Wayanad | ವಯನಾಡಿನಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧ ಪೋಸ್ಟರ್‌ ಸಮರ 
ದೇಶ

ವಯನಾಡ್ ಮುಂದಿನ ಅಮೇಥಿಯಾಗಲಿದೆ!... ಪ್ರಿಯಾಂಕಾ, ರಾಹುಲ್ ಗಾಂಧಿ ವಿರುದ್ಧ ಪೋಸ್ಟರ್ ಸಮರ; ಪ್ರಕರಣ ದಾಖಲು | Wayanad

Wayanad: ಕೇರಳದ ವಯನಾಡಿನಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗೋಡೆಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಟಿ. ಸಿದ್ದೀಕ್ ನೀಡಿದ ದೂರಿನ ಮೇರೆಗೆ ಕಲ್ಪೆಟ್ಟ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಮುಂದಿನ ಕೇರಳ ಮುಖ್ಯಮಂತ್ರಿಯ ಆಯ್ಕೆಯ ಕುರಿತು ಅನಿಶ್ಚಿತತೆ ಮೂಡಿದ್ದ ಸಂದರ್ಭದಲ್ಲಿ, ಮೇ 13 ರಂದು ವಯನಾಡ್ ಡಿಸಿಸಿ (DCC) ಕಚೇರಿಯ ಕಾಂಪೌಂಡ್ ಗೋಡೆ ಮತ್ತು ಹತ್ತಿರದ ಜಾಗಗಳಲ್ಲಿ ಪಕ್ಷದ ಈ ಮೂವರು ಪ್ರಮುಖ ನಾಯಕರನ್ನು ನಿಂದಿಸುವ ಪೋಸ್ಟರ್‌ಗಳು ಪತ್ತೆಯಾಗಿದ್ದವು.
ಪ್ರಸ್ತುತ ವಯನಾಡ್ ಸಂಸದೆಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಮುಂದಿನ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂಬ ಬೆದರಿಕೆಯನ್ನೂ ಈ ಪೋಸ್ಟರ್‌ಗಳಲ್ಲಿ ಹಾಕಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೆ, ಪೋಸ್ಟರ್‌ನಲ್ಲಿ ವಯನಾಡ್ ಮುಂದಿನ ಅಮೇಥಿಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಘಟನೆ ಬೆಳಕಿಗೆ ಬಂದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಆ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಕೇರಳ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ವ್ಯಕ್ತಿಯೊಬ್ಬ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುತ್ತಿರುವುದನ್ನು ಪತ್ತೆಹಚ್ಚಿದ್ದು, ಆತನನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​​).