Narendra Modi > ಪ್ರಧಾನಿ ನರೇಂದ್ರ ಮೋದಿ 
ದೇಶ

ಕಾಂಗ್ರೆಸ್ ಮಂಡಿಯೂರಿ ಶರಣಾದಾಗ ಹೋರಾಟ ಹುಟ್ಟುಹಾಕಿದ್ದು ಮುಖರ್ಜಿ!...ಬಂಗಾಳ ವಿಲೀನದ ಒಳಸಂಚು ಬಿಚ್ಚಿಟ್ಟ ಪ್ರಧಾನಿ ಮೋದಿ | Narendra Modi

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ಹೊಸ ಚೈತನ್ಯ ತುಂಬಿದೆ ಎಂದು ಶ್ಲಾಘಿಸಿದ್ದು, ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜ್ಯವು ದಶಕಗಳ ಕಾಲ ಅವನತಿಯತ್ತ ಸಾಗಿತ್ತು ಎಂದು ಟೀಕಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪಶ್ಚಿಮಬಂಗಾ ದಿವಸ್ (ಪಶ್ಚಿಮ ಬಂಗಾಳ ದಿನ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದ ಗಾಳಿಯಲ್ಲಿ ಈಗ ಹೊಸ ತಾಜಾತನವಿದೆ. ದಶಕಗಳ ಕಾಲದ ಸರಪಳಿಯಿಂದ ಬಂಗಾಳವು ಕೊನೆಗೂ ಮುಕ್ತಗೊಂಡಂತೆ ಭಾಸವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಒಂದು ವೋಟು ಮತ್ತು ಒಂದು ಚುನಾವಣೆ ಎಷ್ಟೆಲ್ಲಾ ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲದು ಎಂಬುದಕ್ಕೆ ಈಗಿನ ಬಂಗಾಳವೇ ಸಾಕ್ಷಿ ಎಂದ ಮೋದಿ, ಇದೇ ವೇಳೆ ರಾಜ್ಯದ ಜನತೆಗೆ ಪಶ್ಚಿಮ ಬಂಗಾಳ ದಿನದ ಶುಭಾಶಯಗಳನ್ನು ಕೋರಿದರು.

ಟಿಎಂಸಿ, ಎಡಪಕ್ಷಗಳ ವಿರುದ್ಧ ವಾಗ್ದಾಳಿ

ದಶಕಗಳ ಕಾಲ ಎಡಪಕ್ಷಗಳು ಮತ್ತು ಟಿಎಂಸಿ ಸರ್ಕಾರಗಳು ಮಾಡಿದ ಹಾನಿ ಹಾಗೂ ನ್ಯೂನತೆಗಳನ್ನು ಸರಿಪಡಿಸಲು ಈಗ ನಮ್ಮ ಸರ್ಕಾರ ಅತಿವೇಗದಲ್ಲಿ ಕೆಲಸ ಮಾಡುತ್ತಿದೆ. ಈ ಅಭಿವೃದ್ಧಿ ಕಾರ್ಯಗಳ ಭಾಗವಾಗಿ ನೂರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಮೋದಿ ತಿಳಿಸಿದರು. ಬಂಗಾಳವು ಸಾಕಷ್ಟು ರಕ್ತಪಾತವನ್ನು ಕಂಡಿದೆ, ತನ್ನವರ ಪ್ರಾಣಹಾನಿಯನ್ನು ಸಹಿಸಿಕೊಂಡಿದೆ. ಆದರೂ ತನ್ನ ಅಸ್ಮಿತೆ ಮತ್ತು ಹೆಮ್ಮೆಯನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸುವ ಹುನ್ನಾರಗಳು ನಡೆದಾಗ, ಆ ಎಲ್ಲಾ ಒಳಸಂಚುಗಳನ್ನು ಅಂತಿಮವಾಗಿ ವಿಫಲಗೊಳಿಸಲಾಯಿತು ಎಂದು ಪ್ರಧಾನಿ ಸ್ಮರಿಸಿದರು.

ಪಶ್ಚಿಮ ಬಂಗಾಳ ದಿನದ ವಿಶೇಷತೆ ಏನು..?

ಬಂಗಾಳವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಷಡ್ಯಂತ್ರದ ವಿರುದ್ಧ ನಡೆದ ಹೋರಾಟದ ಸಂಕೇತವೇ ಪಶ್ಚಿಮ ಬಂಗಾಳ ದಿನ. ಇದರ ಮಹತ್ವವನ್ನು ಇಂದಿನ ಪೀಳಿಗೆಗೆ ಪದೇ ಪದೇ ನೆನಪಿಸಬೇಕಿದೆ. ಅಂದು ಕಾಂಗ್ರೆಸ್ ಮಂಡಿಯೂರಿ ಶರಣಾದಾಗ, ಶ್ಯಾಮಪ್ರಸಾದ್ ಮುಖರ್ಜಿ ಅವರು ಈ ಐತಿಹಾಸಿಕ ಹೋರಾಟವನ್ನು ಹುಟ್ಟುಹಾಕಿದರು ಎಂದು ಬಣ್ಣಿಸಿದರು. ಸ್ವಾತಂತ್ರ್ಯದ ನಂತರವೂ ಪಶ್ಚಿಮ ಬಂಗಾಳ ದಿನದ ಇತಿಹಾಸವನ್ನು ಮರೆಮಾಚುವ ಯತ್ನಗಳು ನಡೆದವು. ಬಂಗಾಳವನ್ನು ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್, ನಂತರ ತುಷ್ಟೀಕರಣ ರಾಜಕಾರಣಕ್ಕೆ ಇಳಿಯಿತು ಎಂದು ಮೋದಿ ಕಿಡಿಕಾರಿದರು.
ಕಾಂಗ್ರೆಸ್, ಎಡರಂಗ ಮತ್ತು ಟಿಎಂಸಿ ನೇತೃತ್ವದ ಹಿಂದಿನ ಸರ್ಕಾರಗಳು ರಾಜ್ಯದಲ್ಲಿ ವಿದೇಶಿ ಸಿದ್ಧಾಂತಗಳನ್ನು ಹೇರುವ ಜೊತೆಗೆ ಅಕ್ರಮ ನುಸುಳುಕೋರರಿಗೆ ಅವಕಾಶ ನೀಡುವ ಮೂಲಕ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಿದವು ಎಂದು ಗಂಭೀರ ಆರೋಪ ಮಾಡಿದ ಪ್ರಧಾನಿ ಮೋದಿ, ಇತಿಹಾಸದಲ್ಲಿ ನಡೆದುಹೋದ ಇಂತಹ ತಪ್ಪುಗಳು ಭವಿಷ್ಯದಲ್ಲಿ ಮತ್ತೆಂದೂ ಮರುಕಳಿಸದಂತೆ ನಾವೀಗ ಒಟ್ಟಾಗಿ ಸಂಕಲ್ಪ ಮಾಡಬೇಕಿದೆ ಎಂದರು(ಏಜೆನ್ಸೀಸ್​​).