Prashant Kishor Asset> ಪ್ರಶಾಂತ್ ಕಿಶೋರ್‌ಗಿಂತ ಪತ್ನಿಯೇ ಶ್ರೀಮಂತೆ!. 
ದೇಶ

ಪ್ರಶಾಂತ್ ಕಿಶೋರ್‌ಗಿಂತ ಪತ್ನಿಯೇ ಶ್ರೀಮಂತೆ!...ಅಫಿಡವಿಟ್‌ನಿಂದ ಬೆಳಕಿಗೆ ಬಂತು ಪಿಕೆ ದಂಪತಿಯ 200 ಕೋಟಿ ಆಸ್ತಿ ರಹಸ್ಯ | Prashant Kishor Asset

ಪಟನಾ: ಬಿಹಾರದ ಬಂಕಿಪುರ ವಿಧಾನಸಭೆ ಉಪಚುನಾವಣೆಯ ಅಖಾಡಕ್ಕಿಳಿದಿರುವ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಒಟ್ಟು 96 ಕೋಟಿ ರೂಪಾಯಿ ಮೌಲ್ಯದ ಆಸ್ತಿ (Prashant Kishor Asset) ಹೊಂದಿರುವುದಾಗಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಚುನಾವಣಾ ಅಧಿಕಾರಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಪ್ರಶಾಂತ್ ಕಿಶೋರ್ 22.19 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 73.87 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇನ್ನು ಅಸ್ಸಾಂ ಮೂಲದ ವೈದ್ಯೆಯಾಗಿರುವ ಅವರ ಪತ್ನಿ ಜಾಹ್ನವಿ ದಾಸ್ ಅವರು 89.51 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 12.42 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯ ಒಡೆತನವನ್ನು ಹೊಂದಿದ್ದಾರೆ.
ಚುನಾವಣಾ ತಂತ್ರಗಾರನಿಂದ ರಾಜಕಾರಣಿಯಾಗಿ ಬದಲಾಗಿರುವ ಪ್ರಶಾಂತ್ ಕಿಶೋರ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತೆರವುಗೊಳಿಸಿದ್ದ ಬಂಕಿಪುರ ಕ್ಷೇತ್ರದಿಂದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅಭಿಷೇಕ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ, ಬಿಜೆಪಿ ನೀರಜ್ ಕುಮಾರ್ ಸಿನ್ಹಾರನ್ನು ಕಣಕ್ಕಿಳಿಸಿದೆ.

ಆಸ್ತಿ ವಿವರ ಮತ್ತು ಸಾಲಗಳು

ಪ್ರಶಾಂತ್ ಕಿಶೋರ್ ಅವರ ಅಫಿಡವಿಟ್ ಪ್ರಕಾರ ಪ್ರಸ್ತುತ 5.77 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಹೊಂದಿದ್ದಾರೆ. ಅವರ ಪತ್ನಿ ಗುವಾಹಟಿಯಲ್ಲಿ ಎರಡು ಫ್ಲ್ಯಾಟ್‌ಗಳು ಮತ್ತು ಒಂದು ಬಂಗಲೆಯಲ್ಲಿ ಮೂರನೇ ಒಂದು ಭಾಗದಷ್ಟು (1/3) ಪಾಲು ಹಾಗೂ ನೋಯ್ಡಾದಲ್ಲಿ ಹೆಚ್ಚುವರಿ ಆಸ್ತಿಯನ್ನು ಹೊಂದಿದ್ದಾರೆ. ಕಿಶೋರ್ ಗಾಜಿಯಾಬಾದ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಎರಡು ಫ್ಲ್ಯಾಟ್‌ಗಳು, ಇತರ ಎರಡು ಫ್ಲ್ಯಾಟ್‌ಗಳಲ್ಲಿ ಶೇಕಡಾ 50 ರಷ್ಟು ಪಾಲು, ಪಾಟ್ನಾದ ಪಾಟಲಿಪುತ್ರ ಕಾಲೋನಿ ಮತ್ತು ದೆಹಲಿಯ ವಸಂತ್ ವಿಹಾರದಲ್ಲಿ ಪ್ಲಾಟ್‌ಗಳು ಹಾಗೂ ಬಕ್ಸಾರ್ ಮತ್ತು ತಮ್ಮ ಪೂರ್ವಜರ ಗ್ರಾಮದಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ.
ಇದಲ್ಲದೆ, ಕಿಶೋರ್ ವೇಧಾ ವೆಂಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ಕಂಪನಿಯು 2023-24ರಲ್ಲಿ ಜನ್ ಸುರಾಜ್ ಫೌಂಡೇಶನ್‌ಗೆ 50 ಲಕ್ಷ ರೂ. 2024-25ರಲ್ಲಿ 85 ಕೋಟಿ ರೂ. ದೇಣಿಗೆ ನೀಡಿದೆ.

ಇದು ರಾಜಕೀಯ ಬದಲಾವಣೆಯ ಕರೆ ಎಂದಿದ್ದ ಪ್ರಶಾಂತ್​

ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ್ದ ಪ್ರಶಾಂತ್​ ಕಿಶೋರ್​, ಇದು ಕೇವಲ ನನ್ನ ನಾಮಪತ್ರ ಸಲ್ಲಿಕೆಯಲ್ಲ, ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ತಮ್ಮ ಅಧಿಕಾರ ಬಿಟ್ಟು ತೊಲಗಬೇಕಾದ ರಾಜಕೀಯ ಬದಲಾವಣೆಯ ಕರೆ ಎಂದು ಹೇಳಿದ್ದರು. ತಮ್ಮ ನಾಮಪತ್ರ ಸಲ್ಲಿಕೆಗೂ ಮುನ್ನ ಕಿಶೋರ್ ಸೋನೆಪುರದ ಬಾಬಾ ಹರಿಹರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅಪಾರ ಸಂಖ್ಯೆಯ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಪಟನಾದ ಸಿನ್ಹಾ ಲೈಬ್ರರಿ ಬಳಿಯ ಸ್ಕೌಟ್ ಗೈಡ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಪ್ರಶಾಂತ್​ ಕಿಶೋರ್​ ರಾಜಕೀಯ ಪಯಣ

2021 ಮೇ 2 ರಂದು ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಬಂದ ನಂತರ, ಕಿಶೋರ್ ರಾಜಕೀಯ ಸಲಹೆಗಾರ ಹುದ್ದೆಗೆ ನಿವೃತ್ತಿ ಘೋಷಿಸಿ ಬಿಹಾರಕ್ಕೆ ಮರಳಿದರು. 2022 ರ ಅಕ್ಟೋಬರ್ 2 ರಂದು ಜನ್ ಸುರಾಜ್ ಅಭಿಯಾನವನ್ನು ಪ್ರಾರಂಭಿಸಿ ಪಾದಯಾತ್ರೆ ಕೈಗೊಂಡ ಅವರು, ಇನ್ಮುಂದೆ ಯಾವುದೇ ಹೊರಗಿನ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರ ರೂಪಿಸುವುದಿಲ್ಲ ಎಂದು ಘೋಷಿಸಿದರು. ಕಳೆದ ವರ್ಷ ನಡೆದ ಬಿಹಾರ ಚುನಾವಣೆಯಲ್ಲಿ ಜನ್ ಸುರಾಜ್ ತನ್ನ ಅಧಿಕೃತ ರಾಜಕೀಯ ಪಾದಾರ್ಪಣೆ ಮಾಡಿತಾದರೂ, ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಚುನಾವಣೆ ಕಣದಿಂದ ದೂರ ಉಳಿದಿದ್ದ 49 ವರ್ಷದ ಕಿಶೋರ್, ಈ ಉಪಚುನಾವಣೆಯ ಮೂಲಕ ಸ್ವತಃ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಕಾನೂನು ಪ್ರಕರಣಗಳು ಮತ್ತು ಶೈಕ್ಷಣಿಕ ಹಿನ್ನೆಲೆ

ಅಫಿಡವಿಟ್‌ನಲ್ಲಿ ಪ್ರಶಾಂತ್ ಕಿಶೋರ್ ವಿರುದ್ಧ ಮಾನನಷ್ಟ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ವಂಚನೆ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ಯಾವುದೇ ಪ್ರಕರಣಗಳಲ್ಲೂ ಇದುವರೆಗೆ ಆರೋಪ ಹೊರಿಸಲಾಗಿಲ್ಲ. ಕಿಶೋರ್ ಅವರು ಲಖನೌ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದ ನಂತರ, ಹೈದರಾಬಾದ್‌ನ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಿಂದ ಮಾಸ್ಟರ್ ಆಫ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ್ದಾರೆ. ಜೊತೆಗೆ ಅವರು ಫ್ರೆಂಚ್ ಭಾಷೆಯಲ್ಲಿ ಸರ್ಟಿಫಿಕೇಟ್​ ಕೋರ್ಸ್ ಸಹ ಪೂರ್ಣಗೊಳಿಸಿದ್ದಾರೆ(ಏಜೆನ್ಸೀಸ್​).