ಇನ್‌ಸ್ಟಾಗ್ರಾಂನಲ್ಲಿ ಸೋನಿಯಾ ಗಾಂಧಿ ಹಾಗೂ ಗಾಂಧಿ ಕುಟುಂಬದ ಇತಿಹಾಸವನ್ನು ಕೆದಕಿ ಗಂಭೀರ ಅನುಮಾನಗಳನ್ನು ಹೊರಹಾಕಿದ ಬಿಜೆಪಿ ಸಂಸದೆ ಕಂಗನಾ ರಣಾವತ್. 
ದೇಶ

ಗಾಂಧಿ ಕುಟುಂಬಗಳಲ್ಲಿನ ಸಾವು, ಸೋನಿಯಾ ಗಾಂಧಿ ಗುರಿಯಾಗಿಸಿ ಪೋಸ್ಟ್: ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಎಫ್​ಐಆರ್ | Kangana Ranaut

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆ ಮತ್ತು ಅವರ ಪುತ್ರರಾದ ಸಂಜಯ್ ಮತ್ತು ರಾಜೀವ್ ಗಾಂಧಿ ಅವರ ದುರಂತ ಸಾವುಗಳು, ಆ ಕುಟುಂಬಕ್ಕೆ ಓರ್ವ ವಿದೇಶಿ ನಿಗೂಢ ಮಹಿಳೆ ಬಂದ ಬಳಿಕವೇ ನಡೆದವು ಎಂದು ಸೋನಿಯಾ ಗಾಂಧಿ ಗುರಿಯಾಗಿಸಿ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ನ. 13) ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಶಿಮ್ಲಾ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆ ಮತ್ತು ಅವರ ಪುತ್ರರಾದ ಸಂಜಯ್ ಮತ್ತು ರಾಜೀವ್ ಗಾಂಧಿ ಅವರ ದುರಂತ ಸಾವುಗಳು, ಆ ಕುಟುಂಬಕ್ಕೆ ಓರ್ವ ವಿದೇಶಿ ನಿಗೂಢ ಮಹಿಳೆ ಬಂದ ಬಳಿಕವೇ ನಡೆದವು ಎಂದು ಸೋನಿಯಾ ಗಾಂಧಿ ಗುರಿಯಾಗಿಸಿ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ನ. 13) ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಶಿಮ್ಲಾ ನಿವಾಸಿ ಅತುಲ್ ಶರ್ಮಾ ಅವರ ದೂರಿನ ಮೇರೆಗೆ ಮಂಡಿ ಸಂಸದೆ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶರ್ಮಾ ಅವರು ಪೊಲೀಸ್ ಮಹಾನಿರ್ದೇಶಕ ಅಶೋಕ್ ತಿವಾರಿ ಅವರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ನ. 10ರಂದು ರನೌತ್ ತಮ್ಮ ವೈಯಕ್ತಿಕ ಖಾತೆಯ ಮೂಲಕ ಮಾಡಿದ ಪೋಸ್ಟ್‌ನಲ್ಲಿ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ದುರಂತ ಸಾವುಗಳಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆ ಶಿಮ್ಲಾದ ಬೊಯಿಲಿಯುಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023ರ ಸೆಕ್ಷನ್ 353 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು), 356 (ಮಾನನಷ್ಟ ಅಪರಾಧ) ಮತ್ತು 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್, ಶಿಮ್ಲಾದ ಕಸುಂಪ್ತಿ ಪ್ರದೇಶದ ನಿವಾಸಿ ಅತುಲ್ ಶರ್ಮಾ ಅವರು ನವೆಂಬರ್ 10 ರಂದು X ನಲ್ಲಿ ಮಾಡಿದ ಪೋಸ್ಟ್‌ಗಳಿಗಾಗಿ ರನೌತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ತಿವಾರಿ ಅವರಿಗೆ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ನ. 10 ರಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಂಗನಾ, ಸದ್ಯ ಎಲ್ಲರೂ, ಎನ್​ವಿಡಿಯಾ ಕಂಪನಿಯ ಹನಿಟ್ರ್ಯಾಪ್​ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾನು 'ಎಮರ್ಜೆನ್ಸಿ' ಸಿನಿಮಾ ಮಾಡುವಾಗ, ಗಾಂಧಿ ಪರಿವಾರದ ಬಗ್ಗೆ ಅಧ್ಯಯನ ನಡೆಸಿದಾಗ, ಒಬ್ಬ ವಿದೇಶಿ ಮಹಿಳೆ ಆಗಮನದಿಂದ ಏನೇನು ನಡೆದು ಹೋಯಿತು? ಈ ಮಹಿಳೆ ಆ ಮನೆಯೆ ಹೇಗೆ ಸೋಸೆಯಾದಳು ಎನ್ನುವುದು ನನಗೆ ಇಂದಿಗೂ ಅರ್ಥವಾಗಿಲ್ಲವೆಂದು ಸೋನಿಯಾ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೇ, ಆ ವಿದೇಶಿ ಮಹಿಳೆ ಪ್ರವೇಶವಾದ ಕೆಲವೇ ವರ್ಷದಲ್ಲಿ ಇಂದಿರಾ ಗಾಂಧಿ ಕೊಲೆಯಾಯಿತು. ಸಂಜಯ್​ ಗಾಂಧಿ ಹಾಗೂ ರಾಜೀವ್​ ಗಾಂಧಿ ಅಂತಹ ಉತ್ತರಾಧಿಕಾರಿಗಳ ದಿಢೀರ್​ ಸಾವು ಸಂಭವಿಸಿ, ಆ ಸ್ಥಾನಕ್ಕೆ ಸಹಾನುಭೂತಿಯ ಆಧಾರದ ಮೇಲೆ ಆಯ್ಕೆ ಮಾಡಬಹುದಾದ ಏಕೈಕ ವ್ಯಕ್ತಿ ಉಳಿದುಕೊಂಡರು. ಅವರೇ ಸೋನಿಯಾ ಗಾಂಧಿ ಎಂಬ ವಿದೇಶಿ ಪ್ರಜೆ ಎಂದು ಬರೆದುಕೊಂಡಿದ್ದರು (ಏಜೆನ್ಸೀಸ್).