ಪಟನಾ: ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಾಘೋಪುರ-ಬಿದುಪುರ ಸೇತುವೆಯ ನಿರ್ಮಾಣದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲ್ಲಬೇಕು, ಆದರೆ ಈ ಸೇತುವೆಯ ಕ್ರೆಡಿಟ್ ಪಡೆಯಲು ಬಿಜೆಪಿ ಮತ್ತು ಆರ್ಜೆಡಿ ಪಕ್ಷಗಳು ಅನಗತ್ಯ ಪೈಪೋಟಿ ನಡೆಸುತ್ತಿವೆ ಎಂದು ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ವೈಶಾಲಿ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಈ ಸೇತುವೆಗೆ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರನ್ನೇ ಇಡಲಾಗಿದ್ದು ('ನಿತೀಶ್ ಸೇತು'), ಇದನ್ನು ಆರ್ಜೆಡಿ ನಾಯಕರು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದಾರೆ.
ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಆರ್ಜೆಡಿ ಆಗಾಗ ಇಂತಹ ರಾಜಕೀಯ ಮಾಡುತ್ತಲೇ ಇರುತ್ತದೆ, ಅದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಮೋದಿ ಅವರ ಹೆಸರನ್ನು ರೈಲುಗಳಿಗೆ ಇಡಬಹುದಾದರೆ, ನಿತೀಶ್ ಕುಮಾರ್ ಅವರ ಹೆಸರನ್ನು ಸೇತುವೆಗೆ ಇಡುವುದರಲ್ಲಿ ನನಗೆ ಯಾವುದೇ ತೊಂದರೆ ಕಾಣುತ್ತಿಲ್ಲ. ಬಿಹಾರದಲ್ಲಿ ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಈ ಯೋಜನೆಯ ಕಲ್ಪನೆ ಹುಟ್ಟಿದ್ದು ನಿತೀಶ್ ಕುಮಾರ್ ಅವರಿಂದ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಆರ್ಜೆಡಿ ಎರಡೂ ಪಕ್ಷಗಳು ಅನಗತ್ಯವಾಗಿ ಕ್ರೆಡಿಟ್ ಪಡೆಯಲು ಯತ್ನಿಸುತ್ತಿವೆ ಪಿಕೆ ಆರೋಪಿಸಿದ್ದಾರೆ.
2014ರ ಲೋಕಸಭೆ ಚುನಾವಣೆ ಮತ್ತು 2015ರ ಬಿಹಾರ ವಿಧಾನಸಭೆ ಚುನಾವಣೆಯ ನಡುವಿನ ಅವಧಿಯಲ್ಲಿ, ನಿತೀಶ್ ಕುಮಾರ್ ಅವರು ಅಲ್ಪಮತದ ಸರ್ಕಾರ ನಡೆಸುತ್ತಿದ್ದಾಗ ಈ ಸೇತುವೆಯ ಯೋಜನೆ ರೂಪುಗೊಂಡಿತು ಎಂದು ಕಿಶೋರ್ ವಿವರಿಸಿದರು.
ಬಿಹಾರವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ ಕಿಶೋರ್, ತಲಾ ಆದಾಯ, ರಾಷ್ಟ್ರೀಯ ಜಿಡಿಪಿಗೆ ಕೊಡುಗೆ, ಪ್ರವಾಹ ನಿರ್ವಹಣೆ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಪ್ರಮುಖ ಮಾನದಂಡಗಳಲ್ಲಿ ಬಿಹಾರ ಇತರ ರಾಜ್ಯಗಳಿಗಿಂತ ಹಿಂದುಳಿದಿದೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ 12 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದರೂ ತಲಾ ಆದಾಯ, ಜಿಡಿಪಿ, ಶಿಕ್ಷಣ, ಉದ್ಯೋಗ ಮುಂತಾದ ವಿಚಾರಗಳಲ್ಲಿ ಬಿಹಾರ ಇತರ ರಾಜ್ಯಗಳಿಗಿಂತ ಏಕೆ ಮತ್ತಷ್ಟು ಹಿಂದುಳಿಯುತ್ತಿದೆ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಬಂಕಿಪುರ ಶಾಸಕರೂ ಆಗಿರುವ ಕಿಶೋರ್ ಆಗ್ರಹಿಸಿದರು. ವಲಸೆ ಮತ್ತು ಪದೇ ಪದೇ ಎದುರಾಗುವ ಪ್ರವಾಹದಂತಹ ಸಮಸ್ಯೆಗಳಿಂದ ಬಿಹಾರಕ್ಕೆ ಯಾವಾಗ ಮುಕ್ತಿ ಸಿಗುತ್ತದೆ ಎಂದೂ ಅವರು ಪ್ರಶ್ನಿಸಿದರು.
ಕೇವಲ ಸೇತುವೆಗೆ ನಿತೀಶ್ ಕುಮಾರ್ ಹೆಸರಿಡುವ ಬದಲು, ಅವರು ಸಾತ್ ನಿಶ್ಚಯ ಯೋಜನೆಯಡಿ ಆರಂಭಿಸಿದ್ದ ಕಾರ್ಯಕ್ರಮಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದರೆ ಅದೇ ಕುಮಾರ್ ಅವರಿಗೆ ನೀಡುವ ದೊಡ್ಡ ಗೌರವವಾಗುತ್ತಿತ್ತು ಎಂದು ಕಿಶೋರ್ ಅಭಿಪ್ರಾಯಪಟ್ಟರು.
ಸೇತುವೆ ಉದ್ಘಾಟನೆಯ ಪೋಸ್ಟರ್ಗಳಲ್ಲಿ ನಿತೀಶ್ ಕುಮಾರ್ ಅವರಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಿಶೋರ್, ಬಿಜೆಪಿಯು ನಿತೀಶ್ ಕುಮಾರ್ ಅವರ ಪಕ್ಷವನ್ನು ರಾಜಕೀಯವಾಗಿ ನಿಧಾನವಾಗಿ ನುಂಗಿಹಾಕುತ್ತಿದೆ ಎಂದು ದೂರಿದರು. ಇಂದು ಜೆಡಿಯು ಪಕ್ಷವನ್ನು ಅಮಿತ್ ಷಾ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಬಿಜೆಪಿ ಧ್ವಜವನ್ನು ಪ್ರಚಾರ ಮಾಡಲು ಮತ್ತು ಮೋದಿ ಮುಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸುತ್ತಾರೆ. ಅವರು ನಿತೀಶ್ ಕುಮಾರ್ ಅವರನ್ನು ಏಕೆ ಪ್ರಚಾರ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಜೆಡಿಯು ಮತ್ತು ನಿತೀಶ್ ಕುಮಾರ್ ಅಪ್ರಸ್ತುತವಾಗುತ್ತಿದ್ದಾರೆ ಎಂದು ಆರೋಪಿಸಿದ ಜನ್ ಸುರಾಜ್ ನಾಯಕ, ಬಿಜೆಪಿಗೆ ಸರಿಸಮಾನವಾಗಿ ಜೆಡಿಯು ಶಾಸಕರನ್ನು ಹೊಂದಿದ್ದರೂ, ಸರ್ಕಾರದ ಕಾರ್ಯವೈಖರಿ, ಪ್ರಚಾರ ಅಥವಾ ರಾಜಕೀಯ ಸಂವಹನದಲ್ಲಿ ಕುಮಾರ್ ಆಗಲಿ ಅವರ ಪಕ್ಷವಾಗಲಿ ಯಾವುದೇ ಪಾತ್ರ ಹೊಂದಿರುವಂತೆ ಕಾಣುತ್ತಿಲ್ಲ. ಛತ್ ಹಬ್ಬದ ಸಂದರ್ಭದಲ್ಲೂ ಮೋದಿ ಮತ್ತು ಸಾಮ್ರಾಟ್ ಚೌಧರಿ ಅವರ ಪೋಸ್ಟರ್ಗಳಿದ್ದವು, ಆದರೆ ಕುಮಾರ್ ಅವರ ಪೋಸ್ಟರ್ ಇರಲಿಲ್ಲ ಎಂದು ಪಿಕೆ ಹೇಳಿದರು(ಏಜೆನ್ಸೀಸ್).