ಪ್ರಶಾಂತ್ ಕಿಶೋರ್ ಸುದ್ದಿಗೋಷ್ಠಿ 
ದೇಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರ ಬಂಕಿಪುರದ ಉಪಚುನಾವಣೆಯಲ್ಲಿ ಸ್ಪರ್ಧಿಸ್ತೇನೆ: ಪ್ರಶಾಂತ್ ಕಿಶೋರ್ ಘೋಷಣೆ | Prashant Kishor

ನವದೆಹಲಿ: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಭಾನುವಾರ (ಜು. 05) ಮುಂಬರುವ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಇದು ಅವರ ಚೊಚ್ಚಲ ಚುನಾವಣೆ ಪ್ರವೇಶವಾಗಿದೆ.
ಪಾಟ್ನಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಕಿಪುರದ ಜನರು ಬಿಹಾರದಲ್ಲಿ ಅತ್ಯಂತ ಶ್ರೀಮಂತರು ಮತ್ತು ಹೆಚ್ಚು ವಿದ್ಯಾವಂತರು. ಅವರು ಅತ್ಯುತ್ತಮರಿಗೆ ಮತ ಹಾಕಲಿ. ನನ್ನ ಮೇಲೆ ನಂಬಿಕೆ ಇಡಬಹುದೆಂದು ಭಾವಿಸಿದರೆ, ಮತ ಹಾಕುವಂತೆ ನಾನು ಒತ್ತಾಯಿಸುತ್ತೇನೆ. ನನ್ನ ಪಕ್ಷದ ಏಕೈಕ ಶಾಸಕನಾಗಿದ್ದರೂ, ವಿಧಾನಸಭೆಯಲ್ಲಿ ಉಳಿದಿರುವ 242 ಶಾಸಕರಿಗಿಂತ ನಾನು ಮೇಲುಗೈ ಸಾಧಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಜನರ ಆದೇಶವಿಲ್ಲದೆ ಮುಖ್ಯಮಂತ್ರಿಯಾದರು. ಈ ಉಪಚುನಾವಣೆಯನ್ನು ರಾಜ್ಯದಲ್ಲಿರುವ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ ಸರ್ಕಾರದ ಜನಪ್ರಿಯತೆಯ ಮೇಲಿನ ಜನಮತ ಸಂಗ್ರಹವಾಗಿದೆ. ಬಿಜೆಪಿ ಗೆದ್ದರೆ, ಅವರು ಸಾರ್ವಜನಿಕ ಬೆಂಬಲವನ್ನು ಪಡೆದಿದ್ದಾರೆ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ನಾವು ಗೆದ್ದರೆ, ಗೋಡೆಯ ಮೇಲಿನ ಬರಹವನ್ನು ಓದುವುದು ಅವರ ಕರ್ತವ್ಯ ಎಂದಿದ್ದಾರೆ.
ಬಂಕಿಪುರ ಕ್ಷೇತ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಸ್ವಕ್ಷೇತ್ರವಾಗಿದೆ. ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಜ್ಯಸಭೆಗೆ ನೇಮಕವಾದ ಹಿನ್ನೆಲೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜುಲೈ 13 ರವರೆಗೆ ನಡೆಯಲಿದೆ. ಜುಲೈ 30ರಂದು ಮತದಾನ ನಡೆಯಲಿದ್ದು, ಆಗಸ್ಟ್ 3 ರಂದು ಎಣಿಕೆ ನಡೆಯಲಿದೆ. 1990ರ ದಶಕದಿಂದಲೂ ಬಂಕಿಪುರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿದೆ. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರೋಧ ಮೈತ್ರಿಕೂಟವು ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಎನ್ನಲಾಗಿದೆ (ಏಜೆನ್ಸೀಸ್).