ್ರವನ್ನು ಪಶ್ಚಿಮ ಪಾಟ್ನಾ ಎಂದು ಕರೆಯಲಾಗುತ್ತಿತ್ತು. 1995ರಿಂದ ನಿರಂತರವಾಗಿ ಈ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ. ಏಪ್ರಿಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಉಪಚುನಾವಣೆ ನಡೆದಿದೆ. 2025ರ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ತಮ್ಮದೇ ಗೆಲುವು ಎಂದ ಪ್ರಶಾಂತ್ ಕಿಶೋರ್
ಇನ್ನೂ ಎರಡು ಸುತ್ತಿನ ಮತಎಣಿಕೆ ನಡುವೆ ತಮ್ಮದೇ ಗೆಲುವು ಎಂದು ಹೇಳಿರುವ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಈ ಫಲಿತಾಂಶವು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಸಮರ್ಥ ಮತ್ತು ನೇರ ವ್ಯಕ್ತಿಯನ್ನು ನೇಮಿಸಲು ಭಾರತೀಯ ಜನತಾ ಪಕ್ಷದ ನಾಯಕತ್ವಕ್ಕೆ ನೀಡಿದ ಸಂದೇಶವಾಗಿದೆ ಎಂದಿದ್ದಾರೆ.
ಈ ಚುನಾವಣೆಯು ಸ್ಥಳೀಯ ಶಾಸಕರನ್ನು ಆಯ್ಕೆ ಮಾಡುವುದಕ್ಕಿಂತ ಹೆಚ್ಚಿನದಾಗಿದೆ. ಬಿಹಾರದ ಜನರು ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ. ಅಪರಾಧ ಹಿನ್ನೆಲೆ ಅಥವಾ ಪ್ರಶ್ನಾರ್ಹ ಖ್ಯಾತಿಯನ್ನು ಹೊಂದಿರುವ ವ್ಯಕ್ತಿಗಳು ರಾಜ್ಯವನ್ನು ಮುನ್ನಡೆಸಬೇಕೆಂದು ಅವರು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಜು. 31ರಂದು ಗುಜರಾತ್ ಮಂಜಲ್ಪುರ, ಮಧ್ಯಪ್ರದೇಶದ ದಾಟಿಯಾ ಹಾಗೂ ಬಂಕಿಪುರದಲ್ಲಿ ಉಪಾಚುನಾಣೆ ನಡೆದಿತ್ತು. ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್ ಗೆದ್ದರೆ, ದಾಟಿಯಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಂದಿದ್ದು, ಮಂಜಲ್ಪುರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ 30 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ದಾಟಿಯಾದಲ್ಲಿ ಕಾಂಗ್ರೆಸ್ ಗೆಲುವು
ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಅವರು ಬಿಜೆಪಿ ಅಭ್ಯರ್ಥಿಯನ್ನು 6,016 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಿಂಗ್ ಅವರು 66,757 ಮತಗಳನ್ನು ಪಡೆದ್ರೆ, ಬಿಜೆಪಿ ಅಭ್ಯರ್ಥಿ ಅಶುತೋಷ್ ತಿವಾರಿ 60,741 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
ಮಂಜಲ್ಪುರದಲ್ಲಿ ಬಿಜೆಪಿ ಕಮಾಲ್
ಗುಜರಾತ್ನ ಮಂಜಲ್ಪುರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಯೋಗೇಶ್‌ಭಾಯ್ ನರಂದಾಸ್ ಪಟೇಲ್ ನಿಧನ ಹಿನ್ನೆಲೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಸತೇಂದ್ರಭಾಯಿ ಪಟೇಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಎದುರು 30630 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ (ಏಜೆನ್ಸೀಸ್).